R Ashwin: ಅಶ್ವಿನ್ 500 ವಿಕೆಟ್ ಕಬಳಿಸಲು ಎಷ್ಟು ಎಸೆತಗಳನ್ನು ಎಸೆದಿದ್ದಾರೆ ಗೊತ್ತಾ?
Ravichandran Ashwin: ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ 1 ವಿಕೆಟ್ ಕಬಳಿಸುವುದರೊಂದಿಗೆ ರವಿಚಂದ್ರನ್ ಅಶ್ವಿನ್ ಟೆಸ್ಟ್ ಕ್ರಿಕೆಟ್ನಲ್ಲಿ 500 ವಿಕೆಟ್ಗಳನ್ನು ಪೂರೈಸಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಭಾರತದ 2ನೇ ಬೌಲರ್ ಹಾಗೂ ವಿಶ್ವದ 5ನೇ ಸ್ಪಿನ್ನರ್ ಎಂಬ ಹಿರಿಮೆಗೆ ಅಶ್ವಿನ್ ಪಾತ್ರರಾಗಿದ್ದಾರೆ. ಇದರೊಂದಿಗೆ ಇನ್ನೂ ಹಲವು ದಾಖಲೆಗಳನ್ನು ಅಶ್ವಿನ್ ತಮ್ಮದಾಗಿಸಿಕೊಂಡಿದ್ದಾರೆ.
Updated on: Feb 17, 2024 | 2:00 PM

ರಾಜ್ಕೋಟ್ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ 1 ವಿಕೆಟ್ ಕಬಳಿಸುವ ಮೂಲಕ ರವಿಚಂದ್ರನ್ ಅಶ್ವಿನ್ ಟೆಸ್ಟ್ ಕ್ರಿಕೆಟ್ನಲ್ಲಿ 500 ವಿಕೆಟ್ಗಳ ದಾಖಲೆ ಬರೆದಿದ್ದಾರೆ. ಈ ಸಾಧನೆ ಮಾಡಿದ 2ನೇ ಭಾರತೀಯ ಹಾಗೂ ವಿಶ್ವದ 9ನೇ ಬೌಲರ್ ಎಂಬ ಹೆಗ್ಗಳಿಕೆಗೂ ಅಶ್ವಿನ್ ಪಾತ್ರರಾಗಿದ್ದಾರೆ.

ವಿಶೇಷ ಎಂದರೆ ಟೆಸ್ಟ್ ಕ್ರಿಕೆಟ್ನಲ್ಲಿ ಅತೀ ವೇಗವಾಗಿ 500 ವಿಕೆಟ್ಗಳನ್ನು ಕಬಳಿಸಿದ ಬೌಲರ್ಗಳ ಪಟ್ಟಿಯಲ್ಲಿ ಅಶ್ವಿನ್ ದ್ವಿತೀಯ ಸ್ಥಾನದಲ್ಲಿದ್ದಾರೆ. ಅಂದರೆ ಅತೀ ಕಡಿಮೆ ಟೆಸ್ಟ್ ಪಂದ್ಯಗಳ ಮೂಲಕ ಹಾಗೂ ಅತೀ ಕಡಿಮೆ ಎಸೆತಗಳ ಮೂಲಕ 500 ವಿಕೆಟ್ಗಳ ಮೈಲುಗಲ್ಲು ದಾಟಿದ 2ನೇ ಬೌಲರ್ ಎನಿಸಿಕೊಂಡಿದ್ದಾರೆ. ಹಾಗಿದ್ರೆ ಟೆಸ್ಟ್ ಕ್ರಿಕೆಟ್ನಲ್ಲಿ 500 ವಿಕೆಟ್ ಕಬಳಿಸಲು ಅತೀ ಕಡಿಮೆ ಎಸೆತಗಳನ್ನು ಎಸೆದ ಬೌಲರ್ಗಳು ಯಾರೆಂದು ತಿಳಿಯೋಣ...

1- ಗ್ಲೆನ್ ಮೆಕ್ಗ್ರಾಥ್: ಟೆಸ್ಟ್ ಕ್ರಿಕೆಟ್ನಲ್ಲಿ ಅತೀ ಕಡಿಮೆ ಎಸೆತಗಳ ಮೂಲಕ 500 ವಿಕೆಟ್ಗಳನ್ನು ಕಬಳಿಸಿದ ವಿಶ್ವ ದಾಖಲೆ ಆಸ್ಟ್ರೇಲಿಯಾದ ಗ್ಲೆನ್ ಮೆಕ್ಗ್ರಾಥ್ ಹೆಸರಿನಲ್ಲಿದೆ. ಮೆಕ್ಗ್ರಾಥ್ ಕೇವಲ 25,528 ಎಸೆತಗಳ ಮೂಲಕ ಐನೂರು ವಿಕೆಟ್ಗಳ ಮೈಲುಗಲ್ಲನ್ನು ದಾಟಿದ್ದರು.

