ಟೀಮ್ ಇಂಡಿಯಾಗೆ ಬಿಗ್ ಶಾಕ್: ಸ್ಟಾರ್ ಆಟಗಾರ 4 ವಾರ ಕಣಕ್ಕಿಳಿಯುವಂತಿಲ್ಲ..!
India vs Australia: ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಸರಣಿಯು ಅಕ್ಟೋಬರ್ 19 ರಿಂದ ಶುರುವಾಗಲಿದೆ. ಕಾಂಗರೂನಾಡಿನಲ್ಲಿ ನಡೆಯಲಿರುವ ಈ ಸರಣಿಯಲ್ಲಿ 3 ಏಕದಿನ ಹಾಗೂ 5 ಟಿ20 ಪಂದ್ಯಗಳನ್ನಾಡಲಾಗುತ್ತದೆ. ಈ ಸರಣಿಗೆ ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್ ಅಲಭ್ಯರಾಗುವುದು ಖಚಿತವಾಗಿದೆ.
Updated on: Sep 30, 2025 | 3:10 PM

ಏಷ್ಯಾಕಪ್ ಗೆದ್ದು ಬೀಗಿರುವ ಟೀಮ್ ಇಂಡಿಯಾ ಇದೀಗ ಟೆಸ್ಟ್ ಸರಣಿಗಾಗಿ ಸಜ್ಜಾಗುತ್ತಿದೆ. ವೆಸ್ಟ್ ಇಂಡೀಸ್ ವಿರುದ್ಧದ 2 ಪಂದ್ಯಗಳ ಟೆಸ್ಟ್ ಮುಕ್ತಾಯದ ಬೆನ್ನಲ್ಲೇ ಭಾರತ ತಂಡ ಆಸ್ಟ್ರೇಲಿಯಾಗೆ ತೆರಳಲಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ 3 ಏಕದಿನ ಹಾಗೂ 5 ಟಿ20 ಪಂದ್ಯಗಳನ್ನಾಡಲಿದೆ.

ಆದರೆ ಈ ಪಂದ್ಯಗಳಿಗೆ ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅಲಭ್ಯರಾಗುವುದು ಬಹುತೇಕ ಖಚಿತವಾಗಿದೆ. ಏಷ್ಯಾಕಪ್ನ ಸೂಪರ್-4 ಹಂತದ ಕೊನೆಯ ಪಂದ್ಯದ ವೇಳೆ ಪಾಂಡ್ಯ ಕ್ವಾಡ್ರೈಸೆಪ್ಸ್ ನೋವಿನ ಸಮಸ್ಯೆಗೆ ಒಳಗಾಗಿದ್ದರು. ಹೀಗಾಗಿಯೇ ಅವರು ಪಾಕಿಸ್ತಾನ್ ವಿರುದ್ಧದ ಫೈನಲ್ ಪಂದ್ಯಕ್ಕೆ ಅಲಭ್ಯರಾಗಿದ್ದರು.

ಇದೀಗ ಹಾರ್ದಿಕ್ ಪಾಂಡ್ಯ ಅವರ ವೈದ್ಯಕೀಯ ವರದಿ ಬಂದಿದ್ದು, ಈ ವರದಿಯಲ್ಲಿ ಅವರ ಎಡ ಕಾಲಿನ ಸ್ನಾಯುಗಳಲ್ಲಿ (ಕ್ವಾಡ್ರೈಸೆಪ್ಸ್) ಸಮಸ್ಯೆ ಇರುವುದು ಕಂಡು ಬಂದಿದೆ. ಹೀಗಾಗಿ ಹಾರ್ದಿಕ್ ಪಾಂಡ್ಯಗೆ ವೈದ್ಯರು ಕನಿಷ್ಠ 4 ವಾರಗಳ ವಿಶ್ರಾಂತಿ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ನಾಲ್ಕು ವಾರಗಳಲ್ಲಿ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಒಟ್ಟು 8 ಪಂದ್ಯಗಳನ್ನಾಡಲಿದೆ. ಅಕ್ಟೋಬರ್ 19 ರಿಂದ ಶುರುವಾಗಲಿರುವ ಈ ಸರಣಿಯಲ್ಲಿ ಮೊದಲು 3 ಪಂದ್ಯಗಳ ಏಕದಿನ ಸರಣಿ ಆಡಲಾಗುತ್ತದೆ. ಇದಾದ ಬಳಿಕ 5 ಮ್ಯಾಚ್ಗಳ ಟಿ20 ಸರಣಿ ನಡೆಯಲಿದೆ.

ಇದೀಗ ಸ್ನಾಯು ಸೆಳೆತದ ಸಮಸ್ಯೆಗೆ ಒಳಗಾಗಿರುವ ಹಾರ್ದಿಕ್ ಪಾಂಡ್ಯ ಆಸ್ಟ್ರೇಲಿಯಾ ವಿರುದ್ಧದ ಸರಣಿಯಿಂದ ಸಂಪೂರ್ಣ ಹೊರಗುಳಿಯುವುದು ಖಚಿತ. ಅಲ್ಲದೆ ನವೆಂಬರ್ನಲ್ಲಿ ನಡೆಯಲಿರುವ ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿಯ ಮೂಲಕ ಕಂಬ್ಯಾಕ್ ಮಾಡುವ ಸಾಧ್ಯತೆಯಿದೆ.
