2023ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಇಂದು ಅಂತಿಮ ಫೈನಲ್ ಫೈಟ್ ನಡೆಯಲಿದೆ. ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಒಂದು ಪ್ರಶಸ್ತಿಗಾಗಿ ರೋಹಿತ್ ಶರ್ಮಾ ನೇತೃತ್ವದ ಭಾರತ ಹಾಗೂ ಪ್ಯಾಟ್ ಕಮ್ಮಿನ್ಸ್ ಅವರ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿ ಆಗಲಿವೆ. ಈ ಸಂದರ್ಭ 2023 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಪಯಣ ಹೇಗಿತ್ತು ಎಂಬುದನ್ನು ನೋಡೋಣ.
ಟೀಮ್ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಆಡಿತು. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಆದರೆ ಭಾರತದ ಬೌಲರ್‌ಗಳು ಆಸ್ಟ್ರೇಲಿಯಾವನ್ನು 199 ರನ್‌ಗಳಿಗೆ ಸೀಮಿತಗೊಳಿಸಿದರು. ಗುರಿ ಬೆನ್ನಟ್ಟಿದ ಭಾರತ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ತಂಡದ ಪ್ರಮುಖ ಮೂವರು ಬ್ಯಾಟ್ಸ್‌ಮನ್‌ಗಳು ಕಡಿಮೆ ಸ್ಕೋರ್‌ಗೆ ಔಟಾದರು. ಆದರೆ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಅಮೋಘ ಆಟವಾಡಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.
ಭಾರತದ ಎರಡನೇ ಪಂದ್ಯ ಅಫ್ಘಾನಿಸ್ತಾನ ವಿರುದ್ಧವಾಗಿತ್ತು. ಈ ಪಂದ್ಯದಲ್ಲಿ ಅಫ್ಘಾನಿಸ್ತಾನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 272 ರನ್ ಗಳಿಸಿತು. ಈ ಸವಾಲನ್ನು ಭಾರತ 35 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಪೂರ್ಣಗೊಳಿಸಿತು. ಈ ಪಂದ್ಯದಲ್ಲಿ ರೋಹಿತ್ ಶರ್ಮಾ 84 ಎಸೆತಗಳಲ್ಲಿ 131 ರನ್ ಗಳಿಸಿ ಪಂದ್ಯಶ್ರೇಷ್ಠರಾದರು.
ಭಾರತ ತನ್ನ ಮೂರನೇ ಪಂದ್ಯದಲ್ಲಿ ಪಾಕಿಸ್ತಾನವನ್ನು ಎದುರಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಕೇವಲ 42.5 ಓವರ್ ಗಳಲ್ಲಿ 191 ರನ್ ಗಳಿಗೆ ಆಲೌಟಾಯಿತು. ಬಳಿಕ ಟೀಮ್ ಇಂಡಿಯಾ 30.3 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ರೋಹಿತ್ ಶರ್ಮಾ ಮತ್ತು ಶ್ರೇಯಸ್ ಅಯ್ಯರ್ ಅರ್ಧಶತಕ ಗಳಿಸಿದರು.
ಭಾರತದ ನಾಲ್ಕನೇ ಪಂದ್ಯ ಬಾಂಗ್ಲಾದೇಶದ ವಿರುದ್ಧ. ಟಾಸ್ ಗೆದ್ದ ಬಾಂಗ್ಲಾದೇಶ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಬಾಂಗ್ಲಾದೇಶ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 256 ರನ್ ಗಳಿಸಿತು. ಭಾರತ 41.3 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಸವಾಲನ್ನು ಪೂರ್ಣಗೊಳಿಸಿತು. ವಿರಾಟ್ ಕೊಹ್ಲಿ ಔಟಾಗದೆ 103, ಶುಭ್ಮನ್ ಗಿಲ್ 53 ಮತ್ತು ರೋಹಿತ್ ಶರ್ಮಾ 48 ರನ್ ಗಳಿಸಿದರು.
