ವಾಂಖೆಡೆ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 14 ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಆರು ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಈ ಜಯದೊಂದಿಗೆ ಆರ್ಆರ್ ಅಗ್ರಸ್ಥಾನಕ್ಕೇರಿದರೆ, ಮುಂಬೈ ಹ್ಯಾಟ್ರಿಕ್ ಸೋಲಿನ ಮುಲಕ ಕೊನೆಯ ಸ್ಥಾನದಲ್ಲಿದೆ.
ಮುಂಬೈ ಇಂಡಿಯನ್ಸ್ ಸೋಲಿಗೆ ನಾಯಕ ಹಾರ್ದಿಕ್ ಪಾಂಡ್ಯ ಔಟಾಗಿದ್ದು ಪ್ರಮುಖ ಕಾರಣವಾಯಿತು. ಇಲ್ಲಿಂದು ಪಂದ್ಯ ಪುನಃ ಆರ್ಆರ್ ಕಡೆ ವಾಲಿತು. ಇದರ ನಡುವೆ ಆತಿಥೇಯ ಅಭಿಮಾನಿಗಳು ಪದೇ ಪದೇ ಪಾಂಡ್ಯ ಅವರನ್ನು ಗೇಲಿ ಮಾಡುತ್ತಿದ್ದರು. ಪಂದ್ಯ ಮುಗಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಮಾತನಾಡಿದ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ, ನನ್ನ ವಿಕೆಟ್ ಪಂದ್ಯವನ್ನು ಬದಲಾಯಿಸಿತು, ನಾವು ಇನ್ನೂ ಉತ್ತಮವಾಗಿ ಮಾಡಬಹುದಿತ್ತು ಎಂದು ಹೇಳಿದ್ದಾರೆ.
"ಇದು ಕಠಿಣ ರಾತ್ರಿ. ಈ ಪಂದ್ಯದಲ್ಲಿ ನಾವು ಬಯಸಿದ ರೀತಿಯಲ್ಲಿ ಆರಂಭ ಪಡೆದುಕೊಂಡಿಲ್ಲ. ನಾವು 150 ಅಥವಾ 160 ರನ್ ಗಳಿಸುವ ಅವಕಾಶವನ್ನು ಹೊಂದಿದ್ದೆವು ಎಂದು ನಾನು ಭಾವಿಸುತ್ತೇನೆ, ಆದರೆ ನನ್ನ ವಿಕೆಟ್ ಆಟವನ್ನು ಬದಲಾಯಿಸಿತು. ನಾನು ಇನ್ನಷ್ಟು ಉತ್ತಮವಾಗಿ ಏನಾದರು ಮಾಡಬಹುದಿತ್ತು,'' ಎಂದು ಪಾಂಡ್ಯ ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ಪಿಚ್ ಆರಂಭದಲ್ಲಿ ಬೌಲರ್‌ಗಳಿಗೆ ಹೆಚ್ಚಿನ ನೆರವು ನೀಡುತ್ತಿತ್ತು. ಇದನ್ನು ನೋಡುವುದು ಅನಿರೀಕ್ಷಿತ. ಇಲ್ಲಿ ಬೌಲರ್‌ಗಳು ಸಾಕಷ್ಟು ಕಷ್ಟಪಡುತ್ತಾರೆ. ಆದರೆ ಇದು ಅನಿರೀಕ್ಷಿತವಾಗಿತ್ತು. ಸೋಲಿನ ಹೊರತಾಗಿಯೂ, ತಂಡವು ಇನ್ನೂ ಚೇತರಿಸಿಕೊಳ್ಳಬಹುದು. ನಾವು ಇನ್ನಷ್ಟು ಹೆಚ್ಚು ಶಿಸ್ತು ಮತ್ತು ಧೈರ್ಯವನ್ನು ತೋರಿಸಬೇಕು ಎಂಬುದು ಹಾರ್ದಿಕ್ ಪಾಂಡ್ಯ ಮಾತು.
ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 125 ರನ್ ಕಲೆಹಾಕಿತಷ್ಟೆ. ರಾಜಸ್ಥಾನ್ ರಾಯಲ್ಸ್ ತಂಡ ರಿಯಾನ್ ಪರಾಗ್ ಅವರ ಅಜೇಯ 54 ರನ್ಗಳ ನೆರವಿನಿಂದ 15.3 ಓವರ್ಗಳಲ್ಲೇ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಆರ್ಆರ್ ಪರ ಟ್ರೆಂಟ್ ಬೌಲ್ಟ್ 3 ವಿಕೆಟ್ ಕಿತ್ತು ಮಿಂಚಿದರು.
ಸದ್ಯ ಮುಂಬೈ ಇಂಡಿಯನ್ಸ್ ಆಡಿದ ಮೂರು ಪಂದ್ಯಗಳ ಪೈಕಿ ಮೂರರಲ್ಲೂ ಸೋತಿದೆ. ಇದೇ ವಾಂಖೆಡೆ ಸ್ಟೇಡಿಯಂನಲ್ಲಿ ಏಪ್ರಿಲ್ 7 ರಂದು ನಡೆಯಲಿರುವ ತಮ್ಮ ಮುಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಎದುರಿಸಲಿದೆ. ಈ ಪಂದ್ಯದಲ್ಲಾದರೂ ಹಾರ್ದಿಕ್ ಪಡೆ ಗೆಲ್ಲುತ್ತಾ ನೋಡಬೇಕು.
Published On - 9:59 am, Tue, 2 April 24