
ಟೀಂ ಇಂಡಿಯಾದ ಮಾಜಿ ನಾಯಕರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಮತ್ತೊಮ್ಮೆ ಟೀಂ ಇಂಡಿಯಾದ ನೀಲಿ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಟೆಸ್ಟ್ ಮತ್ತು ಟಿ20 ಕ್ರಿಕೆಟ್‌ನಿಂದ ನಿವೃತ್ತರಾದ ಇವರಿಬ್ಬರು ಬಹಳ ದಿನಗಳ ನಂತರ ಟೀಂ ಇಂಡಿಯಾ ಪರ ಆಡಲಿದ್ದಾರೆ. ಹೀಗಾಗಿ 7 ತಿಂಗಳ ನಂತರ ಪಂದ್ಯವನ್ನಾಡುತ್ತಿರುವ ಈ ಅನುಭವಿ ಜೋಡಿಯ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ. ಅದಕ್ಕೂ ಮುನ್ನ ಮೊದಲ ಪಂದ್ಯ ನಡೆಯುವ ಪರ್ತ್ ಮೈದಾನದಲ್ಲಿ ಇವರ ಆಟ ಹೇಗಿದೆ ಎಂಬುದನ್ನು ನೋಡೋಣ.

ಮೊದಲಿಗೆ ನಾವು ವಿರಾಟ್ ಕೊಹ್ಲಿ ಅವರ ಪ್ರದರ್ಶನದ ಬಗ್ಗೆ ಮಾತನಾಡಿದರೆ, ಪರ್ತ್ ಮೈದಾನದಲ್ಲಿ ವಿರಾಟ್ ಕೊಹ್ಲಿ ಇದುವರೆಗೆ 60 ಕ್ಕಿಂತ ಹೆಚ್ಚು ಸರಾಸರಿಯಲ್ಲಿ 242 ರನ್ ಗಳಿಸಿದ್ದಾರೆ. ಆದಾಗ್ಯೂ ಏಕದಿನ ಕ್ರಿಕೆಟ್‌ನಲ್ಲಿ ಇದುವರೆಗೆ 51 ಶತಕಗಳನ್ನು ಬಾರಿಸಿರುವ ಕೊಹ್ಲಿಗೆ ಪರ್ತ್‌ನಲ್ಲಿ ಶತಕ ಬಾರಿಸಲು ಸಾಧ್ಯವಾಗಿಲ್ಲ.

ವಿರಾಟ್ ಕೊಹ್ಲಿ ಪರ್ತ್ ಮೈದಾನದಲ್ಲಿ ಎರಡು ಬಾರಿ ಶತಕ ಗಳಿಸುವ ಅವಕಾಶವನ್ನು ಕಳೆದುಕೊಂಡಿದ್ದಾರೆ. 2012 ರಲ್ಲಿ ನಡೆದಿದ್ದ ಪಂದ್ಯದಲ್ಲಿ 77 ರನ್‌ಗಳಿಸಿ ಔಟಾಗಿದ್ದ ವಿರಾಟ್, 2016 ರಲ್ಲಿ ನಡೆದಿದ್ದ ಪಂದ್ಯದಲ್ಲಿ 91 ರನ್‌ಗಳಿಗೆ ಔಟಾಗಿದ್ದರು. ಹೀಗಾಗಿ ಪರ್ತ್‌ನಲ್ಲಿ ತಮ್ಮ ವೃತ್ತಿಜೀವನದ ಕೊನೆಯ ಪಂದ್ಯವನ್ನಾಡುತ್ತಿರುವ ವಿರಾಟ್, ತಮ್ಮ ಶತಕಗಳ ಬರವನ್ನು ನೀಗಿಸಿಕೊಳ್ಳುವ ಅವಕಾಶ ಹೊಂದಿದ್ದಾರೆ.

ಇನ್ನು ರೋಹಿತ್ ಶರ್ಮಾ ವಿಚಾರಕ್ಕೆ ಬರುವುದಾದರೆ.. ಪರ್ತ್‌ನಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿರುವ ರೋಹಿತ್ ಶರ್ಮಾ ಆಡಿರುವ ನಾಲ್ಕು ಪಂದ್ಯಗಳಲ್ಲಿ 245 ರನ್ ಗಳಿಸಿದ್ದಾರೆ. ಪರ್ತ್‌ನಲ್ಲಿ ರೋಹಿತ್ ಅವರ ಸರಾಸರಿ 122.5 ಆಗಿದ್ದು, ಒಂದು ಶತಕ ಮತ್ತು ಒಂದು ಅರ್ಧಶತಕವನ್ನು ಬಾರಿಸಿದ್ದಾರೆ. ಅವರ ಇನ್ನಿಂಗ್ಸ್ನಲ್ಲಿ 25 ಬೌಂಡರಿಗಳು ಮತ್ತು ಎಂಟು ಸಿಕ್ಸರ್‌ಗಳು ಸೇರಿವೆ.

ಪರ್ತ್‌ನಲ್ಲಿ ರೋಹಿತ್ ಶರ್ಮಾ ಅವರ ಅತ್ಯುತ್ತಮ ಸ್ಕೋರ್ ಅಜೇಯ 171 ರನ್ ಆಗಿದ್ದು, 2016 ರ ಆಸ್ಟ್ರೇಲಿಯಾ ಪ್ರವಾಸದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ, ರೋಹಿತ್ 7 ಸಿಕ್ಸರ್ ಮತ್ತು 13 ಬೌಂಡರಿಗಳ ಸಹಾಯದಿಂದ ಇಷ್ಟು ರನ್ ಕಲೆಹಾಕಿದ್ದರು. ಆದಾಗ್ಯೂ ಈ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲನ್ನು ಎದುರಿಸಬೇಕಾಯಿತು.