ಸೌತ್ ಆಫ್ರಿಕಾದಲ್ಲಿ ನಡೆದ ಅಂಡರ್ 19 ಮಹಿಳಾ ಟಿ20 ವಿಶ್ವಕಪ್ನಲ್ಲಿ ಭಾರತ ತಂಡವು ಇಂಗ್ಲೆಂಡ್ ತಂಡವನ್ನು ಬಗ್ಗು ಬಡಿದು ವಿಶ್ವಕಪ್ ಗೆದ್ದುಕೊಂಡಿದೆ. ಈ ಗೆಲುವಿನ ಬೆನ್ನಲ್ಲೇ ವಿಶ್ವ ಚಾಂಪಿಯನ್ ಭಾರತ ತಂಡಕ್ಕೆ ಬಿಸಿಸಿಐ 5 ಕೋಟಿ ರೂ. ಪ್ರೋತ್ಸಾಹ ಧನ ಘೋಷಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಭಾರತೀಯ ಮಹಿಳಾ ಕ್ರಿಕೆಟ್ ಮುನ್ನುಗ್ಗುತ್ತಿದೆ. ಈ ವಿಶ್ವಕಪ್ ವಿಜಯೋತ್ಸವವು ಮಹಿಳಾ ಕ್ರಿಕೆಟ್‌ನ ಸ್ಥಾನಮಾನವನ್ನು ಮತ್ತಷ್ಟು ಎತ್ತರಕ್ಕೇರಿಸಿದೆ. ಈ ಸಂತೋಷದ ಘಳಿಗೆಯಲ್ಲಿ ಇಡೀ ತಂಡ ಮತ್ತು ಸಹಾಯಕ ಸಿಬ್ಬಂದಿಗೆ 5 ಕೋಟಿಯನ್ನು ಘೋಷಿಸುತ್ತಿರುವುದು ಸಂತೋಷದಾಯಕ ವಿಷಯ ಎಂದು ಟ್ವೀಟ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ವಿಶ್ವಕಪ್ ವಿಜೇತ ತಂಡವನ್ನು ಭಾರತ-ನ್ಯೂಜಿಲೆಂಡ್ ನಡುವಣ 3ನೇ ಟಿ20 ಪಂದ್ಯದ ವೇಳೆ ಗೌರವಿಸಲಾಗುವುದು ಎಂದು ತಿಳಿಸಿದ್ದಾರೆ.
ಸೌತ್ ಆಫ್ರಿಕಾದಲ್ಲಿ ನಡೆದ ಮಹಿಳಾ ಅಂಡರ್ 19 ವಿಶ್ವಕಪ್ನಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡವನ್ನು ಭಾರತೀಯ ಯುವತಿಯರು ಕೇವಲ 68 ರನ್ಗಳಿಗೆ ಆಲೌಟ್ ಮಾಡಿದ್ದರು.
ಅಲ್ಲದೆ ಸುಲಭ ಗುರಿ ಪಡೆದ ಟೀಮ್ ಇಂಡಿಯಾ 14 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 69 ರನ್ಗಳಿಸಿ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ಈ ಮೂಲಕ ಭಾರತೀಯ ತಂಡ ಮಹಿಳಾ ಕ್ರಿಕೆಟ್ನಲ್ಲಿ ಚೊಚ್ಚಲ ವಿಶ್ವಕಪ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.
ಇನ್ನು ಚೊಚ್ಚಲ ಅಂಡರ್-19 ಮಹಿಳಾ ಟಿ20 ವಿಶ್ವಕಪ್ ಗೆದ್ದ ಭಾರತ ತಂಡವನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಭಾರತೀಯ ಮಹಿಳಾ ಕ್ರೀಡಾಪಟುಗಳು ಉತ್ತಮ ಆಟವಾಡಿದ್ದಾರೆ. ಅವರ ಯಶಸ್ಸು ಮುಂದಿನ ಕ್ರಿಕೆಟಿಗರಿಗೆ ಸ್ಫೂರ್ತಿ ನೀಡುತ್ತದೆ. ವಿಜೇತ ತಂಡದ ಮುಂದಿನ ಪ್ರಯತ್ನಕ್ಕೆ ಶುಭವಾಗಲಿ ಎಂದು ಹಾರೈಸಿ ಅಭಿನಂದನೆ ಸಲ್ಲಿಸಿದ್ದಾರೆ.
ಟೀಮ್ ಇಂಡಿಯಾ WU19 ಪ್ಲೇಯಿಂಗ್ 11: ಶಫಾಲಿ ವರ್ಮಾ (ನಾಯಕಿ) , ಶ್ವೇತಾ ಸೆಹ್ರಾವತ್ , ಸೌಮ್ಯ ತಿವಾರಿ , ಗೊಂಗಡಿ ತ್ರಿಶಾ , ರಿಚಾ ಘೋಷ್ ( ವಿಕೆಟ್ ಕೀಪರ್ ) , ಹೃಷಿತಾ ಬಸು , ಟಿಟಾಸ್ ಸಾಧು , ಮನ್ನತ್ ಕಶ್ಯಪ್ , ಅರ್ಚನಾ ದೇವಿ , ಪಾರ್ಶವಿ ಚೋಪ್ರಾ , ಸೋನಮ್ ಯಾದವ್.
Published On - 8:44 pm, Sun, 29 January 23