- Kannada News Photo gallery Cricket photos IND vs ZIM 2nd t20i abhishek sharma breaks many record with his maiden hundred
IND vs ZIM: ಚೊಚ್ಚಲ ಅಂತರಾಷ್ಟ್ರೀಯ ಶತಕ ಸಿಡಿಸಿ ಹಲವು ದಾಖಲೆ ನಿರ್ಮಿಸಿದ ಅಭಿಷೇಕ್ ಶರ್ಮಾ..!
IND vs ZIM: ಟೀಂ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿದು ಸ್ಫೋಟಕ ಬ್ಯಾಟಿಂಗ್ ಮಾಡಿದ ಯುವ ಬ್ಯಾಟರ್ ಅಭಿಷೇಕ್ ಶರ್ಮಾ ಚೊಚ್ಚಲ ಸರಣಿಯ ಎರಡನೇ ಪಂದ್ಯದಲ್ಲೇ ಕೇವಲ 46 ಎಸೆತಗಳಲ್ಲಿ ಶತಕ ಪೂರೈಸಿದ ಅಭಿಷೇಕ್ 7 ಬೌಂಡರಿ ಹಾಗೂ 8 ಸಿಕ್ಸರ್‌ಗಳ ನೆರವಿನಿಂದ ಸಿಡಿಲಬ್ಬರದ ಶತಕ ಸಿಡಿಸಿ ಹಲವು ದಾಖಲೆಗಳನ್ನು ಸೃಷ್ಟಿಸಿದ್ದಾರೆ.
Updated on: Jul 07, 2024 | 8:48 PM

ಎರಡನೇ ಟಿ20 ಪಂದ್ಯದಲ್ಲಿ ಜಿಂಬಾಬ್ವೆಯನ್ನು 100 ರನ್‌ಗಳಿಂದ ಸೋಲಿಸುವ ಮೂಲಕ ಭಾರತ ಸರಣಿಯನ್ನು 1-1 ರಿಂದ ಸಮಬಲಗೊಳಿಸಿದೆ. ಇದಕ್ಕೂ ಮುನ್ನ ಶನಿವಾರ ನಡೆದ ಪಂದ್ಯದಲ್ಲಿ ಜಿಂಬಾಬ್ವೆ ಭಾರತವನ್ನು 13 ರನ್‌ಗಳಿಂದ ಸೋಲಿಸಿತ್ತು. ಆದರೆ, ಭಾನುವಾರ ಭಾರತ ತಂಡ ಆತಿಥೇಯರ ವಿರುದ್ಧದ ಹಿಂದಿನ ಸೋಲಿಗೆ ಸೇಡು ತೀರಿಸಿಕೊಂಡಿತು.

ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ತಂಡ 20 ಓವರ್‌ಗಳಲ್ಲಿ ಎರಡು ವಿಕೆಟ್‌ಗೆ 234 ರನ್ ಗಳಿಸಿತು. ಈ ಮೈದಾನದಲ್ಲಿ ಜಿಂಬಾಬ್ವೆ ವಿರುದ್ಧ ಯಾವುದೇ ತಂಡ ಮಾಡಿದ ಗರಿಷ್ಠ ಸ್ಕೋರ್ ಇದಾಗಿದೆ. ಉತ್ತರವಾಗಿ ಜಿಂಬಾಬ್ವೆ 18.4 ಓವರ್‌ಗಳಲ್ಲಿ 10 ವಿಕೆಟ್‌ಗೆ 134 ರನ್ ