
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ (WTC Final) ಕಣಕ್ಕಿಳಿಯುವುದರೊಂದಿಗೆ ಆಸ್ಟ್ರೇಲಿಯಾ ತಂಡವು ವಿಶ್ವ ದಾಖಲೆ ನಿರ್ಮಿಸಿದೆ. ಅದು ಕೂಡ ಭಾರತ ತಂಡದ ಹೆಸರಿನಲ್ಲಿದ್ದ ವಿಶೇಷ ದಾಖಲೆಯನ್ನು ಸರಿಗಟ್ಟುವ ಮೂಲಕ ಎಂಬುದು ವಿಶೇಷ. ಅಂದರೆ ಐಸಿಸಿ ಟೂರ್ನಿಯಲ್ಲಿ ಅತ್ಯಧಿಕ ಬಾರಿ ಫೈನಲ್ ಆಡಿದ ಹಿರಿಮೆಗೆ ಆಸ್ಟ್ರೇಲಿಯಾ ತಂಡ ಕೂಡ ಪಾತ್ರವಾಗಿದೆ.

ಇಂಗ್ಲೆಂಡ್ನ ಲಾರ್ಡ್ಸ್ ಮೈದಾನದಲ್ಲಿ ಸೌತ್ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ನಡೆಯುತ್ತಿದ್ದು, ಈ ಪಂದ್ಯದಲ್ಲಿ ಕಣಕ್ಕಿಳಿಯುವುದರೊಂದಿಗೆ ಐಸಿಸಿ ಟೂರ್ನಿಯಲ್ಲಿ ಅತ್ಯಧಿಕ ಫೈನಲ್ ಆಡಿದ ತಂಡಗಳ ಪಟ್ಟಿಯಲ್ಲಿ ಆಸೀಸ್ ಪಡೆ ಕೂಡ ಮೊದಲ ಸ್ಥಾನಕ್ಕೇರಿದೆ.

ಇದಕ್ಕೂ ಮುನ್ನ ಈ ಪಟ್ಟಿಯಲ್ಲಿ ಟೀಮ್ ಇಂಡಿಯಾ ಅಗ್ರಸ್ಥಾನದಲ್ಲಿತ್ತು. ಭಾರತ ತಂಡವು ಈವರೆಗೆ 14 ಬಾರಿ ಐಸಿಸಿ ಟೂರ್ನಿಯಲ್ಲಿ ಫೈನಲ್ ಪಂದ್ಯವಾಡಿದೆ. ಈ ವೇಳೆ 2 ಏಕದಿನ ವಿಶ್ವಕಪ್, 2 ಟಿ20 ವಿಶ್ವಕಪ್ ಹಾಗೂ 3 ಚಾಂಪಿಯನ್ಸ್ ಟ್ರೋಫಿಯಯನ್ನು ಭಾರತ ತಂಡ ಗೆದ್ದುಕೊಂಡಿದೆ.

ಇದೀಗ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯವಾಡುವ ಮೂಲಕ ಆಸ್ಟ್ರೇಲಿಯಾ ಕೂಡ ಐಸಿಸಿ ಟೂರ್ನಿಯಲ್ಲಿ 14 ಫೈನಲ್ ಪಂದ್ಯವಾಡಿದ ಸಾಧನೆ ಮಾಡಿದೆ. ಈ ಹದಿನಾಲ್ಕು ಫೈನಲ್ಗಳಲ್ಲಿ ಆಸ್ಟ್ರೇಲಿಯಾ ತಂಡವು 6 ಏಕದಿನ ವಿಶ್ವಕಪ್, 1 ಟಿ20 ವಿಶ್ವಕಪ್, 2 ಚಾಂಪಿಯನ್ಸ್ ಟ್ರೋಫಿ ಹಾಗೂ 1 ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಟ್ರೋಫಿ ಗೆದ್ದುಕೊಂಡಿದೆ.

ಅಂದರೆ 14 ಐಸಿಸಿ ಟೂರ್ನಿ ಫೈನಲ್ನಲ್ಲಿ ಆಸ್ಟ್ರೇಲಿಯಾ ತಂಡವು 10 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದು, ಈ ಬಾರಿ ಸೌತ್ ಆಫ್ರಿಕಾ ತಂಡವನ್ನು ಬಗ್ಗು ಬಡಿದರೆ ಆಸೀಸ್ ಪಡೆ 11 ಐಸಿಸಿ ಟ್ರೋಫಿಗಳನ್ನು ಎತ್ತಿ ಹಿಡಿದ ಏಕೈಕ ತಂಡವೆಂಬ ಖ್ಯಾತಿಯನ್ನು ತನ್ನದಾಗಿಸಿಕೊಳ್ಳಲಿದೆ.