- Kannada News Photo gallery Cricket photos IND vs BAN head coach Gautam Gambhir confirms Team India playing XI for Chennai Test
IND vs BAN: ಈ ಇಬ್ಬರಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನವಿಲ್ಲ ಎಂದ ಗೌತಮ್ ಗಂಭೀರ್
IND vs BAN: ಬಾಂಗ್ಲಾದೇಶ ವಿರುದ್ಧದ ಪಂದ್ಯದ ಆರಂಭಕ್ಕೂ ಮುನ್ನ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಗೌತಮ್ ಗಂಭೀರ್ ತಂಡದ ಆಡುವ ಹನ್ನೊಂದರ ಬಳಗದ ಬಗ್ಗೆ ಸ್ಪಷ್ಟನೆ ನೀಡುವ ಕೆಲಸ ಮಾಡಿದರು. ಈ ವೇಳೆ ಮಾತನಾಡಿದ ಅವರು, ಕೇವಲ 11 ಆಟಗಾರರು ಆಡಲು ಸಾಧ್ಯವಾದ ಕಾರಣ ಯುವ ಆಟಗಾರರಾದ ಸರ್ಫರಾಜ್ ಖಾನ್ ಮತ್ತು ಧ್ರುವ್ ಜುರೆಲ್, ಅವಕಾಶಗಳಿಗಾಗಿ ಕಾಯಬೇಕಾಗಬಹುದು ಎಂದರು.
Updated on: Sep 18, 2024 | 2:47 PM

ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯಕ್ಕೆ ಆತಿಥ್ಯವಹಿಸಲು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂ ಸಜ್ಜಾಗಿದೆ. ಉಭಯ ತಂಡಗಳ ನಡುವಿನ ಮೊದಲ ಪಂದ್ಯ ನಾಳೆಯಿಂದ ಅಂದರೆ ಸೆಪ್ಟೆಂಬರ್ 19 ರಿಂದ ಆರಂಭವಾಗಲಿದೆ. ಈ ಪಂದ್ಯಕ್ಕೆ ಟೀಂ ಇಂಡಿಯಾದ ಆಡುವ ಬಳಗ ಹೇಗಿರಲಿದೆ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಅದಕ್ಕೆ ಸಂಬಂಧಿಸಿದಂತೆ ಮುಖ್ಯ ಕೋಚ್ ಗೌತಮ್ ಗಂಭೀರ್ ಬಿಗ್ ಅಪ್ಡೇಟ್ ನೀಡಿದ್ದಾರೆ.

ಬಾಂಗ್ಲಾದೇಶ ವಿರುದ್ಧದ ಪಂದ್ಯದ ಆರಂಭಕ್ಕೂ ಮುನ್ನ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಗೌತಮ್ ಗಂಭೀರ್ ತಂಡದ ಆಡುವ ಹನ್ನೊಂದರ ಬಳಗದ ಬಗ್ಗೆ ಸ್ಪಷ್ಟನೆ ನೀಡುವ ಕೆಲಸ ಮಾಡಿದರು. ಈ ವೇಳೆ ಮಾತನಾಡಿದ ಅವರು, ಕೇವಲ 11 ಆಟಗಾರರು ಆಡಲು ಸಾಧ್ಯವಾದ ಕಾರಣ ಯುವ ಆಟಗಾರರಾದ ಸರ್ಫರಾಜ್ ಖಾನ್ ಮತ್ತು ಧ್ರುವ್ ಜುರೆಲ್, ಅವಕಾಶಗಳಿಗಾಗಿ ಕಾಯಬೇಕಾಗಬಹುದು ಎಂದರು.

ಇದರರ್ಥ ಕೆಎಲ್ ರಾಹುಲ್ ಮತ್ತು ರಿಷಬ್ ಪಂತ್ ಪ್ಲೇಯಿಂಗ್-11 ರಲ್ಲಿ ಸ್ಥಾನ ಪಡೆಯುವುದು ಖಚಿತವಾಗಿದೆ. ವಾಸ್ತವವಾಗಿ ಭಾರತದ ಕಳೆದ ಟೆಸ್ಟ್ ಸರಣಿಯಲ್ಲಿ ವಿಕೆಟ್ ಕೀಪರ್ ರೂಪದಲ್ಲಿ ಧೃವ್ ಜುರೇಲ್ ಕಾಣಿಸಿಕೊಂಡಿದ್ದರು. ಆದರೆ ಇದೀಗ ರಿಷಬ್ ಪಂತ್ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿರುವ ಕಾರಣ ಅವರು ಆ ಸ್ಥಾನವನ್ನು ತುಂಬುವುದು ಖಚಿತವಾಗಿದೆ.

