ಕೆಲವು ತಿಂಗಳ ಹಿಂದಿನವರೆಗೂ ವಿರಾಟ್ ಕೊಹ್ಲಿ ಶತಕಗಾಗಿ ಎಲ್ಲರೂ ಕಾಯುತ್ತಿದ್ದರು. ಆದರೆ ಈಗ ಶತಕಗಳ ಮೇಲೆ ಶತಕ ಸಿಡಿಸುತ್ತಿರುವ ಕೊಹ್ಲಿ, ಪ್ರತಿಯೊಂದು ಶತಕ ಬಾರಿಸಿದಾಗಲೂ ಹಲವು ದಾಖಲೆಗಳನ್ನು ನಿರ್ಮಿಸುತ್ತಿದ್ದಾರೆ.
ಗುವಾಹಟಿಯಲ್ಲಿ ನಡೆದ ಸರಣಿಯ ಮೊದಲ ಪಂದ್ಯದಲ್ಲಿ ಶತಕ ಸಿಡಿಸಿದ್ದ ಕೊಹ್ಲಿ ತಿರುವನಂತಪುರಂನಲ್ಲೂ ಶತಕ ಸಿಡಿಸಿ ಹಲವು ದಾಖಲೆ ಬರೆದಿದ್ದಾರೆ. ತಮ್ಮ ಇನ್ನಿಂಗ್ಸ್‌ನಲ್ಲಿ 110 ಎಸೆತಗಳನ್ನು ಎದುರಿಸಿದ ಕೊಹ್ಲಿ ಔಟಾಗದೆ 166 ರನ್ ಗಳಿಸಿದರು. ಇದು ಕೊಹ್ಲಿಯ 46ನೇ ಏಕದಿನ ಹಾಗೂ ಒಟ್ಟಾರೆ 74ನೇ ಅಂತಾರಾಷ್ಟ್ರೀಯ ಶತಕವಾಗಿದೆ.
ಇದರೊಂದಿಗೆ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಕೊಹ್ಲಿ 10ನೇ ಶತಕ ದಾಖಲಿಸಿದ್ದು, ಇದು ಯಾವುದೇ ತಂಡದ ವಿರುದ್ಧ ಏಕದಿನ ಮಾದರಿಯಲ್ಲಿ ಅತಿ ಹೆಚ್ಚು ಶತಕಗಳ ದಾಖಲೆಯಾಗಿದೆ.
ವಿರಾಟ್ ಕೊಹ್ಲಿ ಇದೀಗ ಭಾರತದ ನೆಲದಲ್ಲಿ ಅತಿ ಹೆಚ್ಚು ಏಕದಿನ ಶತಕ ಸಿಡಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಗುವಾಹಟಿಯಲ್ಲಿ 21ನೇ ಶತಕ ಸಿಡಿಸುವುದರೊಂದಿಗೆ ಕೊಹ್ಲಿ, ಸಚಿನ್ ತೆಂಡೂಲ್ಕರ್ ಅವರ 20 ಶತಕಗಳ ದಾಖಲೆಯನ್ನು ಮುರಿದಿದ್ದಾರೆ.
ಈ ಇನ್ನಿಂಗ್ಸ್‌ನಲ್ಲಿ ಕೊಹ್ಲಿ 13 ಬೌಂಡರಿಗಳಲ್ಲದೆ 8 ಸಿಕ್ಸರ್‌ಗಳನ್ನು ಸಹ ಸಿಡಿಸಿದರು. ತನ್ನ ಅಂತರಾಷ್ಟ್ರೀಯ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಕೊಹ್ಲಿ, ಎಲ್ಲಾ ಮೂರು ಸ್ವರೂಪಗಳಲ್ಲಿ ಅತ್ಯಧಿಕ ಸಿಕ್ಸರ್ ಸಿಡಿಸಿದ ದಾಖಲೆ ಬರೆದಿದ್ದಾರೆ.
ಈ ಇನ್ನಿಂಗ್ಸ್‌ನಲ್ಲಿ ಶತಕ ಸಿಡಿಸುವುದರೊಂದಿಗೆ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಪ್ರವೇಶಿಸಿದ್ದಾರೆ. ಕೊಹ್ಲಿ ಈಗ ಏಕದಿನ ಕ್ರಿಕೆಟ್‌ನಲ್ಲಿ 12754 ರನ್ ಗಳಿಸಿದ್ದು, ಲಂಕಾದ ಮಾಜಿ ನಾಯಕ ಮಹೇಲಾ ಜಯವರ್ಧನೆ ಅವರನ್ನು ಹಿಂದಿಕ್ಕಿದ್ದಾರೆ.
Published On - 10:28 am, Mon, 16 January 23