- Kannada News Photo gallery Cricket photos Hardik Pandya has finished most T20i matches with a six for India
ಹಾರ್ದಿಕ್ ಪಾಂಡ್ಯ ಸಿಕ್ಸರ್ಗೆ ಕೆಳಗೆ ಬಿದ್ದ ವಿರಾಟ್ ಕೊಹ್ಲಿಯ ದಾಖಲೆ
India vs Bangladesh, 1st T20I: ಬಾಂಗ್ಲಾದೇಶ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಮ್ಯಾಚ್ನಲ್ಲಿ ಭಾರತ ತಂಡವು 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸಿದ್ದು, ದೆಹಲಿಯಲ್ಲಿ ನಡೆಯಲಿರುವ 2ನೇ ಪಂದ್ಯದಲ್ಲಿ ಗೆದ್ದರೆ ಸರಣಿಯನ್ನು ವಶಪಡಿಸಿಕೊಳ್ಳಬಹುದು.
Updated on: Oct 07, 2024 | 8:30 AM

ಬಾಂಗ್ಲಾದೇಶ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ (Hardik Pandya) ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಗ್ವಾಲಿಯರ್ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ್ ತಂಡವು 19.5 ಓವರ್ಗಳಲ್ಲಿ 127 ರನ್ಗಳಿಸಿ ಆಲೌಟ್ ಆಗಿತ್ತು. 128 ರನ್ಗಳ ಗುರಿ ಪಡೆದ ಟೀಮ್ ಇಂಡಿಯಾ ಉತ್ತಮ ಪಡೆದಿರಲಿಲ್ಲ.

ಯುವ ಸ್ಪೋಟಕ ಆರಂಭಿಕ ದಾಂಡಿಗ ಅಭಿಷೇಕ್ ಶರ್ಮಾ 16 ರನ್ಗಳಿಸಿ ರನೌಟ್ಗೆ ಬಲಿಯಾದರು. ಆ ಬಳಿಕ ಬಂದ ಸೂರ್ಯಕುಮಾರ್ ಯಾದವ್ ಕೇವಲ 14 ಎಸೆತಗಳಲ್ಲಿ 29 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಆರಂಭಿಕನಾಗಿ ಕಣಕ್ಕಿಳಿದ ಸಂಜು ಸ್ಯಾಮ್ಸನ್ (29) ಸಹ ಪೆವಿಲಿಯನ್ನತ್ತ ಮುಖ ಮಾಡಿದರು.

ಈ ಹಂತದಲ್ಲಿ ಕಣಕ್ಕಿಳಿದ ಹಾರ್ದಿಕ್ ಪಾಂಡ್ಯ ಅತ್ಯಾಕರ್ಷಕ ಬ್ಯಾಟಿಂಗ್ನೊಂದಿಗೆ ಗಮನ ಸೆಳೆದರು. ಬಾಂಗ್ಲಾ ಬೌಲರ್ಗಳನ್ನು ನಿರಾಯಾಸವಾಗಿ ಎದುರಿಸಿದ ಪಾಂಡ್ಯ ಕೇವಲ 16 ಎಸೆತಗಳಲ್ಲಿ 4 ಫೋರ್ ಹಾಗೂ 2 ಭರ್ಜರಿ ಸಿಕ್ಸ್ನೊಂದಿಗೆ ಅಜೇಯ 39 ರನ್ ಚಚ್ಚಿದರು.

ಅದರಲ್ಲೂ ತಂಡದ ಗೆಲುವಿಗೆ ಕೇವಲ 1 ರನ್ ಅವಶ್ಯಕತೆಯಿದ್ದಾಗ ತಸ್ಕಿನ್ ಅಹ್ಮದ್ ಎಸೆತದಲ್ಲಿ ಹಾರ್ದಿಕ್ ಪಾಂಡ್ಯ ಭರ್ಜರಿ ಸಿಕ್ಸರ್ ಸಿಡಿಸಿ ಪಂದ್ಯವನ್ನು ಅಂತ್ಯಗೊಳಿಸಿದರು. ಇದರೊಂದಿಗೆ ವಿರಾಟ್ ಕೊಹ್ಲಿಯ ಹೆಸರಿನಲ್ಲಿದ್ದ ವಿಶೇಷ ದಾಖಲೆಯೊಂದು ಪಾಂಡ್ಯ ಪಾಲಾಯಿತು.

ಅಂದರೆ ಟೀಮ್ ಇಂಡಿಯಾ ಪರ ಟಿ20 ಕ್ರಿಕೆಟ್ನಲ್ಲಿ ಸಿಕ್ಸ್ ಸಿಡಿಸಿ ಅತೀ ಹೆಚ್ಚು ಬಾರಿ ಪಂದ್ಯವನ್ನು ಕೊನೆಗೊಳಿಸಿದ ವಿಶೇಷ ದಾಖಲೆಯೊಂದು ವಿರಾಟ್ ಕೊಹ್ಲಿ ಹೆಸರಿನಲ್ಲಿತ್ತು. ಕಿಂಗ್ ಕೊಹ್ಲಿ ಒಟ್ಟು 4 ಬಾರಿ ಸಿಕ್ಸ್ ಬಾರಿಸಿ ಪಂದ್ಯವನ್ನು ಅಂತ್ಯಗೊಳಿಸಿದ್ದರು.

ಇದೀಗ ಈ ದಾಖಲೆಯನ್ನು ಮುರಿಯುವಲ್ಲಿ ಹಾರ್ದಿಕ್ ಪಾಂಡ್ಯ ಯಶಸ್ವಿಯಾಗಿದ್ದಾರೆ. ಬಾಂಗ್ಲಾ ವಿರುದ್ಧ ಸಿಕ್ಸ್ ಸಿಡಿಸಿ ಪಂದ್ಯವನ್ನು ಅಂತ್ಯಗೊಳಿಸುವುದರೊಂದಿಗೆ, ಟೀಮ್ ಇಂಡಿಯಾ ಪರ ಅತ್ಯಧಿಕ ಬಾರಿ ಸಿಕ್ಸ್ ಬಾರಿಸಿ ಮ್ಯಾಚ್ ಕೊನೆಗೊಳಿಸಿದ ದಾಖಲೆಯನ್ನು ತಮ್ಮದಾಗಿಸಿಕೊಂಡರು. ಕುಂಗ್ಫು ಪಾಂಡ್ಯ ಈವರೆಗೆ 5 ಪಂದ್ಯಗಳನ್ನು ಸಿಕ್ಸ್ನೊಂದಿಗೆ ಅಂತ್ಯಗೊಳಿಸಿದ್ದಾರೆ.

ಈ ಮೂಲಕ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ಅಪರೂಪದ ದಾಖಲೆಯನ್ನು ಅಳಿಸಿ ಹಾಕುವಲ್ಲಿ ಹಾರ್ದಿಕ್ ಪಾಂಡ್ಯ ಯಶಸ್ವಿಯಾಗಿದ್ದಾರೆ. ಇನ್ನು ಪಾಂಡ್ಯ ಅವರ ಈ ಸ್ಪೋಟಕ ಬ್ಯಾಟಿಂಗ್ನೊಂದಿಗೆ ಟೀಮ್ ಇಂಡಿಯಾ 11.5 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 132 ರನ್ ಬಾರಿಸಿ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸಿದೆ.