ಇನ್ನು 6ನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಆಟಗಾರರ ಪೈಕಿ ಸರ್ಫರಾಜ್ ಖಾನ್ ಹಾಗೂ ಕನ್ನಡಿಗ ಕೆಎಲ್ ರಾಹುಲ್ ನಡುವೆ ಫೈಪೋಟಿ ಏರ್ಪಟ್ಟಿತ್ತು. ಕಳೆದ ಟೆಸ್ಟ್ ಸರಣಿಯಲ್ಲಿ ತಂಡದ ಪರ ಆಡಿದ್ದ ಸರ್ಫರಾಜ್ ಅಮೋಘ ಪ್ರದರ್ಶನ ನೀಡಿದ್ದರು. ಆದರೆ ಇಂಜುರಿ ಕಾರಣದಿಂದಾಗಿ ರಾಹುಲ್ ಆಡಿರಲಿಲ್ಲ. ಆದರೆ ಅದಕ್ಕೂ ಮುನ್ನ ಆಡಿದ ಸರಣಿಯಲ್ಲಿ ರಾಹುಲ್ ಬ್ಯಾಟ್ ಉತ್ತಮ ರನ್ ಕಲೆಹಾಕಿತ್ತು. ಹೀಗಾಗಿ ಅನುಭವದ ಆಧಾರದ ಮೇಲೆ ರಾಹುಲ್ ಪರ ಗಂಭೀರ್ ಬ್ಯಾಟ್ ಬೀಸಿದ್ದಾರೆ.

ಇದರೊಂದಿಗೆ ಗೌತಮ್ ಗಂಭೀರ್ ಸುದ್ದಿಗೋಷ್ಠಿಯಲ್ಲಿ ಮೊದಲ ಟೆಸ್ಟ್ಗೆ ತಂಡದ ಆಡುವ -11 ರ ಬಳಗವನ್ನು ಬಹುತೇಕ ಸ್ಪಷ್ಟಪಡಿಸಿದ್ದಾರೆ. ಅದರಂತೆ ಸರ್ಫರಾಜ್ ಮತ್ತು ಜುರೆಲ್ ಆಡಲು ಕಾಯಬೇಕಾಗಿದೆ. ಅಂದರೆ ಪಂತ್ ಮತ್ತು ಕೆಎಲ್ ರಾಹುಲ್ ಮಧ್ಯಮ ಕ್ರಮಾಂಕದಲ್ಲಿ ಆಡಲಿದ್ದಾರೆ.

ಇನ್ನು ಟಾಪ್ ಆರ್ಡರ್ ಬ್ಯಾಟಿಂಗ್ನಲ್ಲಿ ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಓಪನರ್ ಆಗಲಿದ್ದಾರೆ. ಶುಭ್ಮನ್ ಗಿಲ್ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬರಲಿದ್ದು, ವಿರಾಟ್ ಕೊಹ್ಲಿ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬರಲಿದ್ದಾರೆ. ಇದಲ್ಲದೆ ಮೂವರು ಸ್ಪಿನ್ನರ್‌ಗಳು ಮತ್ತು ಇಬ್ಬರು ವೇಗದ ಬೌಲರ್‌ಗಳೊಂದಿಗೆ ತಂಡ ಕಣಕ್ಕಿಳಿಯುವುದು ಖಚಿತವಾಗಿದೆ.

ಸ್ಪಿನ್ ವಿಭಾಗದಲ್ಲಿ ಆರ್ ಅಶ್ವಿನ್, ರವೀಂದ್ರ ಜಡೇಜಾ ಮತ್ತು ಕುಲ್ದೀಪ್ ಯಾದವ್ ಕಾಣಿಸಿಕೊಂಡರೆ, ವೇಗದ ಬೌಲರ್‌ಗಳಾಗಿ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಮೊದಲ ಟೆಸ್ಟ್ಗೆ ಭಾರತ ಸಂಭಾವ್ಯ ತಂಡ: ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ರಿಷಬ್ ಪಂತ್, ಕೆಎಲ್ ರಾಹುಲ್, ರವೀಂದ್ರ ಜಡೇಜಾ, ಆರ್.ಅಶ್ವಿನ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.



















