- Kannada News Photo gallery Cricket photos Happy Birthday Jasprit Bumrah jasprit bumrah turns 30 know his top performance with ball and bat
30 ನೇ ವಸಂತಕ್ಕೆ ಕಾಲಿಟ್ಟ ಜಸ್ಪ್ರೀತ್ ಬುಮ್ರಾ; ಕ್ರಿಕೆಟ್ ದುನಿಯಾದಲ್ಲಿ ಯಾರ್ಕರ್ ಕಿಂಗ್ ಸೃಷ್ಟಿಸಿರುವ ಅಪರೂಪದ ದಾಖಲೆಗಳ ಬಗ್ಗೆ ನಿಮಗೆಷ್ಟು ಗೊತ್ತು?
Happy Birthday Jasprit Bumrah: ಭಾರತ ಕ್ರಿಕೆಟ್ ತಂಡದ ಯಾರ್ಕರ್ ಕಿಂಗ್ ಜಸ್ಪ್ರೀತ್ ಬುಮ್ರಾ ಇಂದು ತಮ್ಮ 30 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ತಮ್ಮ ಚಾಣಾಕ್ಯ ಬೌಲಿಂಗ್ನಿಂದ ಬುಮ್ರಾ ಇಂಡಿಯನ್ ಪ್ರೀಮಿಯರ್ ಲೀಗ್ ಮತ್ತು ಟೀಂ ಇಂಡಿಯಾದಲ್ಲಿ ಮಾತ್ರವಲ್ಲದೆ ವಿಶ್ವ ಕ್ರಿಕೆಟ್‌ನಲ್ಲಿಯೂ ಸಾಕಷ್ಟು ಹೆಸರು ಸಂಪಾಧಿಸಿದ್ದಾರೆ.
Updated on:Dec 06, 2023 | 10:25 AM

ಭಾರತ ಕ್ರಿಕೆಟ್ ತಂಡದ ಯಾರ್ಕರ್ ಕಿಂಗ್ ಜಸ್ಪ್ರೀತ್ ಬುಮ್ರಾ ಇಂದು ತಮ್ಮ 30 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ತಮ್ಮ ಚಾಣಾಕ್ಯ ಬೌಲಿಂಗ್ನಿಂದ ಬುಮ್ರಾ ಇಂಡಿಯನ್ ಪ್ರೀಮಿಯರ್ ಲೀಗ್ ಮತ್ತು ಟೀಂ ಇಂಡಿಯಾದಲ್ಲಿ ಮಾತ್ರವಲ್ಲದೆ ವಿಶ್ವ ಕ್ರಿಕೆಟ್‌ನಲ್ಲಿಯೂ ಸಾಕಷ್ಟು ಹೆಸರು ಸಂಪಾಧಿಸಿದ್ದಾರೆ.

ಅತಿ ಕಡಿಮೆ ಸಮಯದಲ್ಲಿ ಭಾರತ ತಂಡದ ಪ್ರಮುಖ ಬೌಲರ್ ಎಂದು ಗುರುತಿಸಿಕೊಂಡ ಬುಮ್ರಾ, ಇತ್ತೀಚೆಗೆ ಮುಕ್ತಾಯಗೊಂಡ ಏಕದಿನ ವಿಶ್ವಕಪ್ನಲ್ಲಿ 11 ಪಂದ್ಯಗಳನ್ನಾಡಿ 20 ವಿಕೆಟ್‌ಗಳನ್ನು ಗಳಿಸಿದ್ದರು. ಹಾಗೆಯೇ ಭಾರತವನ್ನು ಫೈನಲ್ಗೆ ಕೊಂಡೊಯ್ಯುವಲ್ಲು ಪ್ರಮುಖ ಪಾತ್ರವಹಿಸಿದ್ದರು. ಇನ್ನು 30 ನೇ ವಸಂತಕ್ಕೆ ಕಾಲಿಟ್ಟಿರುವ ಬುಮ್ರಾ ಕ್ರಿಕೆಟ್ ಲೋಕದಲ್ಲಿ ಮಾಡಿರುವ ಕೆಲವು ಅದ್ಭುತ ದಾಖಲೆಗಳನ್ನು ನೋಡುವುದಾದರೆ..

ಜಸ್ಪ್ರೀತ್ ಬುಮ್ರಾ ಭಾರತದ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಮೂರನೇ ಬೌಲರ್ ಎನಿಸಿಕೊಂಡಿದ್ದಾರೆ. 2019 ರ ವೆಸ್ಟ್ ಇಂಡೀಸ್ ಪ್ರವಾಸದ ಸಮಯದಲ್ಲಿ, ಜಮೈಕಾ ಮೈದಾನದಲ್ಲಿ ನಡೆದ ಸರಣಿಯ ಎರಡನೇ ಟೆಸ್ಟ್ ಪಂದ್ಯದಲ್ಲಿ ಬುಮ್ರಾ ಈ ಸಾಧನೆಯನ್ನು ಸಾಧಿಸಿದ್ದರು.

