- Kannada News Photo gallery Cricket photos IND vs AFG rohit sharma rinku singh break highest fifth wicket partnership in T20Is
IND vs AFG: ಟಿ20ಯಲ್ಲಿ ವಿಶ್ವ ದಾಖಲೆ ನಿರ್ಮಿಸಿದ ರೋಹಿತ್-ರಿಂಕು ಜೋಡಿ..!
IND vs AFG: ಅಫ್ಘಾನಿಸ್ತಾನ ವಿರುದ್ಧದ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಐದನೇ ವಿಕೆಟ್ಗಳ 190 ರನ್ಗಳ ಜೊತೆಯಾಟವನ್ನಾಡಿದ ನಾಯಕ ರೋಹಿತ್ ಶರ್ಮಾ ಹಾಗೂ ರಿಂಕು ಸಿಂಗ್ ಈ ಚುಟುಕು ಮಾದರಿಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.
Updated on: Jan 17, 2024 | 10:20 PM

ಅಫ್ಘಾನಿಸ್ತಾನ ವಿರುದ್ಧದ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಐದನೇ ವಿಕೆಟ್ಗಳ 190 ರನ್ಗಳ ಜೊತೆಯಾಟವನ್ನಾಡಿದ ನಾಯಕ ರೋಹಿತ್ ಶರ್ಮಾ ಹಾಗೂ ರಿಂಕು ಸಿಂಗ್ ಈ ಚುಟುಕು ಮಾದರಿಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.

ಬೆಂಗಳೂರಿನಲ್ಲಿ ನಡೆಯುತ್ತಿರುವ ಮೂರನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 212 ರನ್ ಕಲೆಹಾಕಿತು. ಆದರೆ ಒಂದು ಹಂತದಲ್ಲಿ ತಂಡ ಕೇವಲ 22 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಆದರೆ ಇಲ್ಲಿಂದ ತಂಡದ ಇನ್ನಿಂಗ್ಸ್ ಜವಾಬ್ದಾರಿ ಹೊತ್ತ ನಾಯಕ ರೋಹಿತ್ ಶರ್ಮಾ ಮತ್ತು ರಿಂಕು ಸಿಂಗ್ ಅವರ ಸ್ಫೋಟಕ ಬ್ಯಾಟಿಂಗ್ ತಂಡವನ್ನು 200 ರನ್ಗಳ ಗಡಿ ದಾಟುವಂತೆ ಮಾಡಿತು. ಈ ಹಂತದಲ್ಲಿ ರೋಹಿತ್ ಶತಕ ಸಿಡಿಸಿ ಮಿಂಚಿದರೆ, ರಿಂಕು ಅರ್ಧಶತಕದ ಇನ್ನಿಂಗ್ಸ್ ಆಡಿದರು. ಈ ಮೂಲಕ ಈ ಇಬ್ಬರೂ ಆಟಗಾರರು ತಮ್ಮ ಹೆಸರಿನಲ್ಲಿ ವಿಶ್ವದಾಖಲೆ ಕೂಡ ನಿರ್ಮಿಸಿದರು.

ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಕೇವಲ 69 ಎಸೆತಗಳಲ್ಲಿ 11 ಬೌಂಡರಿ ಹಾಗೂ 8 ಸಿಕ್ಸರ್‌ಗಳ ಸಹಿತ ಅಜೇಯ 121 ರನ್ ಸಿಡಿಸಿದರೆ, ನಾಯಕನಿಗೆ ಉತ್ತಮ ಸಾಥ್ ನೀಡಿದ ರಿಂಕು ಸಿಂಗ್ 39 ಎಸೆತಗಳಲ್ಲಿ 2 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ ಅಜೇಯ 69 ರನ್ಗಳ ಇನ್ನಿಂಗ್ಸ್ ಆಡಿದರು.

ಹೀಗಾಗಿ ಈ ಇಬ್ಬರೂ ಆಟಗಾರರು 5ನೇ ವಿಕೆಟ್‌ಗೆ ಅಜೇಯ 190 ರನ್ಗಳ ಜೊತೆಯಾಟ ನೀಡಿದರು. ಇದು ಟಿ20 ಕ್ರಿಕೆಟ್‌ನಲ್ಲಿ 5ನೇ ವಿಕೆಟ್‌ಗೆ ದಾಖಲಾದ ದೊಡ್ಡ ಜೊತೆಯಾಟವಾಗಿದೆ. ಇದಕ್ಕೂ ಮುನ್ನ ನೇಪಾಳದ ಕುಶಾಲ್ ಮಾಲ್ ಮತ್ತು ದೀಪೇಂದ್ರ ಸಿಂಗ್ ಐರಿ 2023ರಲ್ಲಿ 5ನೇ ವಿಕೆಟ್‌ಗೆ 145 ರನ್ ಸೇರಿಸಿದ್ದು, ಇದುವರೆಗಿನ ದಾಖಲೆಯಾಗಿತ್ತು.

ರೋಹಿತ್ ಶರ್ಮಾ ಮತ್ತು ರಿಂಕು ಸಿಂಗ್ ಕಲೆಹಾಕಿದ 190 ರನ್ಗಳ ಜೊತೆಯಾಟ ಅಂತಾರಾಷ್ಟ್ರೀಯ ಟಿ20ಯಲ್ಲಿ ಭಾರತದ ಪರ ಯಾವುದೇ ವಿಕೆಟ್‌ಗೆ ಕಲೆಹಾಕಿದ ಗರಿಷ್ಠ ಜೊತೆಯಾಟವಾಗಿದೆ. ಈ ಮೊದಲು ಈ ದಾಖಲೆ ದೀಪಕ್ ಹೂಡಾ ಮತ್ತು ಸಂಜು ಸ್ಯಾಮ್ಸನ್ ಜೋಡಿ ಹೆಸರಿನಲ್ಲಿತ್ತು.

ಇವರಿಬ್ಬರು ಐರ್ಲೆಂಡ್ ವಿರುದ್ಧ ನಡೆದ ಎರಡನೇ ಟಿ20 ಪಂದ್ಯದಲ್ಲಿ 176 ರನ್‌ಗಳ ಜೊತೆಯಾಟವಾಡಿದ್ದರು. ಹಾಗೆಯೇ 2017 ರಲ್ಲಿ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ 165 ರನ್ಗಳ ಜೊತೆಯಾಟ ನಡೆಸಿ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು.




