- Kannada News Photo gallery Cricket photos Farhan Ahmed, youngest player to take 5 for in County Championship
ಚೊಚ್ಚಲ ಪಂದ್ಯದಲ್ಲೇ 7 ವಿಕೆಟ್ ಉರುಳಿಸಿ ದಾಖಲೆ ಬರೆದ 16 ವರ್ಷದ ಯುವ ಸ್ಪಿನ್ನರ್
County Championship 2024: ಪ್ರಸ್ತುತ ನಡೆಯುತ್ತಿರುವ ಕೌಂಟಿ ಚಾಂಪಿಯನ್ಶಿಪ್ನ 53ನೇ ಪಂದ್ಯದ ಮೂಲಕ ಯುವ ಸ್ಪಿನ್ನರ್ ಫರ್ಹಾನ್ ಅಹ್ಮದ್ ಹೊಸ ದಾಖಲೆ ಬರೆದಿದ್ದಾರೆ. ಅದು ಕೂಡ ಅನುಭವಿ ಬ್ಯಾಟರ್ಗಳನ್ನು ಪೆವಿಲಿಯನ್ಗಟ್ಟುವ ಮೂಲಕ ಎಂಬುದು ವಿಶೇಷ. ಈ ಮೂಲಕ ಅಣ್ಣನ ಹಾದಿಯಲ್ಲೇ ಫರ್ಹಾನ್ ಕೂಡ ಹೊಸ ಹೆಜ್ಜೆಯನ್ನಿಟ್ಟಿದ್ದಾರೆ.
Updated on: Sep 01, 2024 | 2:33 PM

ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಕೌಂಟಿ ಚಾಂಪಿಯನ್ಶಿಪ್ನಲ್ಲಿ ಯುವ ಸ್ಪಿನ್ನರ್ ಫರ್ಹಾನ್ ಅಹ್ಮದ್ ಇತಿಹಾಸ ನಿರ್ಮಿಸಿದ್ದಾರೆ. ಅದು ಸಹ ತಮ್ಮ 16ನೇ ವಯಸ್ಸಿನಲ್ಲಿ ಎಂಬುದೇ ವಿಶೇಷ. ಅಂದರೆ ಕೌಂಟಿ ಚಾಂಪಿಯನ್ಶಿಪ್ ಇತಿಹಾಸದಲ್ಲೇ 5 ವಿಕೆಟ್ಗಳ ಸಾಧನೆ ಮಾಡಿದ ಅತ್ಯಂತ ಕಿರಿಯ ಸ್ಪಿನ್ನರ್ ಎಂಬ ದಾಖಲೆ ಫರ್ಹಾನ್ ಪಾಲಾಗಿದೆ.

ಇದಕ್ಕೂ ಮುನ್ನ ಈ ದಾಖಲೆ ಅಫ್ಘಾನಿಸ್ತಾನದ ಹಮೀದುಲ್ಲಾ ಖಾದ್ರಿ ಹೆಸರಿನಲ್ಲಿತ್ತು. 2017 ರ ಕೌಂಟಿ ಚಾಂಪಿಯನ್ಶಿಪ್ನಲ್ಲಿ ಡರ್ಬಿಶೈರ್ ಪರ ಕಣಕ್ಕಿಳಿದಿದ್ದ ಹಮೀದುಲ್ಲಾ ಗ್ಲಾಮೊರ್ಗಾನ್ ತಂಡದ ವಿರುದ್ಧ 5 ವಿಕೆಟ್ ಕಬಳಿಸಿದ್ದರು. ಈ ವೇಳೆ ಅವರ ವಯಸ್ಸು 16 ವರ್ಷ ಮತ್ತು 203 ದಿನಗಳಾಗಿತ್ತು. ಈ ಮೂಲಕ ಕೌಂಟಿ ಕ್ರಿಕೆಟ್ನಲ್ಲಿ 5 ವಿಕೆಟ್ ಕಬಳಿಸಿ ದಾಖಲೆ ಬರೆದಿದ್ದರು.

