ಭರ್ಜರಿ ಸೆಂಚುರಿ: ಟೆಸ್ಟ್ನಲ್ಲೂ ರಿಂಕು ಸಿಂಗ್ ಕಮಾಲ್
Rinku Singh Century: ಭಾರತ ಟಿ20 ತಂಡ ಫಿನಿಶರ್ ರಿಂಕು ಸಿಂಗ್ ಪ್ರಸ್ತುತ ನಡೆಯುತ್ತಿರುವ ರಣಜಿ ಟೂರ್ನಿಯಲ್ಲಿ ಉತ್ತರ ಪ್ರದೇಶ್ ಪರ ಕಣಕ್ಕಿಳಿಯುತ್ತಿದ್ದಾರೆ. ಕಾನ್ಪುರದಲ್ಲಿ ನಡೆಯುತ್ತಿರುವ ಆಂಧ್ರ ಪ್ರದೇಶ್ ವಿರುದ್ಧದ ಪಂದ್ಯದಲ್ಲಿ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿರುವ ರಿಂಕು ಸಿಂಗ್ ಭರ್ಜರಿ ಶತಕ ಸಿಡಿಸುವ ಮೂಲಕ ಮಿಂಚಿದ್ದಾರೆ.
Updated on:Oct 18, 2025 | 2:32 PM

ರಣಜಿ ಟೂರ್ನಿಯ ಎಲೈಟ್ ಎ ಗ್ರೂಪ್ ಪಂದ್ಯದಲ್ಲಿ ರಿಂಕು ಸಿಂಗ್ (Rinku Singh) ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಕಾನ್ಪುರದ ಗ್ರೀನ್ ಪಾರ್ಕ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಉತ್ತರ ಪ್ರದೇಶ್ ಹಾಗೂ ಆಂಧ್ರ ಪ್ರದೇಶ್ ತಂಡಗಳು ಮುಖಾಮುಖಿಯಾಗಿವೆ.

ಈ ಮ್ಯಾಚ್ನಲ್ಲಿ ಆಂಧ್ರ ಪ್ರದೇಶ್ ತಂಡದ ನಾಯಕ ರಿಕಿ ಭುಯಿ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲ ಇನಿಂಗ್ಸ್ ಆಡಿದ ಆಂಧ್ರ ಪರ ಶ್ರೀಕರ್ ಭರತ್ (142) ಹಾಗೂ ಶೇಖ್ ರಶೀದ್ (136) ಭರ್ಜರಿ ಶತಕ ಸಿಡಿಸಿದ್ದರು. ಈ ಶತಕಗಳ ನೆರವಿನೊಂದಿಗೆ ಆಂಧ್ರ ಪ್ರದೇಶ್ ತಂಡವು ಮೊದಲ ಇನಿಂಗ್ಸ್ನಲ್ಲಿ 470 ರನ್ಗಳಿಸಿ ಆಲೌಟ್ ಆಯಿತು.

ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆರಂಭಿಸಿದ ಉತ್ತರ ಪ್ರದೇಶ್ ಪರ ಆರಂಭಿಕ ದಾಂಡಿಗ ಮಾಧವ್ ಕೌಶಿಕ್ 54 ರನ್ ಬಾರಿಸಿದರೆ, ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಆರ್ಯನ್ ಜುಯಲ್ 66 ರನ್ ಸಿಡಿಸಿದರು. ಇನ್ನು 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಿಂಕು ಸಿಂಗ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು.

ತಾಳ್ಮೆಯುತ ಬ್ಯಾಟಿಂಗ್ಗೆ ಒತ್ತು ನೀಡಿದ ರಿಂಕು ಸಿಂಗ್ ಆಕರ್ಷಕ ಹೊಡೆತಗಳೊಂದಿಗೆ ಗಮನ ಸೆಳೆದರು. ಅಲ್ಲದೆ 180 ಎಸೆತಗಳಲ್ಲಿ 2 ಭರ್ಜರಿ ಸಿಕ್ಸ್ ಹಾಗೂ 9 ಫೋರ್ಗಳೊಂದಿಗೆ ಶತಕ ಪೂರೈಸಿದರು. ಈ ಅಜೇಯ ಶತಕದೊಂದಿಗೆ ಉತ್ತರ ಪ್ರದೇಶ್ ತಂಡದ ಸ್ಕೋರ್ 125 ಓವರ್ಗಳ ಮುಕ್ತಾಯದ ವೇಳೆಗೆ 332 ರನ್ ಕಲೆಹಾಕಿದೆ.

ಸದ್ಯ ರಣಜಿ ಟೂರ್ನಿಯಲ್ಲಿ ಕಣಕ್ಕಿಳಿಯುತ್ತಿರುವ ರಿಂಕು ಸಿಂಗ್ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗಿದ್ದಾರೆ. ಈ ಸರಣಿಯು ಅಕ್ಟೋಬರ್ 29 ರಿಂದ ಶುರುವಾಗಲಿದೆ. ಹೀಗಾಗಿ ಉತ್ತರ ಪ್ರದೇಶ್ ತಂಡದ ಮೂರನೇ ಪಂದ್ಯಕ್ಕೆ ರಿಂಕು ಸಿಂಗ್ ಅಲಭ್ಯರಾಗಲಿದ್ದಾರೆ.
Published On - 2:31 pm, Sat, 18 October 25
