148 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಹೀಗೆ ಔಟಾಗಿದ್ದು ಇದೇ ಮೊದಲು..!
Australia vs England: ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಣ ಪ್ರತಿಷ್ಠಿತ ಆ್ಯಶಸ್ ಸರಣಿ ಶುರುವಾಗಿದೆ. ಪರ್ತ್ನಲ್ಲಿ ನಡೆಯುತ್ತಿರುವ ಈ ಸರಣಿಯ ಮೊದಲ ಮ್ಯಾಚ್ನಲ್ಲೇ ಹೊಸ ಇತಿಹಾಸ ನಿರ್ಮಾಣವಾಗಿದೆ. ಹೀಗೆ ಹೊಸ ಇತಿಹಾಸ ಸೃಷ್ಟಿಸಿದ್ದು ಮಿಚೆಲ್ ಸ್ಟಾರ್ಕ್ ಹಾಗೂ ಜೋಫ್ರಾ ಆರ್ಚರ್. ಇತಿಹಾಸ ನಿರ್ಮಾಣಕ್ಕೆ ಕಾರಣವಾಗಿದ್ದು ಮಾತ್ರ ಝಾಕ್ ಕ್ರಾಲಿ ಮತ್ತು ಜೇಕ್ ವೆದರಾಲ್ಡ್.
Updated on: Nov 22, 2025 | 10:56 AM

ಟೆಸ್ಟ್ ಕ್ರಿಕೆಟ್ ಶುರುವಾಗಿ ಬರೋಬ್ಬರಿ 148 ವರ್ಷಗಳಾಗಿವೆ. ಈ 148 ವರ್ಷಗಳಲ್ಲೇ ಇದೇ ಮೊದಲ ಬಾರಿಗೆ ಮೂರು ಇನಿಂಗ್ಸ್ನಲ್ಲೂ ಆರಂಭಿಕ ದಾಂಡಿಗರು ಸೊನ್ನೆ ಸುತ್ತಿದ್ದಾರೆ. ಅಂದರೆ ಟೆಸ್ಟ್ ಪಂದ್ಯದ ಮೊದಲ ಮೂರು ಇನಿಂಗ್ಸ್ನಲ್ಲಿ ಆರಂಭಿಕ ಜೊತೆಯಾಟ ಮೂಡಿಬರದೇ ಇರುವುದು ಇದೇ ಮೊದಲು.

ಪರ್ತ್ನಲ್ಲಿ ನಡೆಯುತ್ತಿರುವ ಆ್ಯಶಸ್ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡಕ್ಕೆ ಆಸ್ಟ್ರೇಲಿಯಾ ವೇಗಿ ಮಿಚೆಲ್ ಸ್ಟಾರ್ಕ್ ಆರಂಭಿಕ ಆಘಾತ ನೀಡಿದ್ದರು. ಈ ಪಂದ್ಯದ ಮೊದಲ ಓವರ್ನ 6ನೇ ಎಸೆತದಲ್ಲೇ ಝಾಕ್ ಕ್ರಾಲಿ (0) ವಿಕೆಟ್ ಕಬಳಿಸಿದ್ದರು.

ಇದಾದ ಬಳಿಕ ಆಸ್ಟ್ರೇಲಿಯಾ ತಂಡದ ಮೊದಲ ಇನಿಂಗ್ಸ್ನ ಮೊದಲ ಓವರ್ನಲ್ಲೇ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಆಘಾತ ನೀಡಿದ್ದರು. ಮೊದಲ ಓವರ್ನ 2ನೇ ಎಸೆತದಲ್ಲೇ ಜೇಕ್ ವೆದರಾಲ್ಡ್ (0) ವಿಕೆಟ್ ಕಬಳಿಸಿ ಆರ್ಚರ್ ಇಂಗ್ಲೆಂಡ್ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟಿದ್ದರು.

ಇನ್ನು ದ್ವಿತೀಯ ಇನಿಂಗ್ಸ್ನ ಮೊದಲ ಓವರ್ನಲ್ಲೇ ಆಂಗ್ಲ ಪಡೆಗೆ ಮಿಚೆಲ್ ಸ್ಟಾರ್ಕ್ ಬಿಗ್ ಶಾಕ್ ನೀಡಿದರು. ಈ ಬಾರಿ ಕೂಡ ಸ್ಟಾರ್ಕ್ ಬಲೆಗೆ ಬಿದ್ದದ್ದು ಝಾಕ್ ಕ್ರಾಲಿ. ದ್ವಿತೀಯ ಇನಿಂಗ್ಸ್ನ ಮೊದಲ ಓವರ್ನ 5ನೇ ಎಸೆತದಲ್ಲೇ ಕ್ರಾಲಿಯನ್ನು ಎಲ್ಬಿಡಬ್ಲ್ಯೂ ಮಾಡುವಲ್ಲಿ ಮಿಚೆಲ್ ಸ್ಟಾರ್ಕ್ ಯಶಸ್ವಿಯಾಗಿದ್ದಾರೆ.

ಅಂದರೆ ಈ ಪಂದ್ಯದ ಮೊದಲ ಮೂರು ಇನಿಂಗ್ಸ್ನಲ್ಲೂ ಆರಂಭಿಕ ಜೋಡಿಯ ಜೊತೆಯಾಟ ಬಂದಿರಲಿಲ್ಲ. ಮೂರು ಇನಿಂಗ್ಸ್ನಲ್ಲೂ ಓರ್ವ ಆರಂಭಿಕ ಶೂನ್ಯಕ್ಕೆ ಔಟಾಗಿದ್ದಾರೆ. ಹೀಗೆ ಪಂದ್ಯವೊಂದರ ಮೂರು ಇನಿಂಗ್ಸ್ಗಳಲ್ಲೂ ಒಂದೇ ರನ್ನಿನ ಆರಂಭಿಕ ಜೊತೆಯಾಟ ಮೂಡಿಬರದೇ ಟೆಸ್ಟ್ ಪಂದ್ಯ ನಡೆದಿರುವುದು ಇದೇ ಮೊದಲು.

ಕಳೆದ 148 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಯಾವತ್ತೂ ಮೂರು ಇನಿಂಗ್ಸ್ನಲ್ಲೂ ತಂಡದ ಸ್ಕೋರ್ ಖಾತೆ ತೆರೆಯುವ ಮುನ್ನವೇ ಆರಂಭಿಕ ದಾಂಡಿಗ ಔಟಾದ ನಿದರ್ಶನವಿಲ್ಲ. ಇದೀಗ ಝಾಕ್ ಕ್ರಾಲಿ (2 ಇನಿಂಗ್ಸ್ಗಳಲ್ಲೂ) ಹಾಗೂ ಜೇಕ್ ವೆದರಾಲ್ಡ್ ಸೊನ್ನೆ ಸುತ್ತುವ ಮುನ್ನವ ಟೆಸ್ಟ್ ಕ್ರಿಕೆಟ್ನಲ್ಲಿ ಹೊಸ ಇತಿಹಾಸವನ್ನು ನಿರ್ಮಿಸಿದ್ದಾರೆ.