ಇದೀಗ ನಾಟಿಂಗ್‌ಹ್ಯಾಮ್‌ಶೈರ್ ಪರ ಕಣಕ್ಕಿಳಿದಿರುವ ಫರ್ಹಾನ್ ಅಹ್ಮದ್ ತನ್ನ ಚೊಚ್ಚಲ ಪಂದ್ಯದಲ್ಲೇ ಐದು ವಿಕೆಟ್ ಕಬಳಿಸಿದ್ದಾರೆ. ಸರ್ರೆ ವಿರುದ್ಧದ ಈ ಪಂದ್ಯದಲ್ಲಿ ರೋರಿ ಬರ್ನ್ಸ್ (161), ರಿಯಾನ್ ಪಟೇಲ್ (77), ವಿಲ್ ಜ್ಯಾಕ್ಸ್ (59), ಬೆನ್ ಫೋಕ್ಸ್ (0), ಸಾಯಿ ಸುದರ್ಶನ್ (105), ಟಾಮ್ ಲಾವ್ಸ್ (11) ಮತ್ತು ಕಾನರ್ ಮೆಕೆರ್ (32) ಅವರ ವಿಕೆಟ್ ಪಡೆಯುವ ಮೂಲಕ 16 ವರ್ಷದ ಯುವ ಸ್ಪಿನ್ನರ್ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಈ ಪಂದ್ಯದಲ್ಲಿ 50.4 ಓವರ್ಗಳನ್ನು ಎಸೆದ ಫರ್ಹಾನ್ ಅಹ್ಮದ್ 6 ಮೇಡನ್ ಓವರ್ಗಳೊಂದಿಗೆ 140 ರನ್ ನೀಡಿ 7 ವಿಕೆಟ್ಗಳ ಸಾಧನೆ ಮಾಡಿದ್ದಾರೆ. ಈ ಮೂಲಕ ನಾಟಿಂಗ್‌ಹ್ಯಾಮ್‌ಶೈರ್ ಪರ ಚೊಚ್ಚಲ ಪಂದ್ಯದಲ್ಲೇ ಅತ್ಯಧಿಕ ವಿಕೆಟ್ ಪಡೆದ ಬೌಲರ್ ಹಾಗೂ ಕೌಂಟಿ ಚಾಂಪಿಯನ್ಶಿಪ್ನಲ್ಲಿ 5 ವಿಕೆಟ್ಗಳ ಸಾಧನೆ ಮಾಡಿದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಅಂದಹಾಗೆ ಫರ್ಹಾನ್ ಅಹ್ಮದ್ ಇಂಗ್ಲೆಂಡ್ ತಂಡದ ಸ್ಪಿನ್ನರ್ ರೆಹಾನ್ ಅಹ್ಮದ್ ಅವರ ಕಿರಿಯ ಸಹೋದರ ಎಂಬುದು ವಿಶೇಷ. 2022 ರಲ್ಲಿ ಪಾಕಿಸ್ತಾನ್ ವಿರುದ್ಧದ ಟೆಸ್ಟ್ ಪಂದ್ಯದ ಮೂಲಕ ಇಂಗ್ಲೆಂಡ್ ಪರ ಪಾದಾರ್ಪಣೆ ಮಾಡಿದ್ದ 18 ವರ್ಷದ ರೆಹಾನ್, ಚೊಚ್ಚಲ ಪಂದ್ಯದಲ್ಲೇ 5 ವಿಕೆಟ್ ಕಬಳಿಸಿದ್ದರು. ಈ ಮೂಲಕ ಚೊಚ್ಚಲ ಟೆಸ್ಟ್ನಲ್ಲಿ 5 ವಿಕೆಟ್ ಪಡೆದ ಅತ್ಯಂತ ಕಿರಿಯ ಬೌಲರ್ ಎಂಬ ವಿಶ್ವ ದಾಖಲೆ ನಿರ್ಮಿಸಿದ್ದರು. ಇದೀಗ ಕೌಂಟಿ ಕ್ರಿಕೆಟ್ನಲ್ಲಿ ಚೊಚ್ಚಲ ಪಂದ್ಯದಲ್ಲೇ 7 ವಿಕೆಟ್ ಉರುಳಿಸುವ ಮೂಲಕ 16 ವರ್ಷದ ಫರ್ಹಾನ್ ಅಹ್ಮದ್ ಸಹ ದಾಖಲೆ ಬರೆದಿರುವುದು ವಿಶೇಷ.




