IPL 2026: ಇಬ್ಬರು OP… RCB ಎಷ್ಟು ಆಟಗಾರರನ್ನು ಖರೀದಿಸಬಹುದು?
IPL 2026 Auction: ಇಂಡಿಯನ್ ಪ್ರೀಮಿಯರ್ ಲೀಗ್ನ 19ನೇ ಆವೃತ್ತಿಗಾಗಿ ಡಿಸೆಂಬರ್ 16 ರಂದು ಮಿನಿ ಹರಾಜು ನಡೆಯಲಿದೆ. ಅಬುಧಾಬಿಯಲ್ಲಿ ನಡೆಯಲಿರುವ ಈ ಹರಾಜಿನಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿ 6+2 ಯೋಜನೆಯೊಂದಿಗೆ ಕಾಣಿಸಿಕೊಳ್ಳಲಿದೆ. ಅಂದರೆ ಒಟ್ಟು 8 ಆಟಗಾರರನ್ನು ಖರೀದಿಸಲು ಆರ್ಸಿಬಿಗೆ ಅವಕಾಶವಿದೆ,
Updated on:Nov 16, 2025 | 1:01 PM

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ಕ್ಕಾಗಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿ ಬರೋಬ್ಬರಿ 17 ಆಟಗಾರರನ್ನು ತಂಡದಲ್ಲೇ ಉಳಿಸಿಕೊಂಡಿದೆ. ಅಲ್ಲದೆ 8 ಆಟಗಾರರನ್ನು ತಂಡದಿಂದ ರಿಲೀಸ್ ಮಾಡಿದೆ.

ಆರ್ಸಿಬಿ ತಂಡದಿಂದ ರಿಲೀಸ್ ಆದ ಆಟಗಾರರೆಂದರೆ ಲಿಯಾಮ್ ಲಿವಿಂಗ್ಸ್ಟೋನ್, ಮಯಾಂಕ್ ಅಗರ್ವಾಲ್, ಟಿಮ್ ಸೈಫರ್ಟ್, ಬ್ಲೆಸಿಂಗ್ ಮುಝರಬಾನಿ, ಸ್ವಸ್ತಿಕ್ ಚಿಕಾರ, ಮನೋಜ್ ಭಾಂಡಗೆ, ಮೋಹಿತ್ ರಾಠಿ, ಲುಂಗಿ ಎನ್ಗಿಡಿ. ಈ ಎಂಟು ಆಟಗಾರರ ರಿಲೀಸ್ನೊಂದಿಗೆ ಆರ್ಸಿಬಿ 16.40 ಕೋಟಿ ರೂ. ಹರಾಜು ಮೊತ್ತ ಹೊಂದಿದೆ.

ಅಂದರೆ ಐಪಿಎಲ್ ಮಿನಿ ಹರಾಜಿನಲ್ಲಿ ಆರ್ಸಿಬಿ 16.40 ಕೋಟಿ ರೂ.ನೊಂದಿಗೆ ಕಾಣಿಸಿಕೊಳ್ಳಲಿದೆ. ಅಲ್ಲದೆ ಈ ಮೊತ್ತದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಒಟ್ಟು 8 ಆಟಗಾರರನ್ನು ಖರೀದಿಸಬಹುದು. ಅಂದರೆ ಐಪಿಎಲ್ ನಿಯಮದ ಪ್ರಕಾರ ಒಂದು ತಂಡವು ಗರಿಷ್ಠ 25 ಆಟಗಾರರನ್ನು ಹೊಂದಬಹುದು.

ಇತ್ತ ಆರ್ಸಿಬಿ ತಂಡವು 17 ಆಟಗಾರರನ್ನು ರಿಟೈನ್ ಮಾಡಿಕೊಂಡಿರುವ ಕಾರಣ ಮುಂದಿನ ಸೀಸನ್ಗಾಗಿ ಇನ್ನೂ 8 ಆಟಗಾರರನ್ನು ಖರೀದಿಸಬಹುದು. ಈ 8 ಆಟಗಾರರಲ್ಲಿ 6 ಮಂದಿ ಭಾರತೀಯರನ್ನು ಖರೀದಿಸಬಹುದು. ಅಂದರೆ ಆರ್ಸಿಬಿಗೆ ಉಳಿದಿರುವುದು 6+2 ಸ್ಲಾಟ್ಗಳು ಮಾತ್ರ.

ಐಪಿಎಲ್ ನಿಯಮದ ಪ್ರಕಾರ ಒಂದು ತಂಡದಲ್ಲಿ 8 ವಿದೇಶಿ ಆಟಗಾರರಿಗೆ ಮಾತ್ರ ಅವಕಾಶ ನೀಡಬಹುದು. ಆರ್ಸಿಬಿ ತಂಡದಲ್ಲಿ ಈಗಾಗಲೇ ವಿದೇಶಿ ಆಟಗಾರರಾಗಿ ಫಿಲ್ ಸಾಲ್ಟ್, ಜೋಶ್ ಹೇಝಲ್ವುಡ್, ನುವಾನ್ ತುಷಾರ, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್ ಹಾಗೂ ಜೇಕಬ್ ಬೆಥೆಲ್ ಇದ್ದಾರೆ. ಅದರಂತೆ ಹರಾಜಿನ ಮೂಲಕ ಇಬ್ಬರು ವಿದೇಶಿ ಆಟಗಾರರನ್ನು (Overseas Players) ಮಾತ್ರ ಖರೀದಿಸಲು ಆರ್ಸಿಬಿಗೆ ಅವಕಾಶವಿದೆ.

ಇನ್ನುಳಿದ ಸ್ಥಾನಗಳಿಗೆ ಭಾರತೀಯ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಬಹುದು. ಅದರಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು 6+ 2 ಲೆಕ್ಕಾಚಾರದೊಂದಿಗೆ ಹರಾಜಿನಲ್ಲಿ ಕಾಣಿಸಿಕೊಳ್ಳಲಿದೆ. ಈ ಮೂಲಕ 16.40 ಕೋಟಿ ರೂ.ನಲ್ಲಿ ಆರ್ಸಿಬಿ ಯಾರನ್ನೆಲ್ಲಾ ಖರೀದಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.
Published On - 1:00 pm, Sun, 16 November 25