ಇದರಲ್ಲಿ ಬುಮ್ರಾ ಸತತ ಮೂರು ಎಸೆತಗಳಲ್ಲಿ ಡ್ಯಾರೆನ್ ಬ್ರಾವೋ, ಶಮ್ರಾ ಬ್ರೂಕ್ಸ್ ಮತ್ತು ರೋಸ್ಟನ್ ಚೇಸ್ ಅವರನ್ನು ಬಲಿಪಶುಗಳನ್ನಾಗಿ ಮಾಡಿದರು. ವೇಗದ ಬೌಲರ್ ಮಾತ್ರವಲ್ಲದೆ, ಬುಮ್ರಾ ಟೆಸ್ಟ್ ಕ್ರಿಕೆಟ್‌ನಲ್ಲಿ ಬ್ಯಾಟ್‌ನಿಂದ ಕೂಡ ದಾಖಲೆ ನಿರ್ಮಿಸಿದ್ದಾರೆ.

2022 ರಲ್ಲಿ, ಬರ್ಮಿಂಗ್ಹ್ಯಾಮ್ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಬುಮ್ರಾ, ಸ್ಟುವರ್ಟ್ ಬ್ರಾಡ್ ಬೌಲ್ ಮಾಡಿದ ಒಂದು ಓವರ್‌ನಲ್ಲಿ ಬರೋಬ್ಬರಿ 35 ರನ್ ಚಚ್ಚಿದ್ದರು. ಇದು ಇಲ್ಲಿಯವರೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಒಂದು ಓವರ್‌ನಲ್ಲಿ ಹೆಚ್ಚು ರನ್ ಗಳಿಸಿದ ದಾಖಲೆಯಾಗಿದೆ.

ಅಲ್ಲದೆ 2019 ರಲ್ಲಿಯೇ ಬುಮ್ರಾ ಏಕದಿನ ಸ್ವರೂಪದಲ್ಲಿ ತಮ್ಮ 100 ವಿಕೆಟ್ ಪೂರೈಸಿದರು. ಈ ಮೂಲಕ ಈ ಸಾಧನೆ ಮಾಡಿದ 21 ನೇ ಭಾರತೀಯ ಬೌಲರ್ ಎನಿಸಿಕೊಳ್ಳುವುದರ ಜೊತೆಗೆ, ಈ ಮೈಲಿಗಲ್ಲನ್ನು ತಲುಪಿದ ಎರಡನೇ ವೇಗದ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

2018 ರ ವರ್ಷವನ್ನು ಜಸ್ಪ್ರೀತ್ ಬುಮ್ರಾ ಅವರ ವೃತ್ತಿಜೀವನದ ಅತ್ಯುತ್ತಮ ವರ್ಷ ಎಂದು ಕರೆಯಬಹುದು. ಈ ವರ್ಷ ಅವರು ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಆಡಿದ ಟೆಸ್ಟ್ ಪಂದ್ಯಗಳಲ್ಲಿ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್ ಪಡೆದ ಸಾಧನೆಯನ್ನು ಸಾಧಿಸಿದ್ದರು. ಇದರೊಂದಿಗೆ ಬುಮ್ರಾ ಒಂದು ಕ್ಯಾಲೆಂಡರ್ ವರ್ಷದಲ್ಲಿ ಎಲ್ಲಾ ಮೂರು ದೇಶಗಳಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಬೌಲರ್ ಎನಿಸಿಕೊಂಡರು.

ಇದಲ್ಲದೆ, ಬುಮ್ರಾ ಅವರು ಭಾರತೀಯ ಬೌಲರ್ ಆಗಿ ತಮ್ಮ ಟೆಸ್ಟ್ ಚೊಚ್ಚಲ ವರ್ಷದಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆಯುವ ವಿಷಯದಲ್ಲಿ ನಂಬರ್-1 ಸ್ಥಾನವನ್ನು ಆಕ್ರಮಿಸಿಕೊಂಡಿದ್ದಾರೆ. 2018 ರಲ್ಲಿ ಟೆಸ್ಟ್ ಕ್ರಿಕೆಟ್ ಪದಾರ್ಪಣೆ ಮಾಡಿದ ಬುಮ್ರಾ ಆ ವರ್ಷ ಒಟ್ಟು 48 ಟೆಸ್ಟ್ ವಿಕೆಟ್‌ಗಳನ್ನು ಪಡೆದರು. ಈ ಮೂಲಕ 1979 ರಲ್ಲಿ ತಮ್ಮ ಚೊಚ್ಚಲ ಟೆಸ್ಟ್ ವರ್ಷದಲ್ಲಿ ಒಟ್ಟು 40 ವಿಕೆಟ್‌ಗಳನ್ನು ಪಡೆದಿದ್ದ ಮಾಜಿ ಭಾರತೀಯ ಆಟಗಾರ ದಿಲೀಪ್ ದೋಷಿ ಅವರ ದಾಖಲೆಯನ್ನು ಮುರಿದರು.
Published On - 9:50 am, Wed, 6 December 23




