- Kannada News Photo gallery Cricket photos ICC Test Rankings Rohit Sharma out of top 10, virat kohli lost no 6 spot
ICC Rankings: ನೂತನ ಟೆಸ್ಟ್ ರ್ಯಾಂಕಿಂಗ್ನಲ್ಲಿ 6ನೇ ಸ್ಥಾನದಿಂದ ಜಾರಿದ ಕೊಹ್ಲಿ; ಟಾಪ್ 10 ರಿಂದ ರೋಹಿತ್ ಔಟ್!
ICC Rankings: ಪ್ರಕಟವಾಗಿರುವ ನೂತನ ರ್ಯಾಂಕಿಂಗ್ ಪಟ್ಟಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ಕುಸಿತ ಕಂಡಿದ್ದರೆ, ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಭರ್ಜರಿ ಮುಂಬಡ್ತಿ ಪಡೆದಿದ್ದಾರೆ.
Updated on: Jan 25, 2024 | 9:22 PM

ಒಂದೆಡೆ ಭಾರತ-ಇಂಗ್ಲೆಂಡ್ ನಡುವೆ ಮೊದಲ ಟೆಸ್ಟ್ ಆರಂಭವಾಗಿದ್ದರೆ, ಇನ್ನೊಂದೆಡೆ ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ನಡುವೆ ಎರಡನೇ ಪಂದ್ಯ ಆರಂಭವಾಗಿದೆ. ಈ ಎರಡು ಟೆಸ್ಟ್ ಪಂದ್ಯಗಳ ನಡುವೆ ಐಸಿಸಿ, ಟೆಸ್ಟ್ ಬ್ಯಾಟರ್ಗಳ ನೂತನ ಶ್ರೇಯಾಂಕವನ್ನು ಬಿಡುಗಡೆ ಮಾಡಿದೆ.

ಪ್ರಕಟವಾಗಿರುವ ನೂತನ ರ್ಯಾಂಕಿಂಗ್ ಪಟ್ಟಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ಕುಸಿತ ಕಂಡಿದ್ದರೆ, ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಭರ್ಜರಿ ಮುಂಬಡ್ತಿ ಪಡೆದಿದ್ದಾರೆ.

ಐಸಿಸಿ ಬಿಡುಗಡೆ ಮಾಡಿರುವ ಟೆಸ್ಟ್ ಶ್ರೇಯಾಂಕದಲ್ಲಿ ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ 864 ರೇಟಿಂಗ್‌ನೊಂದಿಗೆ ನಂಬರ್ ಒನ್ ಸ್ಥಾನದಲ್ಲಿದ್ದರೆ, ಇಂಗ್ಲೆಂಡ್‌ನ ಜೋ ರೂಟ್ 859 ರೇಟಿಂಗ್‌ನೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.

ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ 807 ರೇಟಿಂಗ್‌ನೊಂದಿಗೆ ಮೂರನೇ ಸ್ಥಾನದಲ್ಲಿದ್ದರೆ, ಮತ್ತೊಬ್ಬ ಆಸೀಸ್ ಕ್ರಿಕೆಟಿಗ ಮಾರ್ನಸ್ ಲಬುಶೇನ್ 787 ರೇಟಿಂಗ್‌ನೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅಂದರೆ ಈ ಬಾರಿಯ ಟಾಪ್ 4 ರ ರ್ಯಾಂಕಿಂಗ್ನಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಆದರೆ ಆಸ್ಟ್ರೇಲಿಯದ ಟ್ರಾವಿಸ್ ಹೆಡ್ ಈ ಬಾರಿಯ ಶ್ರೇಯಾಂಕದಲ್ಲಿ ಭಾರಿ ಲಾಭ ಪಡೆದಿದ್ದಾರೆ. ವಿಂಡೀಸ್ ವಿರುದ್ಧ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿರುವ ಹೆಡ್, 786 ರೇಟಿಂಗ್‌ನೊಂದಿಗೆ ಏಳು ಸ್ಥಾನ ಜಿಗಿದು ಐದನೇ ಸ್ಥಾನಕ್ಕೆ ತಲುಪಿದ್ದಾರೆ.

ನ್ಯೂಜಿಲೆಂಡ್‌ನ ಡೇರಿಲ್ ಮಿಚೆಲ್ ಕೂಡ 786 ರೇಟಿಂಗ್ ಹೊಂದಿದ್ದು, ಆರನೇ ಸ್ಥಾನದಲ್ಲಿದ್ದರೆ, ಈ ನಡುವೆ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ 775 ರ ರೇಟಿಂಗ್‌ನೊಂದಿಗೆ ಆರನೇ ಸ್ಥಾನದಿಂದ ಈಗ ಏಳನೇ ಸ್ಥಾನಕ್ಕೆ ಕುಸಿದಿದ್ದಾರೆ.

ಇಂಗ್ಲೆಂಡ್‌ನ ಹ್ಯಾರಿ ಬ್ರೂಕ್ ಕೂಡ ಒಂದು ಸ್ಥಾನ ಕಳೆದುಕೊಂಡಿದ್ದು, 773 ರೇಟಿಂಗ್‌ನೊಂದಿಗೆ ಎಂಟನೇ ಸ್ಥಾನವನ್ನು ಪಡೆದಿದ್ದಾರೆ. ಆಸ್ಟ್ರೇಲಿಯಾದ ಉಸ್ಮಾನ್ ಖವಾಜಾ ಮೊದಲಿನಂತೆ ಒಂಬತ್ತನೇ ಸ್ಥಾನದಲ್ಲಿದ್ದಾರೆ.

ಉಳಿದಂತೆ ಪಾಕಿಸ್ತಾನದ ಮಾಜಿ ನಾಯಕ ಬಾಬರ್ ಆಝಂ ಕೂಡ ಎರಡು ಸ್ಥಾನ ಕಳೆದುಕೊಂಡಿದ್ದು, 768 ರೇಟಿಂಗ್‌ನೊಂದಿಗೆ ಅಗ್ರ 10 ರಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಆದರೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಟಾಪ್ 10 ರಿಂದ ಹೊರಬಿದ್ದಿದ್ದು, ಇದೀಗ ಒಂದು ಸ್ಥಾನ ಕಳೆದುಕೊಂಡು 11ನೇ ಸ್ಥಾನಕ್ಕೆ ಜಾರಿದ್ದಾರೆ. ಪ್ರಸ್ತುತ 748 ರೇಟಿಂಗ್ ಹೊಂದಿರುವ ರೋಹಿತ್ ಶರ್ಮಾ ಶೀಘ್ರದಲ್ಲೇ ಟಾಪ್ 10 ರೊಳಗೆ ಅವಕಾಶ ಪಡೆಯುವ ಸಾಧ್ಯತೆಗಳಿವೆ.




