ಟೀಂ ಇಂಡಿಯಾದ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಸದ್ಯ ಯುಪಿ ಟಿ20 ಲೀಗ್‌ನಲ್ಲಿ ಆಡುತ್ತಿದ್ದಾರೆ. ಈ ಲೀಗ್‌ನ 25 ನೇ ಪಂದ್ಯ ಶುಕ್ರವಾರ ಸೆಪ್ಟೆಂಬರ್ 6 ರಂದು ನಡೆಯಿತು. ಲಕ್ನೋ ಫಾಲ್ಕನ್ಸ್ ಮತ್ತು ಕಾಶಿ ರುದ್ರಾಸ್ ನಡುವಿನ ಈ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ತಮ್ಮ ಅತ್ಯುತ್ತಮ ಬೌಲಿಂಗ್ ಮೂಲಕ ಅಭಿಮಾನಿಗಳ ಮನ ಗೆದ್ದರು.
ಲಕ್ನೋ ಫಾಲ್ಕನ್ಸ್ ತಂಡದ ಪರ ಆಡುತ್ತಿರುವ ಭುವಿ ತನ್ನ ಮಾರಕ ಬೌಲಿಂಗ್ನಿಂದ ಎದುರಾಳಿ ತಂಡದ ಬ್ಯಾಟ್ಸ್ಮನ್ಗಳ ಬೆವರಿಳಿಸಿದರು. ಈ ಪಂದ್ಯದಲ್ಲಿ 4 ಓವರ್ ಬೌಲ್ ಮಾಡಿದ ಅವರು ಕೇವಲ 4 ರನ್ ನೀಡಿದರು. ಅವರ 24 ಎಸೆತಗಳಲ್ಲಿ 20 ಎಸೆತಗಳಲ್ಲಿ ಡಾಟ್ ಬಾಲ್ಗಳಾಗಿದ್ದವು. ಅಂದರೆ ಈ 20 ಎಸೆತಗಳಲ್ಲಿ ಭುವಿ ಯಾವುದೇ ರನ್ ಬಿಟ್ಟುಕೊಡಲಿಲ್ಲ. ಉಳಿದ 4 ಎಸೆತಗಳಲ್ಲಿ ತಲಾ ಒಂದು ರನ್ ಬಂದವು.
ಭುವನೇಶ್ವರ್ ಕುಮಾರ್ ಅವರ ಈ ಬೌಲಿಂಗ್ ಬಲದಿಂದ ಲಕ್ನೋ ಫಾಲ್ಕನ್ಸ್ ತಂಡವು ಕಾಶಿ ರುದ್ರಾಸ್ ತಂಡವನ್ನು ಕೇವಲ 111 ರನ್‌ಗಳಿಗೆ ಕಟ್ಟಿಹಾಕಿತು. ಭುವನೇಶ್ವರ್ ಕುಮಾರ್ ಒಂದೂ ವಿಕೆಟ್ ಪಡೆಯದಿದ್ದರೂ ಅವರ ಬೌಲಿಂಗ್ ಕಾಶಿ ತಂಡದ ಬ್ಯಾಟ್ಸ್ಮನ್ಗಳ ಮೇಲೆ ಒತ್ತಡ ಹೇರಿತು. ಈ ಒತ್ತಡದಲ್ಲಿ, ಅವರು ಇತರ ಬೌಲರ್‌ಗಳ ವಿರುದ್ಧ ರನ್ ಗಳಿಸಲು ಪ್ರಯತ್ನಿಸಿ, ವಿಕೆಟ್ ಕಳೆದುಕೊಂಡರು. 112 ರನ್‌ಗಳ ಸುಲಭ ಗುರಿಯನ್ನು ಲಕ್ನೋ ತಂಡ 13.5 ಓವರ್‌ಗಳಲ್ಲಿ ಕೇವಲ ಒಂದು ವಿಕೆಟ್ ಕಳೆದುಕೊಂಡು ಬೆನ್ನಟ್ಟಿತು.
