- Kannada News Photo gallery Cricket photos End of the road for Virat Kohli and Rohit Sharma in T20s Kannada News zp
Virat Kohli – Rohit Sharma: ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ ಟಿ20 ಕೆರಿಯರ್ ಅಂತ್ಯ?
Rohit Sharma - Virat Kohli: ಶ್ರೀಲಂಕಾ ವಿರುದ್ಧದ ಏಕದಿನ ಸರಣಿ ಆಡುತ್ತಿರುವ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯನ್ನು ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಿಂದ ಕೈ ಬಿಡಲಾಗಿದೆ.
Updated on: Jan 14, 2023 | 8:30 PM

ನ್ಯೂಜಿಲೆಂಡ್ ವಿರುದ್ಧದ ಮುಂಬರುವ ಟಿ20 ಸರಣಿಗಾಗಿ ಟೀಮ್ ಇಂಡಿಯಾವನ್ನು ಘೋಷಿಸಲಾಗಿದೆ. ನಿರೀಕ್ಷೆಯಂತೆ ಈ ಬಾರಿ ಕೂಡ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಹೆಸರು ಟಿ20 ತಂಡದಲ್ಲಿ ಕಾಣಿಸಿಕೊಂಡಿಲ್ಲ. ಇದಕ್ಕೂ ಮುನ್ನ ಶ್ರೀಲಂಕಾ ವಿರುದ್ಧದ ಟಿ20 ಸರಣಿಗೂ ಈ ಇಬ್ಬರು ಆಟಗಾರರನ್ನು ಆಯ್ಕೆ ಮಾಡಿರಲಿಲ್ಲ. ಇದಾಗ್ಯೂ ಏಕದಿನ ಸರಣಿಗಳಲ್ಲಿ ಹಿಟ್ಮ್ಯಾನ್ ಹಾಗೂ ಕಿಂಗ್ ಕೊಹ್ಲಿ ಕಾಣಿಸಿಕೊಂಡಿದ್ದರು. ಅಂದರೆ ಈ ಇಬ್ಬರು ಆಟಗಾರರು ವಿಶ್ರಾಂತಿಯ ಕಾರಣ ಹೊರಗುಳಿದಿರಲಿಲ್ಲ ಎಂಬುದು ಸ್ಪಷ್ಟ.

ಇದೀಗ ಶ್ರೀಲಂಕಾ ವಿರುದ್ಧದ ಏಕದಿನ ಸರಣಿ ಆಡುತ್ತಿರುವ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯನ್ನು ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಿಂದ ಕೈ ಬಿಡಲಾಗಿದೆ. ಆದರೆ ಈ ಇಬ್ಬರು ಆಟಗಾರರು ತಂಡದಿಂದ ಹೊರಗುಳಿದಿರುವ ಬಗ್ಗೆ ಬಿಸಿಸಿಐ ನಿರ್ದಿಷ್ಟ ಕಾರಣ ತಿಳಿಸಿಲ್ಲ. ಇದರರ್ಥ ಆಯ್ಕೆಗೆ ಪರಿಗಣಿಸಲಾಗಿಲ್ಲ ಎಂಬುದಾಗಿದೆ. ಏಕೆಂದರೆ ಕೆಎಲ್ ರಾಹುಲ್ ಹಾಗೂ ಅಕ್ಷರ್ ಪಟೇಲ್ ಅವರು ವೈಯುಕ್ತಿಕ ಕಾರಣಗಳಿಂದಾಗಿ ನ್ಯೂಜಿಲೆಂಡ್ ಸರಣಿಗಳಿಂದ ಹೊರಗುಳಿದಿದ್ದಾರೆ ಎಂದು ಬಿಸಿಸಿಐ ಇದೇ ವೇಳೆ ಸ್ಪಷ್ಟಪಡಿಸಿದೆ.

ಇತ್ತ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರನ್ನು ಟಿ20 ತಂಡಕ್ಕೆ ಆಯ್ಕೆ ಮಾಡದೇ ಬಿಸಿಸಿಐ ಜಾಣ ಮೌನಕ್ಕೆ ಶರಣಾಗಿದೆ. ಇದರೊಂದಿಗೆ ಚುಟುಕು ಕ್ರಿಕೆಟ್ನಲ್ಲಿ ಇಬ್ಬರು ದಿಗ್ಗಜರ ಯುಗಾಂತ್ಯವಾಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಏಕೆಂದರೆ ಬಿಸಿಸಿಐ ಮುಂಬರುವ ಟಿ20 ವಿಶ್ವಕಪ್ ಅನ್ನು ಗಮನದಲ್ಲಿರಿಸಿ ಯುವ ಪಡೆಯನ್ನು ಆಯ್ಕೆ ಮಾಡುತ್ತಿದೆ. ಇತ್ತ 35 ವರ್ಷ ರೋಹಿತ್ ಶರ್ಮಾ 2024 ರ ಟಿ20 ವಿಶ್ವಕಪ್ ಆಡುವುದಿಲ್ಲ ಎಂದೇ ಹೇಳಬಹುದು. ಇನ್ನು 34 ವರ್ಷ ವಿರಾಟ್ ಕೊಹ್ಲಿ ಕೂಡ ಅನುಮಾನ. ಹೀಗಾಗಿಯೇ ಈ ಇಬ್ಬರನ್ನು ಸತತ ಸರಣಿಗಳಿಂದ ಕೈ ಬಿಡಲಾಗಿದೆ.

