Updated on:Oct 24, 2021 | 6:11 PM
ಅಂತು ಇಂತು ಬರೋಬ್ಬರಿ 2 ವರ್ಷಗಳ ಬಳಿಕ ಭಾರತ-ಪಾಕಿಸ್ತಾನ್ ಮತ್ತೊಮ್ಮೆ ಮುಖಾಮುಖಿಯಾಗಲು ವೇದಿಕೆ ಸಜ್ಜಾಗಿದೆ. ಅಕ್ಟೋಬರ್ 24 ರಂದು ದುಬೈನಲ್ಲಿ ನಡೆಯಲಿರುವ ಹೈವೋಲ್ಟೇಜ್ ಪಂದ್ಯದಲ್ಲಿ ಯಾರು ಗೆಲ್ಲಲಿದ್ದಾರೆ ಎಂಬ ಚರ್ಚೆಗಳು ಶುರುವಾಗಿದೆ. ಟಿ20 ವಿಶ್ವಕಪ್‌ನಲ್ಲಿ ಭಾರತವು ಪಾಕಿಸ್ತಾನದ ವಿರುದ್ಧ 5-0 ಮುನ್ನಡೆ ಹೊಂದಿದೆ. ಈ ಬಾರಿಯೂ ನಿಸ್ಸಂದೇಹವಾಗಿ ಗೆಲ್ಲುವ ನೆಚ್ಚಿನ ತಂಡವಾಗಿದೆ. ಆದರೆ ಪ್ರಸ್ತುತ ತಂಡದಲ್ಲಿರುವ ಆಟಗಾರರಲ್ಲಿ ಉಭಯ ಕದನದಲ್ಲಿ ಟಾಪ್ ರನ್ ಸ್ಕೋರರ್ ಯಾರು ಎಂದು ನೋಡಿದ್ರೆ ಪಾಕ್ ತಂಡದಲ್ಲಿ ಇಬ್ಬರು ಕಾಣ ಸಿಗುತ್ತಾರೆ. ಹಾಗೆಯೇ ಟೀಮ್ ಇಂಡಿಯಾದಲ್ಲಿ ವಿರಾಟ್ ಕೊಹ್ಲಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಹಾಗಾದ್ರೆ ಪಾಕ್-ಭಾರತ ಕದನದಲ್ಲಿ ಅತೀ ಹೆಚ್ಚು ರನ್ ಕಲೆಹಾಕಿದ ಬ್ಯಾಟರುಗಳು ಯಾರು ಎಂದು ನೋಡೋಣ.
ವಿರಾಟ್ ಕೊಹ್ಲಿ: ಭಾರತದ ಸ್ಟಾರ್ ಬ್ಯಾಟರ್ ಕೊಹ್ಲಿ ಟಿ20 ವಿಶ್ವಕಪ್‌ನಲ್ಲಿ ಕೇವಲ 6 ಪಂದ್ಯಗಳನ್ನು ಆಡಿದ್ದಾರೆ. ಅದರಲ್ಲಿ 254 ರನ್ ಗಳಿಸಿರುವುದು ವಿಶೇಷ. 84.66 ಸರಾಸರಿಯಲ್ಲಿ ಬ್ಯಾಟ್ ಬೀಸಿರುವ ಕೊಹ್ಲಿ ಪಾಕ್ ವಿರುದ್ದ 2 ಅರ್ಧಶತಕಗಳನ್ನು ಬಾರಿಸಿದ್ದಾರೆ. ಇದೀಗ ತಂಡವನ್ನು ಮುನ್ನಡೆಸುತ್ತಿರುವ ಕೊಹ್ಲಿ ಈ ಬಾರಿ ಕೂಡ ಪಾಕ್ ಬೌಲರುಗಳಿಗೆ ಕಂಟಕವಾಗಲಿದ್ದಾರೆ.
ಶೋಯೆಬ್ ಮಲಿಕ್: ಪಾಕಿಸ್ತಾನದ ಮಾಜಿ ನಾಯಕ ಶೋಯೆಬ್ ಮಲಿಕ್ 8 ಪಂದ್ಯಗಳಲ್ಲಿ 164 ರನ್ ಗಳಿಸಿ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಆದರೆ ಅವರು 103.79 ಸ್ಟ್ರೈಕ್ ರೇಟ್ ನಲ್ಲಿ ಬ್ಯಾಟಿಂಗ್ ಮಾಡಿರುವುದು ಇಲ್ಲಿ ಗಮನಿಸಬೇಕು. ಹಾಗೆಯೇ ಮಲಿಕ್ ಸರಾಸರಿ 27.33 ಮಾತ್ರ. ಇನ್ನು ಟೀಮ್ ಇಂಡಿಯಾ ವಿರುದ್ದ ಕೇವಲ ಒಂದು ಅರ್ಧಶತಕ ಮಾತ್ರ ಬಾರಿಸಿದ್ದಾರೆ. ಇದಲ್ಲದೆ 2007 ರಲ್ಲಿ ಭಾರತ ಚೊಚ್ಚಲ ಬಾರಿ ಚಾಂಪಿಯನ್ ಪಟ್ಟಕ್ಕೇರಿದಾಗ ಪಾಕ್ ತಂಡವನ್ನು ಮುನ್ನಡೆಸಿದ್ದು ಇದೇ ಶೋಯೆಬ್ ಮಲಿಕ್ ಎಂಬುದು ವಿಶೇಷ.
