3468 ಎಸೆತಗಳಲ್ಲಿ ವಿಶ್ವ ದಾಖಲೆ ಬರೆದ ಹ್ಯಾರಿ ಬ್ರೂಕ್
Australia vs England: ಆ್ಯಶಸ್ ಸರಣಿಯ 4ನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 152 ರನ್ಗಳಿಗೆ ಆಲೌಟ್ ಆದರೆ, ಇಂಗ್ಲೆಂಡ್ 110 ರನ್ಗಳಿಸಿ ಸರ್ವಪತನ ಕಂಡಿದೆ. ಇದರ ನಡುವೆ 41 ರನ್ಗಳಿಸುವ ಮೂಲಕ ಇಂಗ್ಲೆಂಡ್ ಬ್ಯಾಟರ್ ಹ್ಯಾರಿ ಬ್ರೂಕ್ ಭರ್ಜರಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
Updated on: Dec 27, 2025 | 7:54 AM

ಮೆಲ್ಬೋರ್ನ್ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್ ಪಂದ್ಯದ ಮೂಲಕ ಇಂಗ್ಲೆಂಡ್ ತಂಡದ ಸ್ಫೋಟಕ ಬ್ಯಾಟ್ಸ್ಮನ್ ಹ್ಯಾರಿ ಬ್ರೂಕ್ (Harry Brook) ಹೊಸ ವಿಶ್ವ ದಾಖಲೆ ಬರೆದಿದ್ದಾರೆ. ಅದು ಕೂಡ ಆಸೀಸ್ ದಾಂಡಿಗ ಆ್ಯಡಂ ಗಿಲ್ಕ್ರಿಸ್ಟ್ ಅವರ ವರ್ಲ್ಡ್ ರೆಕಾರ್ಡ್ ಮುರಿಯುವ ಮೂಲಕ ಎಂಬುದು ವಿಶೇಷ.

ಎಂಸಿಜಿ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಬ್ರೂಕ್ 34 ಎಸೆತಗಳಲ್ಲಿ 41 ರನ್ ಬಾರಿಸಿದ್ದಾರೆ. ಈ 41 ರನ್ಗಳೊಂದಿಗೆ ಹ್ಯಾರಿ ಬ್ರೂಕ್ ಟೆಸ್ಟ್ ಕ್ರಿಕೆಟ್ನಲ್ಲಿ 3000 ರನ್ ಪೂರೈಸಿದ್ದಾರೆ. ಅದು ಕೂಡ ಅತೀ ಕಡಿಮೆ ಎಸೆತಗಳಲ್ಲಿ.

ಅಂದರೆ 148 ವರ್ಷಗಳ ಟೆಸ್ಟ್ ಇತಿಹಾಸದಲ್ಲೇ ಅತೀ ಕಡಿಮೆ ಎಸೆತಗಳಲ್ಲಿ 3000 ರನ್ ಕಲೆಹಾಕಿದ ವಿಶ್ವ ದಾಖಲೆ ಇಂಗ್ಲೆಂಡ್ ಬ್ಯಾಟರ್ ಹ್ಯಾರಿ ಬ್ರೂಕ್ ಪಾಲಾಗಿದೆ. ಇದಕ್ಕೂ ಮುನ್ನ ಈ ಸಿಡಿಲಬ್ಬರದ ದಾಖಲೆ ಆಸ್ಟ್ರೇಲಿಯಾ ತಂಡದ ಮಾಜಿ ವಿಕೆಟ್ ಕೀಪರ್ ಆ್ಯಡಂ ಗಿಲ್ಕ್ರಿಸ್ಟ್ ಅವರ ಹೆಸರಿನಲ್ಲಿತ್ತು.

ಆ್ಯಡಂ ಗಿಲ್ಕ್ರಿಸ್ಟ್ ಕೇವಲ 3610 ಎಸೆತಗಳಲ್ಲಿ 3000 ರನ್ ಕಲೆಹಾಕುವ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತೀ ವೇಗವಾಗಿ 3 ಸಾವಿರ ರನ್ ಗಳಿಸಿದ ಬ್ಯಾಟರ್ ಎನಿಸಿಕೊಂಡಿದ್ದರು. ಇದೀಗ ಈ ದಾಖಲೆಯನ್ನು ಮುರಿಯುವಲ್ಲಿ ಹ್ಯಾರಿ ಬ್ರೂಕ್ ಯಶಸ್ವಿಯಾಗಿದ್ದಾರೆ.

ಹ್ಯಾರಿ ಬ್ರೂಕ್ 3000 ರನ್ಗಳಿಸಲು ತೆಗೆದುಕೊಂಡಿರುವುದು ಕೇವಲ 3468 ಎಸೆತಗಳನ್ನು ಮಾತ್ರ. ಈ ಮೂಲಕ ಟೆಸ್ಟ್ ಇತಿಹಾಸದಲ್ಲೇ ಅತೀ ಕಡಿಮೆ ಎಸೆತಗಳಲ್ಲಿ 3 ಸಾವಿರ ರನ್ ಕಲೆಹಾಕಿದ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಅದು ಕೂಡ 54.18 ಸರಾಸರಿಯೊಂದಿಗೆ. ಹೀಗಾಗಿ ಮುಂಬರುವ ದಿನಗಳಲ್ಲೂ ಬ್ರೂಕ್ ಕಡೆಯಿಂದ ಭರ್ಜರಿ ದಾಖಲೆಗಳನ್ನು ನಿರೀಕ್ಷಿಸಬಹುದು.
