- Kannada News Photo gallery Cricket photos IND vs AUS Final, ICC World Cup 2023 shubman gill, shreyas iyer, suryakumar yadav didnt play well against australia
IND vs AUS Final: ಆಸೀಸ್ ತಂತ್ರದ ಮುಂದೆ ಭಾರತದ ಅನಾನುಭವಿಗಳ ಆಟ ನಡೆಯಲ್ಲಿಲ್ಲ..!
IND vs AUS Final: ಭಾರತದ ಅನುಭವಿ ಬ್ಯಾಟರ್ಗಳನ್ನು ಬಿಟ್ಟರೆ ತಂಡದ ಮತ್ತ್ಯಾವ ಆಟಗಾರನು ಆಸೀಸ್ ದಾಳಿಯ ಮುಂದೆ ನೆಲಕಚ್ಚಿ ಆಡುವ ಉದ್ದೇಶದೊಂದಿಗೆ ಬ್ಯಾಟ್ ಬೀಸಲಿಲ್ಲ. ಹೀಗಾಗಿ ಭಾರತ ಅಲ್ಪ ರನ್ಗಳಿಗೆ ಆಸೀಸ್ ಮುಂದೆ ಮಂಡಿಯೂರಿತು.
Updated on: Nov 19, 2023 | 8:28 PM

ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 50 ಓವರ್‌ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 240 ರನ್ ಕಲೆಹಾಕಿತು. ಟೀಂ ಇಂಡಿಯಾ ಪರ ಕೊಹ್ಲಿ 54 ರನ್ ಮತ್ತು ಕೆಎಲ್ ರಾಹುಲ್ 66 ರನ್ ಗಳಿಸಿದರೆ, ನಾಯಕ ರೋಹಿತ್ 47 ರನ್ಗಳ ಇನ್ನಿಂಗ್ಸ್ ಆಡಿದರು.

ಈ ಮೂವರು ಅನುಭವಿ ಬ್ಯಾಟರ್ಗಳು ಬಿಟ್ಟರೆ ತಂಡದ ಮತ್ತ್ಯಾವ ಆಟಗಾರನು ಆಸೀಸ್ ದಾಳಿಯ ಮುಂದೆ ನೆಲಕಚ್ಚಿ ಆಡುವ ಉದ್ದೇಶದೊಂದಿಗೆ ಬ್ಯಾಟ್ ಬೀಸಲಿಲ್ಲ. ಹೀಗಾಗಿ ಭಾರತ ಅಲ್ಪ ರನ್ಗಳಿಗೆ ಆಸೀಸ್ ಮುಂದೆ ಮಂಡಿಯೂರಿತು.

ಇಡೀ ಟೂರ್ನಿಯಲ್ಲಿ ಒಂದೇ ಒಂದು ಶತಕ ಬಾರಿಸದಿದ್ದರೂ, ಕೆಲವೊಂದು ಪಂದ್ಯಗಳಲ್ಲಿ ಉಪಯುಕ್ತ ಇನ್ನಿಂಗ್ಸ್ ಆಡಿದ್ದ ಶುಭ್ಮನ್ ಗಿಲ್ ಅವರಿಂದ ಈ ಪಂದ್ಯದಲ್ಲಿ ಬಿಗ್ ಇನ್ನಿಂಗ್ಸ್ ಆಡುವ ನಿರೀಕ್ಷೆ ಇತ್ತು. ಏಕೆಂದರೆ ಐಪಿಎಲ್ನಲ್ಲಿ ಗಿಲ್ ಅವರಿಗೆ ಇದು ಹೋಂ ಪಿಚ್ ಆಗಿತ್ತು.

ಆದರೆ ಶುಭ್ಮನ್ ಗಿಲ್ ಮಾತ್ರ ಪ್ರಮುಖ ಪಂದ್ಯಗಳಲ್ಲಿ ಸುಲಭವಾಗಿ ವಿಕೆಟ್ ಕೈಚೆಲ್ಲುವ ಚಾಳಿ ಮುಂದುವರೆಸಿ ಕೇವಲ 4 ರನ್ಗಳಿಗೆ ಬೇಡದ ಶಾಟ್ ಆಡಲು ಹೋಗಿ ವಿಕೆಟ್ ಒಪ್ಪಿಸಿದರು.

ನಾಲ್ಕನೇ ಕ್ರಮಾಂಕದಲ್ಲಿ ಅದ್ಭುತ ಇನ್ನಿಂಗ್ಸ್ಗಳನ್ನು ಆಡುವ ಮೂಲಕ ಭಾರತದ ಬ್ಯಾಟಿಂಗ್ ಬೆನ್ನೆಲುಬಾಗಿದ್ದ ಶ್ರೇಯಸ್ ಅಯ್ಯರ್ಗೂ ಈ ಪಂದ್ಯದಲ್ಲಿ ಹೆಚ್ಚು ಹೊತ್ತು ಬ್ಯಾಟಿಂಗ್ ಮಾಡಲು ಸಾಧ್ಯವಾಗಲಿಲ್ಲ. ಅವರೂ ಕೂಡ 4 ರನ್ಗಳಿಗೆ ಬ್ಯಾಟ್ ಎತ್ತಿಟ್ಟರು.

ಇಡೀ ಟೂರ್ನಿಯಲ್ಲಿ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ತಂಡದ ಪರ ಕೆಲವು ಪಂದ್ಯಗಳಲ್ಲಿ ಗಮನಾರ್ಹ ಕೊಡುಗೆ ನೀಡಿದ್ದ ರವೀಂದ್ರ ಜಡೇಜಾ ಕೂಡ 9 ರನ್ಗಳಿಗೆ ಪೆವಿಲಿಯನ್ ಸೇರಿಕೊಂಡರು.

ಹಾರ್ದಿಕ್ ಪಾಂಡ್ಯ ಇಂಜುರಿಯಿಂದ ಟೀಂ ಇಂಡಿಯಾದ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿದ್ದ ಸೂರ್ಯಕುಮಾರ್ ಯಾದವ್ ಹಿಂದಿನ ಮ್ಯಾಚ್ಗಳಲ್ಲಿ ಯಾವ ರೀತಿಯ ಪ್ರದರ್ಶನ ನೀಡಿದ್ದರೋ ಈ ಮ್ಯಾಚ್ನಲ್ಲೂ ಅದನ್ನೇ ಮುಂದುವರೆಸಿದರು. ಕೇವಲ 18 ರನ್ ಬಾರಿಸಿ ಸೂರ್ಯ ಪೆವಿಲಿಯನ್ ಹಾದಿ ಹಿಡಿದರು.

ಉಳಿದಂತೆ ಟೀಂ ಇಂಡಿಯಾದ ಬಾಲಗೋಂಚಿಗಳು ಕೂಡ ಹೆಚ್ಚಿನದ್ದೇನು ಮಾಡದೆ ಆಸೀಸ್ ದಾಳಿಯ ಮುಂದೆ ಮಂಕಾಗಿ ಮಂಡಿಯೂರಿದರು. ಹೀಗಾಗಿ ಈ ಪಂದ್ಯದಲ್ಲಿ ಅನುಭವಿಗಳಿಂದ ಬಂದ ಇನ್ನಿಂಗ್ಸ್, ಯುವ ಕ್ರಿಕೆಟಿಗರಿಂದ ಬಂದಿದ್ದರೆ ಭಾರತ ಬೃಹತ್ ಸ್ಕೋರ್ ದಾಖಲಿಸಬಹುದಿತ್ತು.




