ಜುಲೈ 12 ರಿಂದ ಆರಂಭವಾಗಲಿರುವ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಎರಡು ಟೆಸ್ಟ್, 3 ಏಕದಿನ ಹಾಗೂ 5 ಟಿ20 ಪಂದ್ಯಗಳ ಸರಣಿಗೆ ಟೀಂ ಇಂಡಿಯಾವನ್ನು ಸಧ್ಯದಲ್ಲೇ ಪ್ರಕಟಿಸುವ ಸಾಧ್ಯತೆಗಳಿವೆ. ವಿಂಡೀಸ್ ವಿರುದ್ಧದ ಟೆಸ್ಟ್ ಸರಣಿಯೊಂದಿಗೆ ಟೀಂ ಇಂಡಿಯಾದ 3ನೇ ಆವೃತ್ತಿಯ ಟೆಸ್ಟ್ ಚಾಂಪಿಯನ್ಶಿಪ್ ಆರಂಭವಾಗಲಿದೆ.
ಏತನ್ಮಧ್ಯೆ, ಉಭಯ ತಂಡಗಳ ಈ ಎರಡು ಟೆಸ್ಟ್ ಪಂದ್ಯಗಳಿಗೆ ಟೀಂ ಇಂಡಿಯಾದ ಹಿರಿಯ ವೇಗದ ಬೌಲರ್ ಮೊಹಮ್ಮದ್ ಶಮಿಗೆ ವಿಶ್ರಾಂತಿ ನೀಡಲು ಆಯ್ಕೆದಾರರು ಯೋಚಿಸುತ್ತಿದ್ದಾರೆ ಎಂದು ಕ್ರಿಕ್ಬಜ್ ವರದಿ ಮಾಡಿದೆ.
ಶಮಿ ಈ ವರ್ಷ ಬಾರ್ಡರ್ ಗವಾಸ್ಕರ್ ಟ್ರೋಫಿಯಿಂದ ನಿರಂತರವಾಗಿ ಟೀಂ ಇಂಡಿಯಾದಲ್ಲಿ ಆಡುತ್ತಿದ್ದಾರೆ. ಇದಾದ ನಂತರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿಯೂ ಶಮಿ ಬರೋಬ್ಬರಿ 17 ಪಂದ್ಯಗಳನ್ನು ಆಡಿದ್ದರು. ಆ ಬಳಿಕ ನಡೆದ ಆಸ್ಟ್ರೇಲಿಯಾ ವಿರುದ್ಧದ ಡಬ್ಲ್ಯುಟಿಸಿ ಫೈನಲ್‌ನಲ್ಲಿ ಆಡಿದ್ದ ಶಮಿಗೆ ವಿಶೇಷ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ.
ಅಲ್ಲದೆ ಈ ವರ್ಷದ ಕೊನೆಯಲ್ಲಿ ವಿಶ್ವಕಪ್ ನಡೆಯಲಿರುವುದರಿಂದ, ಶಮಿಗೆ ವಿಂಡೀಸ್ ವಿರುದ್ಧದ ಟೆಸ್ಟ್ ಸರಣಿಯಿಂದ ವಿಶ್ರಾಂತಿ ನೀಡುವ ಸಾಧ್ಯತೆಗಳಿವೆ. ಆದರೆ ವಿಂಡೀಸ್ ವಿರುದ್ಧದ ಏಕದಿನ ಸರಣಿಗೆ ಶಮಿಯನ್ನು ಆಯ್ಕೆ ಮಾಡುವ ಸಾಧ್ಯತೆಗಳಿವೆ.
ಮೊಹಮ್ಮದ್ ಶಮಿ ಜೊತೆಗೆ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಮೊಹಮ್ಮದ್ ಸಿರಾಜ್ ಅವರಿಗೂ ವಿಶ್ರಾಂತಿ ನೀಡಬಹುದು ಎಂದು ವರದಿಯಾಗಿದೆ.
ಇತರ ಹಿರಿಯ ಆಟಗಾರರ ಪೈಕಿ, ಡಬ್ಲ್ಯುಟಿಸಿ ಫೈನಲ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ ಮೂರನೇ ಕ್ರಮಾಂಕದ ಬ್ಯಾಟರ್ ಚೇತೇಶ್ವರ ಪೂಜಾರ ಅವರನ್ನು ತಂಡದಲ್ಲಿ ಆಡಿಸುವುದು ಅನುಮಾನವಾಗಿದೆ. ಪೂಜಾರ 2020 ರಿಂದ ಕೇವಲ 29.69 ಸರಾಸರಿಯಲ್ಲಿ ರನ್ ಕಲೆಹಾಕಿದ್ದಾರೆ. ಹೀಗಾಗಿ ಪೂಜಾರ ಅವರನ್ನು ಟೆಸ್ಟ್ ತಂಡದಿಂದ ಕೈಬಿಟ್ಟು ಅವರ ಸ್ಥಾನಕ್ಕೆ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರನ್ನು ಆಯ್ಕೆ ಮಾಡುವ ಸಾಧ್ಯತೆಗಳಿವೆ.
Published On - 7:56 am, Thu, 15 June 23