ಈ ಗೆಲುವಿನೊಂದಿಗೆ ಲಕ್ನೋ ತಂಡ ಯುಪಿ ಟಿ20 ಲೀಗ್‌ನ ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿದೆ. ಲಕ್ನೋ ಆಡಿರುವ 9 ಪಂದ್ಯಗಳಲ್ಲಿ 5ರಲ್ಲಿ ಗೆಲುವು ಸಾಧಿಸಿದ್ದು, ತಂಡವು 10 ಅಂಕಗಳನ್ನು ಹೊಂದಿದೆ. ತಂಡದ ನೆಟ್ ರನ್ ರೇಟ್ ಕೂಡ ಉತ್ತಮವಾಗಿದ್ದು, ಪ್ಲೇಆಫ್‌ಗೆ ಪ್ರಬಲ ಸ್ಪರ್ಧಿಯಾಗಿದೆ. ಆದರೆ ರಿಂಕು ಸಿಂಗ್ ನಾಯಕತ್ವದ ಮೀರತ್ ಮೇವರಿಕ್ಸ್ 14 ಅಂಕಗಳೊಂದಿಗೆ ಲೀಗ್‌ನಲ್ಲಿ ಅಗ್ರಸ್ಥಾನದಲ್ಲಿದೆ.
ಸೆಪ್ಟೆಂಬರ್ 5 ರಂದು ಯುಪಿ ಟಿ20 ಲೀಗ್‌ನಲ್ಲಿ ಲಕ್ನೋ ತಂಡ ಗೋರಖ್‌ಪುರ ವಿರುದ್ಧ ಆಡಿತ್ತು. ಈ ಪಂದ್ಯದಲ್ಲೂ ಭುವನೇಶ್ವರ್ ಅತ್ಯುತ್ತಮ ಬೌಲಿಂಗ್ ಮಾಡಿದ್ದರು. ಅವರು 3 ಓವರ್‌ಗಳನ್ನು ಎಸೆದು, ಅದರಲ್ಲಿ ಕೇವಲ 5 ರನ್‌ಗಳನ್ನು ನೀಡಿದರು.
34 ವರ್ಷದ ಭುವನೇಶ್ವರ್ ಕುಮಾರ್ ಸುಮಾರು 2 ವರ್ಷಗಳಿಂದ ಟೀಂ ಇಂಡಿಯಾದಿಂದ ಹೊರಗುಳಿದಿದ್ದಾರೆ. 2022 ರ ನವೆಂಬರ್ನಲ್ಲಿ ಭಾರತದ ಪರ ತಮ್ಮ ಕೊನೆಯ ಪಂದ್ಯವನ್ನು ಆಡಿದ್ದ ಭುವಿ, ಈ ಟಿ20 ಪಂದ್ಯದಲ್ಲಿ 4 ಓವರ್‌ಗಳಲ್ಲಿ 35 ರನ್ ನೀಡಿ ಯಾವುದೇ ವಿಕೆಟ್ ಪಡೆಯಲು ಸಾಧ್ಯವಾಗಿರಲಿಲ್ಲ. ಭಾರತದ ಪರ ಇದುವರೆಗೆ 87 ಪಂದ್ಯಗಳನ್ನಾಡಿರುವ ಭುವಿ 1791 ಎಸೆತಗಳನ್ನು ಬೌಲ್ ಮಾಡಿ 2079 ರನ್ ನೀಡಿ 90 ವಿಕೆಟ್ ಪಡೆದಿದ್ದಾರೆ.
ಇನ್ನು ಭಾರತ ಏಕದಿನ ತಂಡದಲ್ಲಿ ಕೊನೆಯ ಬಾರಿಗೆ 2022 ರ ಜನವರಿಯಲ್ಲಿ ಕಾಣಿಸಿಕೊಂಡಿದ್ದ ಭುವನೇಶ್ವರ್, ಜನವರಿ 2018 ರಲ್ಲಿ ತಮ್ಮ ಕೊನೆಯ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯವನ್ನು ಆಡಿದರು. ಐಪಿಎಲ್‌ನ ಕಳೆದ 3 ಸೀಸನ್‌ಗಳಲ್ಲಿಯೂ ಭುವಿಗೆ ವಿಶೇಷ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಹೀಗಾಗಿ ಭುವಿ ಮತ್ತೊಮ್ಮೆ ಭಾರತ ತಂಡದಲ್ಲಿ ಕಾಣಿಸಿಕೊಳ್ಳುವುದು ಅಸಾಧ್ಯ ಎನ್ನಲಾಗುತ್ತಿದೆ.
Published On - 3:38 pm, Sat, 7 September 24