ಭಾರತದ ಐದನೇ ಪಂದ್ಯ ನ್ಯೂಝಿಲೆಂಡ್ ವಿರುದ್ಧ ಆಡಿತು. ಈ ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಕಿವೀಸ್ 50 ಓವರ್ ಗಳಲ್ಲಿ 273 ರನ್ ಗಳಿಸಿತು. ಭಾರತ 48ನೇ ಓವರ್‌ನಲ್ಲಿ 6 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ 95 ರನ್, ರೋಹಿತ್ ಶರ್ಮಾ 46 ರನ್ ಮತ್ತು ರವೀಂದ್ರ ಜಡೇಜಾ 39 ರನ್ ಗಳಿಸಿದರು.
ಭಾರತ ತನ್ನ ಆರನೇ ಪಂದ್ಯವನ್ನು ಇಂಗ್ಲೆಂಡ್ ವಿರುದ್ಧ ಆಡಿದೆ. ಇಂಗ್ಲೆಂಡ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಭಾರತ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 229 ರನ್ ಗಳಿಸಿತು. ಆದರೆ ಇಂಗ್ಲೆಂಡ್ ತಂಡ 34.5 ಓವರ್‌ಗಳಲ್ಲಿ 129 ರನ್‌ಗಳಿಗೆ ಆಲೌಟಾಯಿತು. ಶಮಿ 4, ಬುಮ್ರಾ 3 ವಿಕೆಟ್ ಪಡೆದರು.
ಏಳನೇ ಪಂದ್ಯದಲ್ಲಿ ಭಾರತ, ಶ್ರೀಲಂಕಾವನ್ನು ಎದುರಿಸಿತು. ಶ್ರೀಲಂಕಾ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಿತು. ಇದರೊಂದಿಗೆ ಟೀಮ್ ಇಂಡಿಯಾ ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 357 ರನ್ ಗಳಿಸಿತು. ಆದರೆ ಶ್ರೀಲಂಕಾ ತಂಡ 19.4 ಓವರ್‌ಗಳಲ್ಲಿ 55 ರನ್‌ಗಳಿಗೆ ಆಲೌಟ್ ಆಯಿತು.
ಭಾರತದ ಎಂಟನೇ ಪಂದ್ಯ ದಕ್ಷಿಣ ಆಫ್ರಿಕಾ ವಿರುದ್ಧವಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 326 ರನ್ ಗಳಿಸಿತು. ಈ ಗುರಿ ಮುಟ್ಟಲು ಕಣಕ್ಕೆ ಇಳಿದ ದಕ್ಷಿಣ ಆಫ್ರಿಕಾ ತಂಡ 83 ರನ್‌ಗಳಿಗೆ ಆಲೌಟಾಯಿತು. ಭಾರತದ ಪರ ರವೀಂದ್ರ ಜಡೇಜಾ 5, ಕುಲ್ದೀಪ್ 2 ಮತ್ತು ಶಮಿ ತಲಾ 2 ವಿಕೆಟ್ ಪಡೆದರು.
ಭಾರತದ ಒಂಬತ್ತನೇ ಹಾಗೂ ಅಂತಿಮ ಲೀಗ್ ಪಂದ್ಯ ನೆದರ್ಲೆಂಡ್ಸ್ ವಿರುದ್ಧವಾಗಿತ್ತು. ಈ ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿತು. 50 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 410 ರನ್ ಗಳಿಸಿತು. ನೆದರ್ಲೆಂಡ್ಸ್ 47.5 ಓವರ್‌ಗಳಲ್ಲಿ 250 ರನ್‌ಗಳಿಗೆ ಆಲೌಟ್ ಆಯಿತು.
ನಿರ್ಣಾಯಕ ಸೆಮಿಫೈನಲ್‌ನಲ್ಲಿ ಭಾರತವು ನ್ಯೂಝಿಲೆಂಡ್ ವಿರುದ್ಧ ಆಡಿತು. ಈ ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿತು. ನಿಗದಿತ 50 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 397 ರನ್ ಗಳಿಸಿತು. ನ್ಯೂಜಿಲೆಂಡ್ 48.5 ಓವರ್‌ಗಳಲ್ಲಿ 327 ರನ್‌ಗಳಿಗೆ ಆಲೌಟಾಯಿತು. ಭಾರತ ಫೈನಲ್ಗೆ ಲಗ್ಗೆಯಿಟ್ಟಿತು.
Published On - 7:18 am, Sun, 19 November 23