- Kannada News Photo gallery Cricket photos simon doull got death threats for negative comments on virat kohli
ಕೊಹ್ಲಿಯನ್ನು ಟೀಕಿಸಿದ್ದಕ್ಕಾಗಿ ಕೊಲೆ ಬೆದರಿಕೆ; ಅಳಲು ತೊಡಿಕೊಂಡ ಮಾಜಿ ಕ್ರಿಕೆಟಿಗ
IPL 2024: ವಿರಾಟ್ ಕೊಹ್ಲಿಯನ್ನು ಟೀಕಿಸಿದ್ದಕ್ಕಾಗಿ ನನಗೆ ಪ್ರಾಣ ಬೆದರಿಕೆ ಕೂಡ ಬಂದಿತ್ತು ಎಂಬ ಸ್ಫೋಟಕ ವಿಚಾರವನ್ನು ಮಾಜಿ ಕ್ರಿಕೆಟಿಗರೊಬ್ಬರು ಬಹಿರಂಗಪಡಿಸಿದ್ದಾರೆ. ಅಷ್ಟಕ್ಕೂ ಈ ಪ್ರಾಣ ಬೆದರಿಕೆಗೆ ಒಳಗಾದ ಆಟಗಾರ ಮತ್ತ್ಯಾರು ಅಲ್ಲ, ನ್ಯೂಜಿಲೆಂಡ್‌ನ ಮಾಜಿ ವೇಗದ ಬೌಲರ್ ಮತ್ತು ವೀಕ್ಷಕ ವಿವರಣೆಗಾರ ಸೈಮನ್ ಡೌಲ್.
Updated on: May 30, 2024 | 4:14 PM

ಇತ್ತೀಚೆಗಷ್ಟೇ ಮುಗಿದ 17ನೇ ಆವೃತ್ತಿಯ ಐಪಿಎಲ್‌ನಲ್ಲಿ ಆರ್ಸಿಬಿಯ ಮಾಜಿ ನಾಯಕ ವಿರಾಟ್ ಕೊಹ್ಲಿ 741 ರನ್ ಕಲೆಹಾಕುವ ಮೂಲಕ ಈ ಸೀಸನ್‌ನಲ್ಲಿ ಅಧಿಕ ರನ್ ಬಾರಿಸಿದ ಬ್ಯಾಟರ್ ಎನಿಸಿಕೊಂಡಿದಲ್ಲದೆ ಆರೆಂಜ್ ಕ್ಯಾಪ್ ಕೂಡ ಗೆದ್ದಿದ್ದರು. ಆದರೆ ಈ ಸಾಧನೆಯ ನಡುವೆಯೂ ಕೊಹ್ಲಿಯ ಸ್ಟ್ರೈಕ್ ರೇಟ್ ಬಗ್ಗೆ ಹಲವು ಬಾರಿ ಪ್ರಶ್ನೆಗಳು ಎದ್ದಿದ್ದವು.

ಟೀಂ ಇಂಡಿಯಾದ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಸೇರಿದಂತೆ ಅನೇಕ ಮಾಜಿ ಕ್ರಿಕೆಟಿಗರು ಸ್ಟ್ರೈಕ್ ರೇಟ್ ವಿಚಾರದಲ್ಲಿ ಕೊಹ್ಲಿಯನ್ನು ಟೀಕಿಸಿದ್ದರು. ಈ ಟೀಕೆಗಳಿಗೆಲ್ಲ ಉತ್ತರಿಸಿದ್ದ ಕೊಹ್ಲಿ, ಮೈದಾನದಲ್ಲಿ ಆಡುವವರಿಗೆ ಮಾತ್ರ ಆಟದ ಗಂಭೀರತೆ ಅರ್ಥವಾಗುತ್ತದೆ ಎಂದು ಹೇಳುವ ಮೂಲಕ ಎಲ್ಲರ ಬಾಯಿ ಮುಚ್ಚಿಸುವ ಕೆಲಸ ಮಾಡಿದ್ದರು.

ಈ ನಡುವೆ ಮಾಜಿ ಅನುಭವಿಯೊಬ್ಬರು ವಿರಾಟ್ ಕೊಹ್ಲಿಯನ್ನು ಟೀಕಿಸಿದ್ದಕ್ಕಾಗಿ ನನಗೆ ಪ್ರಾಣ ಬೆದರಿಕೆ ಕೂಡ ಬಂದಿತ್ತು ಎಂಬ ಸ್ಫೋಟಕ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಅಷ್ಟಕ್ಕೂ ಈ ಪ್ರಾಣ ಬೆದರಿಕೆಗೆ ಒಳಗಾದ ಆಟಗಾರ ಮತ್ತ್ಯಾರು ಅಲ್ಲ. ನ್ಯೂಜಿಲೆಂಡ್‌ನ ಮಾಜಿ ವೇಗದ ಬೌಲರ್ ಮತ್ತು ವೀಕ್ಷಕ ವಿವರಣೆಗಾರ ಸೈಮನ್ ಡೌಲ್.

