Updated on: Jun 22, 2023 | 4:22 PM
ICC World Cup Qualifiers 2023: ಹರಾರೆಯಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ನಿಕೋಲಸ್ ಪೂರನ್ ಸ್ಪೋಟಕ ಶತಕ ಸಿಡಿಸಿ ಮಿಂಚಿದ್ದಾರೆ. ನೇಪಾಳ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಸೋತರೂ ವಿಂಡೀಸ್ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆಯಿತು.
ಅದರಂತೆ ಇನಿಂಗ್ಸ್ ಆರಂಭಿಸಿದ ವೆಸ್ಟ್ ಇಂಡೀಸ್ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕರಾದ ಬ್ರೆಂಡನ್ ಕಿಂಗ್ (32) ಹಾಗೂ ಕೈಲ್ ಮೇಯರ್ಸ್ (1) ಬೇಗನೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಜಾನ್ಸನ್ ಚಾರ್ಲ್ಸ್ (0) ಶೂನ್ಯಕ್ಕೆ ಔಟಾದರು.
ಈ ಹಂತದಲ್ಲಿ ಜೊತೆಯಾದ ನಾಯಕ ಶಾಯ್ ಹೋಪ್ ಹಾಗೂ ನಿಕೋಲಸ್ ಪೂರನ್ ಇನಿಂಗ್ಸ್ ಕಟ್ಟುವ ಜವಾಬ್ದಾರಿ ಹೆಗಲೇರಿಸಿಕೊಂಡರು. ಅದರಂತೆ ಶಾಯ್ ಹೋಪ್ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದರೆ, ಪೂರನ್ ಪವರ್ಫುಲ್ ಹೊಡೆತಗಳ ಮೂಲಕ ಗಮನ ಸೆಳೆದರು.
108 ಎಸೆತಗಳನ್ನು ಎದುರಿಸಿದ ಶಾಯ್ ಹೋಪ್ 15ನೇ ಏಕದಿನ ಶತಕ ಪೂರೈಸಿದರು. ಮತ್ತೊಂದೆಡೆ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಪೂರನ್ ನೇಪಾಳ ಬೌಲರ್ಗಳ ಬೆಂಡೆತ್ತಿದರು.
ಪರಿಣಾಮ 4 ಭರ್ಜರಿ ಸಿಕ್ಸ್ ಹಾಗೂ 9 ಫೋರ್ನೊಂದಿಗೆ 81 ಎಸೆತಗಳಲ್ಲಿ ನಿಕೋಲಸ್ ಪೂರನ್ ಶತಕ ಸಿಡಿಸಿದರು. ಈ ಶತಕದ ಬಳಿಕ ದ್ವಿಶತಕದ ಜೊತೆಯಾಟ ಮುಂದುವರೆಸಿದ ಪೂರನ್-ಹೋಪ್ 45 ಓವರ್ಗಳಲ್ಲಿ ತಂಡದ ಮೊತ್ತವನ್ನು 285ರ ಗಡಿದಾಟಿಸಿದರು.
ಈ ಹಂತದಲ್ಲಿ 94 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 10 ಫೋರ್ನೊಂದಿಗೆ 115 ರನ್ ಬಾರಿಸಿದ್ದ ನಿಕೋಲಸ್ ಪೂರನ್ ವಿಕೆಟ್ ಒಪ್ಪಿಸಿದರು. ಮತ್ತೊಂದೆಡೆ ಶಾಯ್ ಹೋಪ್ 129 ಎಸೆತಗಳಲ್ಲಿ 10 ಫೋರ್ ಹಾಗೂ 3 ಸಿಕ್ಸ್ನೊಂದಿಗೆ 132 ರನ್ ಬಾರಿಸಿದರು. ಪರಿಣಾಮ ವೆಸ್ಟ್ ಇಂಡೀಸ್ ತಂಡವು ನಿಗದಿತ 50 ಓವರ್ಗಳಲ್ಲಿ 339 ರನ್ ಪೇರಿಸಿದೆ.