- Kannada News Photo gallery Cricket photos Hardik Pandya Smashes 16 Ball Fifty vs SA: India's 2nd Fastest T20 Record
IND vs SA: ಯುವಿ ದಾಖಲೆ ಜಸ್ಟ್ ಮಿಸ್; ಸಿಡಿಲಬ್ಬರದ ಅರ್ಧಶತಕ ಸಿಡಿಸಿದ ಹಾರ್ದಿಕ್ ಪಾಂಡ್ಯ
Hardik Pandya Smashes 16-Ball Fifty: ದಕ್ಷಿಣ ಆಫ್ರಿಕಾ ವಿರುದ್ಧದ 5ನೇ ಟಿ20 ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಕೇವಲ 16 ಎಸೆತಗಳಲ್ಲಿ ಸ್ಫೋಟಕ ಅರ್ಧಶತಕ ಸಿಡಿಸಿ ಮಿಂಚಿದರು. ಇದು ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಭಾರತದ ಎರಡನೇ ಅತಿ ವೇಗದ ಅರ್ಧಶತಕವಾಗಿದೆ. 25 ಎಸೆತಗಳಲ್ಲಿ 5 ಬೌಂಡರಿ, 5 ಸಿಕ್ಸರ್ ಸಹಿತ 63 ರನ್ ಗಳಿಸಿದ ಪಾಂಡ್ಯ, ತಿಲಕ್ ವರ್ಮಾ ಜೊತೆಗೂಡಿ ತಂಡಕ್ಕೆ 231 ರನ್‌ಗಳ ಬೃಹತ್ ಮೊತ್ತ ಗಳಿಸಲು ನೆರವಾದರು.
Updated on: Dec 19, 2025 | 9:16 PM

ದಕ್ಷಿಣ ಆಫ್ರಿಕಾ ವಿರುದ್ಧದ ಐದನೇ ಟಿ20 ಪಂದ್ಯದಲ್ಲಿ ಭಾರತದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಸ್ಫೋಟಕ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಪರ 5ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಪಾಂಡ್ಯ ದಾಖಲೆಯ ಇನ್ನಿಂಗ್ಸ್ ಆಡಿದರು.

ನಾಯಕ ಸೂರ್ಯಕುಮಾರ್ ಯಾದವ್ ಔಟಾದ ಬಳಿಕ ಕ್ರೀಸ್ಗೆ ಬಂದ ಹಾರ್ದಿಕ್, ಮೊದಲ ಎಸೆತದಿಂದಲೇ ಬೌಂಡರಿ ಸಿಕ್ಸರ್‌ಗಳ ಮಳೆ ಸುರಿಸಲು ಶುರು ಮಾಡಿದರು. ಇದರ ಪರಿಣಾಮವಾಗಿ ಪಾಂಡ್ಯ, ಕೇವಲ 16 ಎಸೆತಗಳಲ್ಲಿ 50 ರನ್‌ಗಳ ಗಡಿ ದಾಟಿದರು. ಇನ್ನೊಂದು ವಿಶೇಷವೆಂದರೆ, ಬೌಂಡರಿಯೊಂದಿಗೆ ತಮ್ಮ ಇನ್ನಿಂಗ್ಸ್ ಆರಂಭಿಸಿದ ಪಾಂಡ್ಯ, ಸಿಕ್ಸರ್ ಸಿಡಿಸುವ ಮೂಲಕ ತಮ್ಮ ಅರ್ಧಶತಕ ಪೂರೈಸಿದರು.

ಕೇವಲ 16 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನ ಅತಿ ವೇಗದ ಅರ್ಧಶತಕ ಬಾರಿಸಿದ ಎರಡನೇ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಪಾಂಡ್ಯಗೂ ಮೊದಲು 2007 ರ ಟಿ20 ವಿಶ್ವಕಪ್‌ನಲ್ಲಿ ಯುವರಾಜ್ ಸಿಂಗ್ ಇಂಗ್ಲೆಂಡ್ ವಿರುದ್ಧ ಕೇವಲ 12 ಎಸೆತಗಳಲ್ಲಿ 50 ರನ್ ಬಾರಿಸಿದರು. ಇದು ಈವರೆಗಿನ ದಾಖಲೆಯಾಗಿದೆ.

ಭಾರತದ ಪರ ಅತಿ ವೇಗದ ಅಂತರರಾಷ್ಟ್ರೀಯ ಅರ್ಧಶತಕ ಸಿಡಿಸಿದ ದಾಖಲೆಯ ಪಟ್ಟಿಯಲ್ಲಿ ಯುವರಾಜ್ ಸಿಂಗ್ ಅಗ್ರಸ್ಥಾನದಲ್ಲಿದ್ದರೆ, ಇದೀಗ ಹಾರ್ದಿಕ್ ಪಾಂಡ್ಯ ಎರಡನೇ ಸ್ಥಾನಕ್ಕೇರಿದ್ದಾರೆ. ಮೂರನೇ ಸ್ಥಾನದಲ್ಲಿರುವ ಆರಂಭಿಕ ಅಭಿಷೇಕ್ ಶರ್ಮಾ 17 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು. 18 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದ ಕೆಎಲ್ ರಾಹುಲ್ 4ನೇ ಸ್ಥಾನದಲ್ಲಿದ್ದರೆ, 18 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದ ಸೂರ್ಯಕುಮಾರ್ ಯಾದವ್ 5ನೇ ಸ್ಥಾನದಲ್ಲಿದ್ದಾರೆ.

ಇನ್ನು ಈ ಇನ್ನಿಂಗ್ಸ್ನಲ್ಲಿ ಬೌಂಡರಿ ಸಿಕ್ಸರ್‌ಗಳ ಮಳೆಗರೆದ ಹಾರ್ದಿಕ್ ಪಾಂಡ್ಯ, 25 ಎಸೆತಗಳಲ್ಲಿ 5 ಬೌಂಡರಿ ಹಾಗೂ 5 ಸಿಕ್ಸರ್‌ಗಳ ಸಹಿತ 63 ರನ್ ಬಾರಿಸಿ 20ನೇ ಓವರ್ನಲ್ಲಿ ಸಿಕ್ಸರ್ ಹೊಡೆಯುವ ಯತ್ನದಲ್ಲಿ ಕ್ಯಾಚಿತ್ತು ಔಟಾದರು. ಹಾರ್ದಿಕ್ ಅರ್ಧಶತಕ ಬಾರಿಸುವುದರ ಜೊತೆಗೆ ತಿಲಕ್ ವರ್ಮಾ ಅವರೊಂದಿಗೆ 105 ರನ್‌ಗಳ ಜೊತೆಯಾಟವನ್ನು ಕಟ್ಟಿದರು.

ಹಾರ್ದಿಕ್ ಜೊತೆಗೆ ತಿಲಕ್ ವರ್ಮಾ ಕೂಡ 73 ರನ್‌ಗಳ ಇನ್ನಿಂಗ್ಸ್ ಆಡಿದರು. ಆರಂಭಿಕ ಸಂಜು 37 ರನ್ ಬಾರಿಸಿದರೆ, ಅಭಿಷೇಕ್ ಶರ್ಮಾ ಕೂಡ 34 ರನ್‌ಗಳ ಕಾಣಿಕೆ ನೀಡಿದರು. ಈ ನಾಲ್ವರು ಇನ್ನಿಂಗ್ಸ್ನಿಂದಾಗಿ ಟೀಂ ಇಂಡಿಯಾ 231 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದೆ.




