- Kannada News Photo gallery Cricket photos ICC Womens ODI World Cup 2025: England Played 175 Dot Balls
182 ರನ್ಗಳಿಸಲು 175 ಡಾಟ್ ಬಾಲ್ ಆಡಿದ ಇಂಗ್ಲೆಂಡ್..!
ICC Womens ODI World Cup 2025: ಮಹಿಳಾ ಏಕದಿನ ವಿಶ್ವಕಪ್ನ 8ನೇ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ್ ತಂಡವು 178 ರನ್ಗಳಿಸಿ ಆಲೌಟ್ ಆಗಿತ್ತು. ಈ ಗುರಿಯನ್ನು ಇಂಗ್ಲೆಂಡ್ 46.1 ಓವರ್ಗಳಲ್ಲಿ ಚೇಸ್ ಮಾಡಿ 4 ವಿಕೆಟ್ಗಳ ಗೆಲುವು ದಾಖಲಿಸಿದೆ.
Updated on: Oct 08, 2025 | 10:53 AM

ICC Womens ODI World Cup 2025: ಪ್ರಸ್ತುತ ನಡೆಯುತ್ತಿರುವ ಮಹಿಳಾ ಏಕದಿನ ವಿಶ್ವಕಪ್ನ 8ನೇ ಪಂದ್ಯವು ಡಾಟ್ ಬಾಲ್ಗಳಿಂದ ಸುದ್ದಿಯಲ್ಲಿದೆ. ಗುವಾಹಟಿಯ ಬರ್ಸಾಪರ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಬಾಂಗ್ಲಾದೇಶ್ ಹಾಗೂ ಇಂಗ್ಲೆಂಡ್ ಮಹಿಳಾ ತಂಡಗಳು ಮುಖಾಮುಖಿಯಾಗಿತ್ತು.

ಈ ಮ್ಯಾಚ್ನಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕಿ ನ್ಯಾಟ್ ಸ್ಕೀವರ್ ಬ್ರಂಟ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ್ ಮಹಿಳಾ ತಂಡದ ಪರ ಶೋಭನಾ ಮೊಸ್ಟರಿ 60 ರನ್ ಬಾರಿಸಿದರು. ಈ ಅರ್ಧಶತಕದ ನೆರವಿನೊಂದಿಗೆ ಬಾಂಗ್ಲಾದೇಶ್ ತಂಡವು 49.4 ಓವರ್ಗಳಲ್ಲಿ 178 ರನ್ಗಳಿಸಿ ಆಲೌಟ್ ಆಯಿತು.

179 ರನ್ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡವು ನಿರೀಕ್ಷಿತ ಆರಂಭ ಪಡೆದಿರಲಿಲ್ಲ. ಆರಂಭಿಕರಾಗಿ ಕಣಕ್ಕಿಳಿದ ಟ್ಯಾಮಿ ಬ್ಯೂಮೌಂಟ್ 13 ರನ್ಗಳಿಸಿ ವಿಕೆಟ್ ಒಪ್ಪಿಸಿದರೆ, ಆ್ಯಮಿ ಜೋನ್ಸ್ 1 ರನ್ಗಳಿಸಿ ಔಟಾದರು. ಅಲ್ಲದೆ 69 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಈ ಹಂತದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ ಹೀದರ್ ನೈಟ್ 111 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 8 ಫೋರ್ಗಳೊಂದಿಗೆ 79 ರನ್ ಬಾರಿಸಿದರು. ಅತ್ತ ಉಳಿದ ಬ್ಯಾಟರ್ಗಳು ಕೂಡ ರಕ್ಷಣಾತ್ಮಕ ಆಟದೊಂದಿಗೆ ರನ್ಗಳಿಸಿದರು. ಪರಿಣಾಮ ಇಂಗ್ಲೆಂಡ್ ತಂಡವು ಗುರಿ ತಲುಪಲು ಬರೋಬ್ಬರಿ 277 ಎಸೆತಗಳನ್ನು ಎದುರಿಸಿದರು.

ಕುತೂಹಲಕಾರಿ ವಿಷಯ ಎಂದರೆ 277 ಎಸೆತಗಳಲ್ಲಿ ಇಂಗ್ಲೆಂಡ್ ತಂಡವು ಬರೋಬ್ಬರಿ 175 ಎಸೆತಗಳನ್ನು ಡಾಟ್ ಬಾಲ್ ಆಡಿದ್ದರು. ಅಂದರೆ 179 ರನ್ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್ ಮಹಿಳಾ ಬ್ಯಾಟರ್ಗಳು ಬರೋಬ್ಬರಿ 175 ಎಸೆತಗಳಲ್ಲಿ ಯಾವುದೇ ರನ್ಗಳಿಸಿರಲಿಲ್ಲ. ಇದಾಗ್ಯೂ ಉಳಿದ 102 ಎಸೆತಗಳಲ್ಲಿ 182 ರನ್ ಬಾರಿಸಿ 4 ವಿಕೆಟ್ಗಳ ಜಯ ಸಾಧಿಸಿರುವುದು ವಿಶೇಷ.




