- Kannada News Photo gallery Cricket photos Faf du Plessis now holds the record for the most T20 centuries as captain
ಶತಕಗಳ ಮೇಲೆ ಶತಕ… ಫಾಫ್ ಡುಪ್ಲೆಸಿಸ್ ಹೊಸ ವಿಶ್ವ ದಾಖಲೆ
Faf du Plessis World Record: ಮೇಜರ್ ಲೀಗ್ ಕ್ರಿಕೆಟ್ ಟಿ20 ಟೂರ್ನಿಯಲ್ಲಿ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿ ಕಣಕ್ಕಿಳಿಯುತ್ತಿರುವ ಫಾಫ್ ಡುಪ್ಲೆಸಿಸ್ ದಾಖಲೆಗಳ ಮೇಲೆ ದಾಖಲೆ ಬರೆದಿದ್ದಾರೆ. ಅದು ಕೂಡ ಶತಕಗಳ ಮೇಲೆ ಶತಕ ಸಿಡಿಸುವ ಮೂಲಕ ಎಂಬುದು ವಿಶೇಷ.
Updated on: Jul 01, 2025 | 8:30 AM

ಅಮೆರಿಕದಲ್ಲಿ ನಡೆಯುತ್ತಿರುವ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಫಾಫ್ ಡುಪ್ಲೆಸಿಸ್ (Faf du Plessis) ಬ್ಯಾಕ್ ಟು ಬ್ಯಾಕ್ ಸೆಂಚುರಿ ಸಿಡಿಸಿದ್ದಾರೆ. ಕಳೆದ ಪಂದ್ಯದಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ತಂಡದ ವಿರುದ್ಧ ಶತಕ ಬಾರಿಸಿದ್ದ ಡುಪ್ಲೆಸಿಸ್, ಇದೀಗ ಎಂಐ ನ್ಯೂಯಾರ್ಕ್ ವಿರುದ್ಧ ಕೂಡ ಮೂರಂಕಿ ಗಳಿಸಿದ್ದಾರೆ.

ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ಸೆಂಚುರಿ ಸಿಡಿಸಿದ ನಾಯಕ ಎಂಬ ವಿಶ್ವ ದಾಖಲೆಯನ್ನು ಫಾಫ್ ಡುಪ್ಲೆಸಿಸ್ ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ಭರ್ಜರಿ ದಾಖಲೆ ಪಾಕಿಸ್ತಾನದ ಬಾಬರ್ ಆಝಂ ಹೆಸರಿನಲ್ಲಿತ್ತು.

ಬಾಬರ್ ಆಝಂ ಟಿ20 ಕ್ರಿಕೆಟ್ ನಲ್ಲಿ ನಾಯಕನಾಗಿ ಒಟ್ಟು 137 ಇನಿಂಗ್ಸ್ ಆಡಿದ್ದು, ಈ ವೇಳೆ 7 ಶತಕ ಬಾರಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು. ಇದೀಗ ಈ ದಾಖಲೆಯನ್ನು ಡುಪ್ಲೆಸಿಸ್ ಉಡೀಸ್ ಮಾಡಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ 200 ಪಂದ್ಯಗಳಲ್ಲಿ ನಾಯಕನಾಗಿ ಕಣಕ್ಕಿಳಿದಿರುವ ಫಾಫ್ ಡುಪ್ಲೆಸಿಸ್ ಈವರೆಗೆ 8 ಶತಕ ಸಿಡಿಸಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ ನಲ್ಲಿ ಅತ್ಯಧಿಕ ಸೆಂಚುರಿ ಸಿಡಿಸಿದ ಕ್ಯಾಪ್ಟನ್ ಎಂಬ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಅಷ್ಟೇ ಅಲ್ಲದೆ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲೂ ಅತೀ ಹೆಚ್ಚು ಶತಕ ಬಾರಿಸಿದ ಬ್ಯಾಟರ್ ಗಳ ಪಟ್ಟಿಯಲ್ಲೂ ಫಾಫ್ ಡುಪ್ಲೆಸಿಸ್ ಅಗ್ರಸ್ಥಾನಕ್ಕೇರಿದ್ದಾರೆ. ಎಂಎಲ್ ಸಿ ಲೀಗ್ ಡುಪ್ಲೆಸಿಸ್ ಈವರೆಗೆ 3 ಸೆಂಚುರಿ ಬಾರಿಸಿದ್ದು, ಈ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಇದರ ಜೊತೆಗೆ ಟಿ20 ಕ್ರಿಕೆಟ್ ಇತಿಹಾಸದಲ್ಲೇ 40 ವರ್ಷದ ಬಳಿಕ 2 ಶತಕ ಸಿಡಿಸಿದ ಏಕೈಕ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ಸಹ ಫಾಫ್ ಡುಪ್ಲೆಸಿಸ್ ಬರೆದಿದ್ದಾರೆ. ಒಟ್ಟಿನಲ್ಲಿ ಹಿರಿ ವಯಸ್ಸಿನಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಫಾಫ್ ಡುಪ್ಲೆಸಿಸ್ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿರುವುದು.