ಈ ಬಗ್ಗೆ ಬಿಸಿಸಿಐ ಕೂಡ ಇಬ್ಬರು ಆಟಗಾರರೊಂದಿಗೆ ಮಾತುಕತೆ ನಡೆಸಿದೆ ಎಂದು ಹೇಳಲಾಗುತ್ತಿದೆ. ಇದನ್ನು ಪುಷ್ಠೀಕರಿಸುವಂತೆ ಇತ್ತೀಚೆಗೆ ರೋಹಿತ್ ಶರ್ಮಾ ಕೂಡ ಹೇಳಿಕೆ ನೀಡಿದ್ದರು. ಟಿ20 ಕ್ರಿಕೆಟ್ಗೆ ವಿದಾಯ ಹೇಳುತ್ತೀರಾ ಎಂಬ ಪ್ರಶ್ನೆಗೆ ಹಿಟ್ಮ್ಯಾನ್ ಮಾರ್ಮಿಕವಾಗಿ ಉತ್ತರಿಸಿದ್ದರು.

ನಾನು ಟಿ20 ಕ್ರಿಕೆಟ್ನಿಂದ ಹಿಂದೆ ಸರಿಯಲು ನಿರ್ಧರಿಸಿಲ್ಲ. ಐಪಿಎಲ್ ನಂತರ ಏನಾಗುತ್ತದೆ ಎಂಬುದನ್ನು ಕಾದು ನೋಡೋಣ ಎಂದು ರೋಹಿತ್ ಶರ್ಮಾ ಹೇಳಿದ್ದರು. ಇಲ್ಲಿ ಐಪಿಎಲ್ ಅನ್ನು ಉಲ್ಲೇಖಿಸಿ ಹಿಟ್ಮ್ಯಾನ್ ಟಿ20 ತಂಡಕ್ಕೆ ಕಂಬ್ಯಾಕ್ ಮಾಡುತ್ತೇನೆ ಎಂದು ಪರೋಕ್ಷವಾಗಿ ತಿಳಿಸಿದ್ದರು. ಅಂದರೆ ನ್ಯೂಜಿಲೆಂಡ್ ವಿರುದ್ಧದ ಸರಣಿಗೂ ಮುನ್ನವೇ ಟಿ20 ತಂಡದಲ್ಲಿ ಅವಕಾಶ ಸಿಗುವುದಿಲ್ಲ ಎಂಬುದು ರೋಹಿತ್ ಶರ್ಮಾಗೆ ತಿಳಿದಿತ್ತು. ಹೀಗಾಗಿಯೇ ಐಪಿಎಲ್ ಬಳಿಕ ನೋಡೋಣ ಎಂದಿದ್ದರು.

ಇದೀಗ ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ತಂಡ ಘೋಷಣೆಯಾಗಿದೆ. ಈ ಸರಣಿಯ ಬಳಿಕ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಆಡಲಿದೆ. ಇದರ ನಂತರ ಐಪಿಎಲ್ ಶುರುವಾಗಲಿದೆ. ಇದೇ ಕಾರಣದಿಂದಾಗಿ ಐಪಿಎಲ್ ಬಳಿಕ ನೋಡೋಣ ಎಂದು ಹಿಟ್ಮ್ಯಾನ್ ಹೇಳಿದ್ದಾರೆ. ಅಂದರೆ ಟಿ20 ತಂಡಕ್ಕೆ ಮರಳಲು ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯ ಮುಂದಿರುವ ಏಕೈಕ ಆಯ್ಕೆ ಐಪಿಎಲ್.

ಐಪಿಎಲ್ನಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಮತ್ತೆ ಟಿ20 ತಂಡದಲ್ಲಿ ಅವಕಾಶ ಪಡೆಯುವ ವಿಶ್ವಾಸದಲ್ಲಿದ್ದಾರೆ ರೋಹಿತ್ ಶರ್ಮಾ. ಹೀಗಾಗಿಯೇ ಈ ಬಾರಿಯ ಐಪಿಎಲ್ನಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ವಿಫಲರಾದರೆ ಇಬ್ಬರು ದಿಗ್ಗಜರ ಟೀಮ್ ಇಂಡಿಯಾ ಟಿ20 ಕೆರಿಯರ್ ಖತಂ ಎಂದೇ ವಿಶ್ಲೇಷಿಸಲಾಗುತ್ತಿದೆ.

ಟೀಮ್ ಇಂಡಿಯಾ ಟಿ20 ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ಶುಭಮನ್ ಗಿಲ್, ಇಶಾನ್ ಕಿಶನ್, ಪೃಥ್ವಿ ಶಾ, ಸೂರ್ಯಕುಮಾರ್ ಯಾದವ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರುತುರಾಜ್ ಗಾಯಕ್ವಾಡ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಶಿವಂ ಮಾವಿ, ಉಮ್ರಾನ್ ಮಲಿಕ್, ಮುಖೇಶ್ ಕುಮಾರ್.
