ಟಿ20 ವಿಶ್ವಕಪ್ (T20 World Cup 2024) ಆರಂಭಕ್ಕೆ ಇನ್ನು ತಿಂಗಳುಗಳು ಮಾತ್ರ ಉಳಿದಿವೆ. ಈ ತಿಂಗಳುಗಳ ನಡುವೆ ಟೀಮ್ ಇಂಡಿಯಾ (Team India) ಮುಂದಿರುವುದು ಕೇವಲ 3 ಟಿ20 ಪಂದ್ಯಗಳು ಮಾತ್ರ. ಈ ಮೂರು ಪಂದ್ಯಗಳ ಮೂಲಕ ಟಿ20 ವಿಶ್ವಕಪ್ಗೆ ಬಲಿಷ್ಠ ಪಡೆಯನ್ನು ರೂಪಿಸುವುದು ಕಷ್ಟಸಾಧ್ಯ. ಹೀಗಾಗಿಯೇ ಬಿಸಿಸಿಐ ಇದೀಗ ಮಾಸ್ಟರ್ ಪ್ಲ್ಯಾನ್ವೊಂದನ್ನು ರೂಪಿಸಿದೆ.
ಈ ಪ್ಲ್ಯಾನ್ ಪ್ರಕಾರ, ಮುಂಬರುವ ಐಪಿಎಲ್ ವೇಳೆ 25 ರಿಂದ 30 ಭಾರತೀಯ ಆಟಗಾರರ ಮೇಲೆ ಬಿಸಿಸಿಐ ಆಯ್ಕೆ ಸಮಿತಿ ಕಣ್ಣಿಡಲಿದೆ. ಇವರಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ 16 ಆಟಗಾರರನ್ನು ಟಿ20 ವಿಶ್ವಕಪ್ಗಾಗಿ ಭಾರತ ತಂಡಕ್ಕೆ ಆಯ್ಕೆ ಮಾಡಲಿದ್ದಾರೆ.
ಅದರಂತೆ ಟಿ20 ವಿಶ್ವಕಪ್ಗಾಗಿ 25 ರಿಂದ 30 ಆಟಗಾರರ ಪಟ್ಟಿಯನ್ನು ಸಿದ್ಧಪಡಿಸಲಿದ್ದು, ಆ ಬಳಿಕ ಐಪಿಎಲ್ನಲ್ಲಿ ಈ ಆಟಗಾರರ ಪ್ರದರ್ಶನವನ್ನು ಅಳೆಯಲಿದ್ದಾರೆ. ಈ ವೇಳೆ ಅದ್ಭುತ ಪ್ರದರ್ಶನ ನೀಡಿದ ಆಟಗಾರರಿಗೆ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗುವುದು ಖಚಿತ ಎನ್ನಬಹುದು.
ಇನ್ನು ಬಿಸಿಸಿಐ ಆಯ್ಕೆ ಮಾಡಲಿರುವ 25 ರಿಂದ 30 ಆಟಗಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಹೆಸರು ಕೂಡ ಇರಲಿದೆ ಎಂದು ತಿಳಿದು ಬಂದಿದೆ. ಈ ಇಬ್ಬರು ದಿಗ್ಗಜರನ್ನು ಟಿ20 ತಂಡದ ಆಯ್ಕೆಗೆ ಪರಿಗಣಿಸಲಾಗುತ್ತಿದ್ದು, ಹೀಗಾಗಿ ಕಿಂಗ್ ಕೊಹ್ಲಿ ಹಾಗೂ ಹಿಟ್ಮ್ಯಾನ್ ಕಂಬ್ಯಾಕ್ ಅನ್ನು ನಿರೀಕ್ಷಿಸಬಹುದು.
ಈ ಬಾರಿಯ ಟಿ20 ವಿಶ್ವಕಪ್ ಜೂನ್ 4 ರಿಂದ ಶುರುವಾಗಲಿದೆ. ಅಂದರೆ ಐಪಿಎಲ್ ಮುಕ್ತಾಯದ ಬೆನ್ನಲ್ಲೇ ಯುಎಸ್ಎ-ವೆಸ್ಟ್ ಇಂಡೀಸ್ನಲ್ಲಿ ಟಿ20 ವಿಶ್ವಕಪ್ ಟೂರ್ನಿ ಆರಂಭವಾಗಲಿದೆ. ಹೀಗಾಗಿ ಫಾರ್ಮ್ನಲ್ಲಿರುವ ಆಟಗಾರರಿಗೆ ಮಣೆ ಹಾಕಲು ಬಿಸಿಸಿಐ ಆಯ್ಕೆ ಸಮಿತಿ ಐಪಿಎಲ್ ಪ್ರದರ್ಶನವನ್ನು ಮಾನದಂಡವಾಗಿ ಬಳಸಿಕೊಳ್ಳಲು ನಿರ್ಧರಿಸಿದೆ. ಅದರಂತೆ ಯಾರಿಗೆಲ್ಲಾ ಭಾರತ ತಂಡದಲ್ಲಿ ಸ್ಥಾನ ಸಿಗಲಿದೆ ಎಂಬುದನ್ನು ಕಾದು ನೋಡೋಣ.