2- ರವಿಚಂದ್ರನ್ ಅಶ್ವಿನ್: ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವುದು ರವಿಚಂದ್ರನ್ ಅಶ್ವಿನ್. ಟೀಮ್ ಇಂಡಿಯಾ ಸ್ಪಿನ್ನರ್ 25,714 ಎಸೆತಗಳ ಮೂಲಕ 500 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಅತೀ ಕಡಿಮೆ ಎಸೆತಗಳಲ್ಲಿ 500 ವಿಕೆಟ್ಗಳನ್ನು ಪೂರೈಸಿದ ವಿಶ್ವದ 2ನೇ ಬೌಲರ್ ಎನಿಸಿಕೊಂಡಿದ್ದಾರೆ.

3- ಜೇಮ್ಸ್ ಅ್ಯಂಡರ್ಸನ್: ಇಂಗ್ಲೆಂಡ್ ವೇಗಿ ಜೇಮ್ಸ್ ಅ್ಯಂಡರ್ಸನ್ ಟೆಸ್ಟ್ ಕ್ರಿಕೆಟ್ನಲ್ಲಿ 500 ವಿಕೆಟ್ಗಳನ್ನು ಕಬಳಿಸಲು 28,150 ಎಸೆತಗಳನ್ನು ಎಸೆದಿದ್ದಾರೆ. ಈ ಮೂಲಕ ಈ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ.

4- ಸ್ಟುವರ್ಟ್ ಬ್ರಾಡ್: ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿ ಇಂಗ್ಲೆಂಡ್ನ ಮಾಜಿ ವೇಗಿ ಸ್ಟುವರ್ಟ್ ಬ್ರಾಡ್ ಇದ್ದಾರೆ. ಬ್ರಾಡಿ ಐನೂರು ವಿಕೆಟ್ಗಳ ಮೈಲುಗಲ್ಲನ್ನು ದಾಟಲು ಬರೋಬ್ಬರಿ 28,430 ಎಸೆತಗಳನ್ನು ಎಸೆದಿದ್ದರು.

5- ಕಾರ್ಟ್ನಿ ವಾಲ್ಷ್: ವೆಸ್ಟ್ ಇಂಡೀಸ್ ತಂಡದ ಮಾಜಿ ವೇಗಿ ಕಾರ್ಟ್ನಿ ವಾಲ್ಷ್ ಈ ಪಟ್ಟಿಯಲ್ಲಿ ಐದನೇ ಸ್ಥಾನ ಅಲಂಕರಿಸಿದ್ದಾರೆ. 28,833 ಎಸೆತಗಳ ಮೂಲಕ ವಾಲ್ಷ್ 500 ವಿಕೆಟ್ಗಳ ಸಾಧನೆ ಮಾಡಿದ್ದರು.

ಇನ್ನು ಅತೀ ಕಡಿಮೆ ಟೆಸ್ಟ್ ಪಂದ್ಯಗಳ ಮೂಲಕ 500 ವಿಕೆಟ್ಗಳನ್ನು ಕಬಳಿಸಿದ ವಿಶ್ವ ದಾಖಲೆ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಹೆಸರಿನಲ್ಲಿದೆ. 87 ಟೆಸ್ಟ್ ಪಂದ್ಯಗಳ ಮೂಲಕ ಮುರಳೀಧರನ್ ಈ ಸಾಧನೆ ಮಾಡಿದ್ದರು.

ಇದೀಗ 98 ಟೆಸ್ಟ್ ಪಂದ್ಯಗಳ ಮೂಲಕ 500 ವಿಕೆಟ್ಗಳ ಮೈಲುಗಲ್ಲನ್ನು ದಾಟಿರುವ ರವಿಚಂದ್ರನ್ ಅಶ್ವಿನ್ ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಅಲಂಕರಿಸಿದ್ದಾರೆ. ಈ ಮೂಲಕ ಅತೀ ಕಡಿಮೆ ಟೆಸ್ಟ್ ಪಂದ್ಯಗಳ ಮೂಲಕ ಐನೂರು ವಿಕೆಟ್ ಕಬಳಿಸಿದ 2ನೇ ಬೌಲರ್ ಎನಿಸಿಕೊಂಡಿದ್ದಾರೆ.




