
ಗಂಭೀರ ಗಾಯದ ನಡುವೆಯೂ ಪ್ಯಾಡ್ ಕಟ್ಟಿ ಬ್ಯಾಟಿಂಗ್ಗೆ ಇಳಿದಿದ್ದ ಟೀಂ ಇಂಡಿಯಾ ವಿಕೆಟ್ ಕೀಪರ್ ರಿಷಭ್ ಪಂತ್ ಅರ್ಧಶತಕದ ಇನ್ನಿಂಗ್ಸ್ ಆಡುವುದರೊಂದಿಗೆ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಮೊದಲ ದಿನದಾಟದಲ್ಲಿ ಇಂಜುರಿಗೊಂಡು 37 ರನ್ಗಳಿಗೆ ಆಟ ನಿಲ್ಲಿಸಿದ ಪಂತ್, ಎರಡನೇ ದಿನದಾಟದಲ್ಲಿ 54 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

ಈ ಅರ್ಧಶತಕದ ಇನ್ನಿಂಗ್ಸ್ ಮೂಲಕ ಸೆನಾ ದೇಶಗಳಲ್ಲಿ ಟೆಸ್ಟ್‌ನಲ್ಲಿ ಅತಿ ಹೆಚ್ಚು ಬಾರಿ 50+ ಸ್ಕೋರ್ ಗಳಿಸಿದ ಭಾರತೀಯ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಎಂಬ ದಾಖಲೆ ರಿಷಭ್ ಪಂತ್ ಪಾಲಾಗಿದೆ. ಈ ವಿಷಯದಲ್ಲಿ ಪಂತ್ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯನ್ನು ಸಹ ಹಿಂದಿಕ್ಕಿದರು.

ಪ್ರಸ್ತುತ ಪಂತ್ ಸೆನಾ ದೇಶಗಳಲ್ಲಿ 14 ಬಾರಿ 50 ಕ್ಕೂ ಹೆಚ್ಚು ರನ್ಗಳ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. ಇದೀಗ ಎರಡನೇ ಸ್ಥಾನಕ್ಕೆ ಜಾರಿರುವ ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ 13 ಬಾರಿ 50 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಮೂರನೇ ಸ್ಥಾನದಲ್ಲಿರುವ ಜಾನ್ ವೈಟ್ 12 ಬಾರಿ ಈ ಸಾಧನೆ ಮಾಡಿದ್ದಾರೆ. ಕ್ರಮವಾಗಿ ನಾಲ್ಕನೇ ಮತ್ತು ಐದನೇ ಸ್ಥಾನದಲ್ಲಿ ಆಡಮ್ ಗಿಲ್‌ಕ್ರಿಸ್ಟ್ (11) ಮತ್ತು ದಿನೇಶ್ ರಾಮ್ದಿನ್ (10) ಇದ್ದಾರೆ.

ಇದರ ಜೊತೆಗೆ, ಪಂತ್ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ಬಾರಿ 50+ ಸ್ಕೋರ್ ದಾಖಲಿಸಿದ ಭಾರತೀಯ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕೂಡ ಆಗಿದ್ದಾರೆ. ಈ ವಿಷಯದಲ್ಲಿ ಅವರು ಫಾರೂಕ್ ಇಂಜಿನಿಯರ್ ಮತ್ತು ಮಹೇಂದ್ರ ಸಿಂಗ್ ಧೋನಿ ಅವರನ್ನು ಹಿಂದಿಕ್ಕಿದ್ದಾರೆ.

ವಾಸ್ತವವಾಗಿ ಪ್ರಸ್ತುತ ಸರಣಿಯಲ್ಲಿ ಇದು ಪಂತ್ ಅವರ ಐದನೇ 50+ ಸ್ಕೋರ್ ಆಗಿದೆ. ಫಾರೂಕ್ ಇಂಜಿನಿಯರ್ 1972/73 ರಲ್ಲಿ ಇಂಗ್ಲೆಂಡ್ ವಿರುದ್ಧ ನಾಲ್ಕು ಅರ್ಧಶತಕಗಳ ಇನ್ನಿಂಗ್ಸ್‌ಗಳನ್ನು ಆಡಿದ್ದರು. ಹಾಗೆಯೇ ಧೋನಿ 2008/09 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಾಲ್ಕು ಅರ್ಧಶತಕಗಳ ಇನ್ನಿಂಗ್ಸ್ ಆಡಿದ್ದರು. ಅಲ್ಲದೆ 2014 ರಲ್ಲಿ ಇಂಗ್ಲೆಂಡ್ ವಿರುದ್ಧವೂ ನಾಲ್ಕು ಬಾರಿ 50+ ಸ್ಕೋರ್ ಮಾಡಿದ್ದಾರೆ.

ಹಾಗೆಯೇ ಈ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಎನಿಸಿಕೊಂಡಿರುವ ಪಂತ್ ಇದುವರೆಗೆ 479* ರನ್ ಬಾರಿಸಿದ್ದಾರೆ. ಈ ಮೂಲಕ ಪಂತ್, 1998 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 464 ರನ್‌ಗಳನ್ನು ಗಳಿಸಿದ್ದ ಅಲೆಕ್ ಸ್ಟೀವರ್ಟ್ ಅವರನ್ನು ಹಿಂದಿಕ್ಕಿದ್ದಾರೆ.