
ವಿರಾಟ್ ಕೊಹ್ಲಿ (Virat Kohli) ಮತ್ತು ನನ್ನ ನಡುವಣ ಸಂಬಂಧ ಏನು ಎಂಬುದು ದೇಶಕ್ಕೆ ತಿಳಿಯಬೇಕಿಲ್ಲ. ಅದು ನಮ್ಮಿಬ್ಬರ ನಡುವಣ ಸಂಬಂಧ. ಅದನ್ನು ಇಡೀ ದೇಶದ ಮುಂದೆ ತೆರೆದಿಡಬೇಕಾದ ಅಗತ್ಯತೆಯು ಇಲ್ಲ ಎಂಬುದು ನನ್ನ ಅನಿಸಿಕೆ. ಹೀಗೆ ಹೇಳಿದ್ದು ಮತ್ಯಾರೂ ಅಲ್ಲ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಮೆಂಟರ್ ಗೌತಮ್ ಗಂಭೀರ್ (Gautam Gambhir).

ಸಂದರ್ಶನವೊಂದರಲ್ಲಿ ವಿರಾಟ್ ಕೊಹ್ಲಿ ಕುರಿತಾದ ಕೇಳಿದ ಪ್ರಶ್ನೆಗೆ ಉತ್ತರಿಸಿದ ಗಂಭೀರ್, ನನ್ನ ಮತ್ತು ಕೊಹ್ಲಿ ನಡುವೆ ಸಂಬಂಧ ಇಡೀ ದೇಶಕ್ಕೆ ತಿಳಿಯಬೇಕಿಲ್ಲ. ತಮ್ಮ ತಮ್ಮ ತಂಡಗಳನ್ನು ಗೆಲ್ಲುವಂತೆ ಮಾಡಲು ತನ್ನತನ ತೋರಿಸಲು ಇಬ್ಬರಿಗೂ ಹಕ್ಕಿದೆ. ಹೀಗಾಗಿ ಇಬ್ಬರೂ ಅಗ್ರೆಸಿವ್ ಆಗಿ ಕಾಣಿಸಿಕೊಂಡೆವು ಅಷ್ಟೇ ಎಂದು ಗಂಭೀರ್ ಹೇಳಿದ್ದಾರೆ.

ನಮ್ಮಿಬ್ಬರ ಸಂಬಂಧವು ನಿಮ್ಮೆಲ್ಲರ ಗ್ರಹಿಕೆಯ ವಾಸ್ತವದಿಂದ ತುಂಬಾ ದೂರವಿದೆ. ವಿರಾಟ್ ಕೊಹ್ಲಿಯೊಂದಿಗಿನ ನನ್ನ ಸಂಬಂಧಕ್ಕೆ ಸಾರ್ವಜನಿಕರು ಮಸಾಲಾ ಸೇರಿಸಿದರು. ಹಲವು ಸುದ್ದಿಗಳು ಸೃಷ್ಟಿಯಾದವು. ಆದರೆ ನಾವಿಬ್ಬರೂ ಹಾಗೆ ಇಲ್ಲ ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.

ಈ ಬಾರಿಯ ಐಪಿಎಲ್ನಲ್ಲಿ ಆರ್ಸಿಬಿ-ಕೆಕೆಆರ್ ನಡುವಣ ಪಂದ್ಯವು ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ಕಾರಣದಿಂದ ಕುತೂಹಲದ ಕೇಂದ್ರವಾಗಿತ್ತು. ಆದರೆ ಪಂದ್ಯದ ನಡುವೆ ಗೌತಮ್ ಗಂಭೀರ್ ವಿರಾಟ್ ಕೊಹ್ಲಿಯನ್ನು ತಬ್ಬಿಕೊಂಡಿದ್ದರು. ಅಲ್ಲದೆ ಇದಾದ ಬಳಿಕ ಕೊಲ್ಕತ್ತಾದಲ್ಲಿ ನಡೆದ ಪಂದ್ಯದ ವೇಳೆ ಗಂಭೀರ್ ಮತ್ತು ಕೊಹ್ಲಿ ಜೊತೆಯಾಗಿ ಹರಟೆ ಹೊಡೆಯುತ್ತಿರುವುದು ಕೂಡ ಕಂಡು ಬಂತು.

ಈ ಎಲ್ಲಾ ಕಾರಣಗಳಿಂದಾಗಿಯೇ ಗೌತಮ್ ಗಂಭೀರ್, ನಿಮ್ಮ ಗ್ರಹಿಕೆಗಿಂತಲೂ ನಾನು ಮತ್ತು ವಿರಾಟ್ ಕೊಹ್ಲಿ ಉತ್ತಮ ಸಂಬಂಧ ಹೊಂದಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನು ಪುಷ್ಠೀಕರಿಸುವಂತೆ ಈ ಬಾರಿಯ ಐಪಿಎಲ್ನಲ್ಲೂ ದೆಹಲಿಯ ಇಬ್ಬರು ಕ್ರಿಕೆಟಿಗರು ತುಂಬಾ ಅನೋನ್ಯವಾಗಿ ಕಾಣಿಸಿಕೊಂಡಿದ್ದರು.

ಇದೀಗ ಕೆಕೆಆರ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿರುವ ಗೌತಮ್ ಗಂಭೀರ್ ಶ್ರೀಘ್ರದಲ್ಲೇ ಟೀಮ್ ಇಂಡಿಯಾದ ಕೋಚ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಅದರಂತೆ ಗಂಭೀರ್-ಕೊಹ್ಲಿ ಜಗಲ್ಬಂಧಿಯಲ್ಲಿ ಭಾರತ ತಂಡವು ಹೇಗೆ ಪ್ರದರ್ಶನ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.