Updated on: Dec 02, 2024 | 8:03 AM
ಪಾಕಿಸ್ತಾನ್ ತಂಡದ ವೇಗಿ ಹ್ಯಾರಿಸ್ ರೌಫ್ ಹೊಸ ದಾಖಲೆ ಬರೆದಿದ್ದಾರೆ. ಬುಲವಾಯೊದಲ್ಲಿ ನಡೆದ ಝಿಂಬಾಬ್ವೆ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿದ ರೌಫ್ 3 ಓವರ್ಗಳಲ್ಲಿ 17 ರನ್ ನೀಡಿ 3 ವಿಕೆಟ್ ಕಬಳಿಸಿದ್ದರು.
ಈ ಮೂರು ವಿಕೆಟ್ಗಳೊಂದಿಗೆ ಪಾಕಿಸ್ತಾನ್ ಪರ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಶಾದಾಬ್ ಖಾನ್ ಹೆಸರಿನಲ್ಲಿತ್ತು. ಇದೀಗ ಈ ದಾಖಲೆ ಮುರಿಯುವಲ್ಲಿ ರೌಫ್ ಯಶಸ್ವಿಯಾಗಿದ್ದಾರೆ.
ಪಾಕಿಸ್ತಾನ್ ಪರ 104 ಟಿ20 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಶಾದಾಬ್ ಖಾನ್ 96 ಇನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿದ್ದಾರೆ. ಈ ವೇಳೆ 2089 ಎಸೆತಗಳನ್ನು ಎಸೆದಿರುವ ಅವರು ಒಟ್ಟು 107 ವಿಕೆಟ್ ಕಬಳಿಸಿದ್ದರು. ಈ ಮೂಲಕ ಪಾಕ್ ಪರ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದರು.
ಇದೀಗ ಶಾದಾಬ್ ಖಾನ್ರನ್ನು ಹಿಂದಿಕ್ಕಿ ಹ್ಯಾರಿಸ್ ರೌಫ್ ಅಗ್ರಸ್ಥಾನಕ್ಕೇರಿದ್ದಾರೆ. ಪಾಕ್ ಪರ 74 ಇನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿರುವ ರೌಫ್ 1642 ಎಸೆತಗಳಲ್ಲಿ 109 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ನ ಪಾಕ್ ತಂಡದ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡಿದ್ದಾರೆ.
ಇನ್ನು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತ್ಯಧಿಕ ವಿಕೆಟ್ ಕಬಳಿಸಿದ ವಿಶ್ವ ದಾಖಲೆ ನ್ಯೂಝಿಲೆಂಡ್ನ ಟಿಮ್ ಸೌಥಿ ಹೆಸರಿನಲ್ಲಿದೆ. ಕಿವೀಸ್ ಪರ 123 ಇನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿರುವ ಸೌಥಿ 2753 ಎಸೆತಗಳಲ್ಲಿ 164 ವಿಕೆಟ್ ಕಬಳಿಸಿ ಈ ಸಾಧನೆ ಮಾಡಿದ್ದಾರೆ.
ಟೀಮ್ ಇಂಡಿಯಾ ಪರ ಟಿ20 ಕ್ರಿಕೆಟ್ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ದಾಖಲೆ ಇರುವುದು ಯುಜ್ವೇಂದ್ರ ಚಹಲ್ ಹೆಸರಿನಲ್ಲಿ. 79 ಇನಿಂಗ್ಸ್ಗಳಲ್ಲಿ 1764 ಎಸೆತಗಳನ್ನು ಎಸೆದಿರುವ ಚಹಲ್ ಒಟ್ಟು 96 ವಿಕೆಟ್ ಕಬಳಿಸಿ ಈ ದಾಖಲೆ ನಿರ್ಮಿಸಿದ್ದಾರೆ.