ಮೊಹಮ್ಮದ್ ಹಫೀಜ್: ಈ ಪಟ್ಟಿಯಲ್ಲಿನ ಮೂರನೇ ಆಟಗಾರ ಪಾಕ್ ತಂಡದ ಅನುಭವಿ ಆಲ್‌ರೌಂಡರ್ ಮೊಹಮ್ಮದ್ ಹಫೀಜ್. ಹಫೀಜ್ ಟೀಮ್ ಇಂಡಿಯಾ ವಿರುದ್ದ 7 ಪಂದ್ಯಗಳಲ್ಲಿ 156 ರನ್ ಗಳಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ ಕೇವಲ 118.18. ಇದಾಗ್ಯೂ ಹಫೀಜ್ ಭಾರತದ ವಿರುದ್ಧ ಎರಡು ಅರ್ಧಶತಕಗಳನ್ನು ಬಾರಿಸಿದ್ದಾರೆ. ಕಳೆದ ಕೆಲ ವರ್ಷಗಳಿಂದ ಹಿರಿಯ ಆಲ್ ರೌಂಡರ್ ಫಾರ್ಮ್ನಲ್ಲಿದ್ದು, ಹೀಗಾಗಿ ಟೀಮ್ ಇಂಡಿಯಾ ಹಫೀಜ್ ಆಧಾರಸ್ತಂಭವಾಗುವ ನಿರೀಕ್ಷೆಯಿದೆ.
ಯುವರಾಜ್ ಸಿಂಗ್: ಈ ಪಟ್ಟಿಯಲ್ಲಿರುವ ಮತ್ತೊರ್ವ ಅನುಭವಿ ಆಲ್ ರೌಂಡರ್ ಯುವರಾಜ್ ಸಿಂಗ್. ಯುವಿ ಪಾಕ್ ವಿರುದ್ದ 8 ಪಂದ್ಯಗಳಲ್ಲಿ 155 ರನ್ ಗಳಿಸಿದ್ದಾರೆ. 2012 ರಲ್ಲಿ ಪಾಕಿಸ್ತಾನದ ವಿರುದ್ಧ 72 ಬಾರಿಸಿದ್ದು ಅವರ ಅತ್ಯುತ್ತಮ ಸ್ಕೋರ್. ಇನ್ನು ಯುವರಾಜ್ 2007 ರ ಟಿ20 ವಿಶ್ವಕಪ್ ವಿಜೇತ ತಂಡದ ಉಪನಾಯಕರಾಗಿದ್ದರು. ಆದರೆ ಪ್ರಸ್ತುತ ತಂಡದಲ್ಲಿ ಯುವರಾಜ್ ಸಿಂಗ್ ಇಲ್ಲ ಎಂಬುದು ಇಲ್ಲಿ ಗಮನಿಸಬೇಕು.
ಗೌತಮ್ ಗಂಭೀರ್: ಈ ಪಟ್ಟಿಯಲ್ಲಿ ಅತಿ ಹೆಚ್ಚು ಸ್ಟ್ರೈಕ್ ರೇಟ್ ಹೊಂದಿರುವ ಬ್ಯಾಟರ್ ಎಂದರೆ ಅದು ಗೌತಮ್ ಗಂಭೀರ್. ಪಾಕ್ ವಿರುದ್ದ ಟಿ20ಯಲ್ಲಿ ಗಂಭೀರ್ 139 ರನ್ ಗಳಿಸಿ ಐದನೇ ಸ್ಥಾನದಲ್ಲಿದ್ದಾರೆ. ಇದರಲ್ಲಿ ಒಂದು ಅರ್ಧಶತಕ ಕೂಡ ಮೂಡಿಬಂದಿದೆ. 2007ರ ಟಿ20 ಫೈನಲ್ನಲ್ಲಿ ಗಂಭೀರ್ 54 ಎಸೆತಗಳಲ್ಲಿ 75 ರನ್ ಗಳಿಸಿದ ಪರಿಣಾಮ ಭಾರತ ಪಾಕ್ಗೆ ಸ್ಪರ್ಧಾತ್ಮಕ ಗುರಿ ನೀಡಲು ಸಾಧ್ಯವಾಯಿತು. ಅದರಂತೆ ಅಂತಿಮ ಓವರ್ನಲ್ಲಿ ಟೀಮ್ ಇಂಡಿಯಾ 5 ರನ್ಗಳಿಂದ ಜಯಗಳಿಸಿ ಟ್ರೋಫಿ ಎತ್ತಿ ಹಿಡಿಯಿತು.
ಭಾರತ-ಪಾಕಿಸ್ತಾನ್ ಕದನದಲ್ಲಿ ಈ ಐವರು ಬ್ಯಾಟರುಗಳು ಟಾಪ್ ಸ್ಕೋರರ್ ಆಗಿದ್ದರೂ, ಇವರಲ್ಲಿ ಪ್ರಸ್ತುತ ಟೀಮ್ ಇಂಡಿಯಾದಲ್ಲಿ ವಿರಾಟ್ ಕೊಹ್ಲಿ ಒಬ್ಬರೇ ಇದ್ದಾರೆ. ಆದರೆ ಅತ್ತ ಪಾಕ್ ತಂಡದಲ್ಲಿ ಶೊಯೇಬ್ ಮಲಿಕ್ ಹಾಗೂ ಮೊಹಮ್ಮದ್ ಹಫೀಜ್ ಇದ್ದು, ಹೀಗಾಗಿ ಈ ಇಬ್ಬರು ಅನುಭವಿ ಆಲ್ರೌಂಡರ್ಗಳನ್ನು ಕಟ್ಟಿಹಾಕಲು ಟೀಮ್ ಇಂಡಿಯಾ ವಿಶೇಷ ತಂತ್ರ ಹೆಣೆಯಲಿದೆ.
Published On - 5:55 pm, Sun, 24 October 21