- Kannada News Photo gallery Cricket photos IND vs ENG RCB pacer Akash Deep has been called up to the Indian test squad
IND vs ENG: ಭಾರತ ಟೆಸ್ಟ್ ತಂಡಕ್ಕೆ ಆಯ್ಕೆಯಾದ ಆರ್ಸಿಬಿ ಬೌಲರ್..!
IND vs ENG: ಭಾರತ ಹಾಗೂ ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯ ಉಳಿದ ಮೂರು ಪಂದ್ಯಗಳಿಗೆ ಟೀಂ ಇಂಡಿಯಾವನ್ನು ಪ್ರಕಟಿಸಲಾಗಿದೆ. ಈ ತಂಡದಲ್ಲಿ ಆರ್ಸಿಬಿ ಪರ ಐಪಿಎಲ್ನಲ್ಲಿ ಕಣಕ್ಕಿಳಿಯುವ ವೇಗದ ಬೌಲರ್ ಆಕಾಶ್ ದೀಪ್ಗೆ ಅವಕಾಶ ನೀಡಲಾಗಿದೆ.
Updated on: Feb 10, 2024 | 3:12 PM

ಭಾರತ ಹಾಗೂ ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯ ಉಳಿದ ಮೂರು ಪಂದ್ಯಗಳಿಗೆ ಟೀಂ ಇಂಡಿಯಾ ಆಯ್ಕೆ ಮಂಡಳಿ 17 ಸದಸ್ಯರ ತಂಡವನ್ನು ಪ್ರಕಟಿಸಿದೆ. ಈ ತಂಡದಲ್ಲಿ ಬಿಹಾರದ ವೇಗದ ಬೌಲರ್ ಆಕಾಶ್ ದೀಪ್ ಅವರಿಗೂ ಸಹ ಚೊಚ್ಚಲ ಅವಕಾಶ ನೀಡಲಾಗಿದೆ.

ಆಕಾಶ್ ದೀಪ್ ಇದೇ ಮೊದಲ ಬಾರಿಗೆ ಟೀಂ ಇಂಡಿಯಾಕ್ಕೆ ಆಯ್ಕೆಯಾಗಿದ್ದಾರೆ. ಇದಕ್ಕೂ ಮೊದಲು ಇಂಗ್ಲೆಂಡ್ ಲಯನ್ಸ್ ವಿರುದ್ಧ ನಡೆದ ಅನಧಿಕೃತ ಟೆಸ್ಟ್ ಸರಣಿಯಲ್ಲಿ ಆಕಾಶ್ ದೀಪ್ ಅದ್ಭುತ ಪ್ರದರ್ಶನ ನೀಡಿದ್ದರು. ಹೀಗಾಗಿ ಅವರನ್ನು ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಲಾಗಿದೆ.

ಭಾರತ ತಂಡಕ್ಕೆ ಮೊದಲ ಬಾರಿಗೆ ಆಯ್ಕೆಯಾಗಿರುವ ಆಕಾಶ್ ದೀಪ್ ಅನುಭವಿಗಳಾದ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಹಾಗೂ ಯುವ ಬೌಲರ್ ಮುಖೇಶ್ ಕುಮಾರ್ ಅವರೊಂದಿಗೆ ಟೀಂ ಇಂಡಿಯಾದ ವೇಗದ ಬೌಲಿಂಗ್ ವಿಭಾಗವನ್ನು ನಿಭಾಯಿಸಲಿದ್ದಾರೆ.

ಇನ್ನು ಆಕಾಶ್ ಅವರ ದೇಶಿ ಪ್ರದರ್ಶನದ ಬಗ್ಗೆ ಹೇಳುವುದಾದರೆ.. 2019 ರಲ್ಲಿ ಮೊದಲ ಬಾರಿಗೆ ರಣಜಿ ಆಡುವ ಅವಕಾಶ ಪಡೆದ ಆಕಾಶ್, 2019-20 ಮತ್ತು 2022-23 ಸೀಸನ್ನಲ್ಲಿ ಬಂಗಾಳ ತಂಡ ಫೈನಲ್ಗೇರುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಇದುವರೆಗೆ ಕೇವಲ 29 ಪಂದ್ಯಗಳನ್ನಾಡಿರುವ ಆಕಾಶ್ ಬರೋಬ್ಬರಿ 103 ವಿಕೆಟ್ ಪಡೆದಿದ್ದಾರೆ

ಈ ಅದ್ಭುತ ಪ್ರದರ್ಶನದ ಆಧಾರದ ಮೇಲೆ ಭಾರತ ಎ ತಂಡಕ್ಕೆ ಆಯ್ಕೆಯಾದ ಆಕಾಶ್, ದಕ್ಷಿಣ ಆಫ್ರಿಕಾ ಎ ತಂಡ ಹಾಗೂ ಇಂಗ್ಲೆಂಡ್ ಲಯನ್ಸ್ ತಂಡದ ವಿರುದ್ಧ ಅಮೋಘ ಪ್ರದರ್ಶನ ನೀಡಿದರು. ಇತ್ತೀಚೆಗಷ್ಟೇ ಮುಗಿದ ಇಂಗ್ಲೆಂಡ್ ಲಯನ್ಸ್ ವಿರುದ್ಧದ ಅನಧಿಕೃತ ಟೆಸ್ಟ್ ಸರಣಿಯ ಎರಡನೇ ಹಾಗೂ 3ನೇ ಟೆಸ್ಟ್ನಲ್ಲಿ ಒಟ್ಟು 11 ವಿಕೆಟ್ ಪಡೆದರು.

ದೇಶೀ ಕ್ರಿಕೆಟ್ ಜೊತೆಗೆ ಐಪಿಎಲ್ನಲ್ಲೂ ಅದೃಷ್ಟ ಪರೀಕ್ಷೆ ಮಾಡಿರುವ ಆಕಾಶ್, ಆರ್ಸಿಬಿ ತಂಡದ ಪರ ಕಣಕ್ಕಿಳಿಯುತ್ತಿದ್ದಾರೆ. 2022 ರಲ್ಲಿ ಆರ್ಸಿಬಿ ಸೇರಿಕೊಂಡ ಅವರು ಇದುವರೆಗೆ 7 ಪಂದ್ಯಗಳನ್ನಾಡಿ 5 ವಿಕೆಟ್ ಉರುಳಿಸಿದ್ದಾರೆ.

ಭಾರತ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ಕೆಎಲ್ ರಾಹುಲ್, ರಜತ್ ಪಾಟಿದಾರ್, ಸರ್ಫರಾಜ್ ಖಾನ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಕೆಎಸ್ ಭರತ್ (ವಿಕೆಟ್ ಕೀಪರ್), ಆರ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಆಕಾಶ್ ದೀಪ್.




