Updated on: Jul 18, 2022 | 4:59 PM
ಇಂಗ್ಲೆಂಡ್ ವಿರುದ್ದ 3ನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಭರ್ಜರಿ ಪ್ರದರ್ಶನ ನೀಡಿದ್ದರು. ಬೌಲಿಂಗ್ ನಲ್ಲಿ ಮಿಂಚಿದ್ದ ಪಾಂಡ್ಯ, ಆ ಬಳಿಕ ಬ್ಯಾಟಿಂಗ್ ನಲ್ಲಿ ಅಬ್ಬರಿಸಿದರು. ಈ ಮೂಲಕ ಟೀಮ್ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ವಿಶೇಷ ಎಂದರೆ ಈ ಭರ್ಜರಿ ಪ್ರದರ್ಶನದ ಮೂಲಕ ಹಾರ್ದಿಕ್ ಪಾಂಡ್ಯ ವಿಶೇಷ ದಾಖಲೆಯನ್ನು ಕೂಡ ಬರೆದಿದ್ದಾರೆ. ಹೌದು, ಇಂಗ್ಲೆಂಡ್ ವಿರುದ್ದದ ಪಾಂಡ್ಯ 71 ರನ್ಗಳ ಅರ್ಧಶತಕ ಬಾರಿಸಿದ್ದಲ್ಲದೆ, 4 ವಿಕೆಟ್ ಗಳನ್ನು ಕೂಡ ಪಡೆದಿದ್ದರು. ಈ ಮೂಲಕ ಏಕದಿನ ಕ್ರಿಕೆಟ್ ನಲ್ಲಿ ಟೀಮ್ ಇಂಡಿಯಾ ಪರ ಅರ್ಧಶತಕ ಸಿಡಿಸಿ 4 ವಿಕೆಟ್ ಪಡೆದ 7ನೇ ಆಟಗಾರ ಎನಿಸಿಕೊಂಡಿದ್ದರು.
ಅದರಲ್ಲೂ ಟೀಮ್ ಇಂಡಿಯಾ ಪರ ಮೂರು ಫಾರ್ಮಾಟ್ ನಲ್ಲೂ ಅರ್ಧಶತಕ ಬಾರಿಸಿ 4 ವಿಕೆಟ್ ಪಡೆದ ಭಾರತದ ಏಕೈಕ ಆಲ್ ರೌಂಡರ್ ಎಂಬ ಅಪರೂಪದ ದಾಖಲೆಯನ್ನು ಕೂಡ ಪಾಂಡ್ಯ ಬರೆದಿದ್ದಾರೆ.
ಅಂದರೆ ಈ ಹಿಂದೆ 2018 ರಲ್ಲಿ ಇಂಗ್ಲೆಂಡ್ ವಿರುದ್ದ ಟೆಸ್ಟ್ ಪಂದ್ಯದಲ್ಲಿ 52 ರನ್ ಬಾರಿಸಿ 5 ವಿಕೆಟ್ ಕಬಳಿಸಿದ್ದರು. ಹಾಗೆಯೇ ಇಂಗ್ಲೆಂಡ್ ವಿರುದ್ದದ ಟಿ20 ಸರಣಿಯಲ್ಲಿ ಪಾಂಡ್ಯ 4 ವಿಕೆಟ್ ಹಾಗೂ ಅರ್ಧಶತಕ ಬಾರಿಸಿದ್ದರು.ಇದೀಗ ಏಕದಿನ ಕ್ರಿಕೆಟ್ ನಲ್ಲೂ ಅರ್ಧಶತಕ ಬಾರಿಸಿ 4 ವಿಕೆಟ್ ಪಡೆದಿದ್ದಾರೆ.
ಹೀಗೆ ಮೂರು ಫಾರ್ಮಾಟ್ ನಲ್ಲೂ ಇಂತಹದೊಂದು ಅಪರೂಪದ ಸಾಧನೆ ಮಾಡಿದ ಭಾರತದ ಏಕೈಕ ಆಟಗಾರನಾಗಿ ಹಾರ್ದಿಕ್ ಪಾಂಡ್ಯ ಹೊರಹೊಮ್ಮಿದ್ದಾರೆ. ಇನ್ನು ಇಂಗ್ಲೆಂಡ್ ವಿರುದ್ದ ಭರ್ಜರಿ ಆಲ್ ರೌಂಡರ್ ಪ್ರದರ್ಶನ ನೀಡುವ ಮೂಲಕ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಕೂಡ ಪಾಂಡ್ಯ ತಮ್ಮದಾಗಿಸಿಕೊಂಡಿದ್ದಾರೆ.