ಸುನಿಲ್ ಗವಾಸ್ಕರ್ ಜೊತೆಗೆ ಸೈಮನ್ ಡೌಲ್ ಕೂಡ ವಿರಾಟ್ ಕೊಹ್ಲಿಯ ಸ್ಟ್ರೈಕ್ ರೇಟ್ ಬಗ್ಗೆ ಮಾತನಾಡಿದ್ದರು. ಈ ಬಗ್ಗೆ ಹೇಳಿಕೊಂಡಿರುವ ಅವರು, ‘ಕೊಹ್ಲಿ ಶ್ರೇಷ್ಠ ಆಟಗಾರನಾಗಿ ಪ್ರಾಬಲ್ಯ ಸಾಧಿಸುವುದನ್ನು ನಾನು ನೋಡಲು ಬಯಸುತ್ತೇನೆ. ಅದಕ್ಕಾಗಿಯೇ ನಾನು ಅವರ ಸ್ಟ್ರೈಕ್ ರೇಟ್ ಬಗ್ಗೆ ಮಾತನಾಡುತ್ತೇನೆ ಎಂದಿದ್ದಾರೆ.

ವಾಸ್ತವವಾಗಿ ವೀಕ್ಷಕ ವಿವರಣೆ ನೀಡುವ ಸಂದರ್ಭದಲ್ಲಿ ಸೈಮನ್, ‘ಬಹುಶಃ ಕೊಹ್ಲಿ ಔಟಾಗುವ ಆತಂಕದಲ್ಲಿ ಬ್ಯಾಟ್ ಬೀಸುತ್ತಿದ್ದಾರೆ. ನಾನು ಬಾಬರ್ ಆಝಂಗೂ ಇದೇ ಮಾತನ್ನು ಹೇಳಿದ್ದೆ. ಇದಕ್ಕೆ ಉತ್ತರಿಸಿದ್ದ ಬಾಬರ್, ನನ್ನ ಕೋಚ್ ಕೂಡ ಅದನ್ನೇ ಹೇಳಿದ್ದರು ಎಂದು ನನ್ನ ಬಳಿ ಹೇಳಿಕೊಂಡಿದ್ದರು’.

‘ಆದರೆ ವಿರಾಟ್ ಕೊಹ್ಲಿ ವಿಚಾರದಲ್ಲಿ ಹೀಗಾಗಲಿಲ್ಲ. ಈ ವರ್ಷ ನಾನು ವಿರಾಟ್ ಕೊಹ್ಲಿಯ ಸಿಕ್ಸರ್‌ಗಳನ್ನು ಹೊಡೆಯುವ ಉದ್ದೇಶವನ್ನು ನಿಜವಾಗಿಯೂ ಇಷ್ಟಪಟ್ಟೆ. ಹೀಗಾಗಿ ಕೊಹ್ಲಿ ಔಟಾಗುವ ಬಗ್ಗೆ ಚಿಂತಿಸಬಾರದು ಎಂದು ನಾನು ನಂಬುತ್ತೇನೆ’.

‘ಇಲ್ಲಿಯವರೆಗೆ ನಾನು ವಿರಾಟ್ ಕೊಹ್ಲಿ ಬಗ್ಗೆ ಸಾವಿರಾರು ಪಾಸಿಟಿವ್ ವಿಷಯಗಳನ್ನು ಹೇಳಿದ್ದೇನೆ. ಆದರೆ ನಾನು ಅವರ ಬಗ್ಗೆ ಒಂದೇ ಒಂದು ನೆಗೆಟಿವ್ ವಿಷಯವನ್ನು ಹೇಳಿದಾಗ ನನ್ನನ್ನು ಕೊಹ್ಲಿಯ ದ್ವೇಷಿ ಎಂದು ಪರಿಗಣಿಸಲಾಗಿದೆ. ನನಗೆ ಕೊಲೆ ಬೆದರಿಕೆ ಕೂಡ ಬರುತ್ತಿದೆ. ಇದು ನಾಚಿಕೆಗೇಡಿನ ಸಂಗತಿ’.

‘ಈ ವರ್ಷ ನಾನು ಕೊಹ್ಲಿಯ ಸ್ಲಾಗ್ ಸ್ವೀಪ್ ಶಾಟ್ ಅನ್ನು ಇಷ್ಟಪಟ್ಟೆ. ನನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುವ ಹಕ್ಕು ನನಗಿದೆ. ನಾನು ಭಾರತಕ್ಕೆ ಬರಲು ಮತ್ತು ಇಲ್ಲಿ ಕೊಡುಗೆ ನೀಡಲು ಇಷ್ಟಪಡುತ್ತೇನೆ. ಕೊಹ್ಲಿ, ನಾನು ಹೇಳಿದ್ದು ತಪ್ಪು ಎಂದು ಸಾಬೀತುಪಡಿಸಲು ಪ್ರಯತ್ನಿಸಿದರೆ ಅದಕ್ಕಿಂತ ಉತ್ತಮವಾದ ವಿಷಯ ಯಾವುದಿದೆ ಹೇಳಿ?’ ಎಂದು ಸೈಮನ್ ಹೇಳಿಕೊಂಡಿದ್ದಾರೆ.



















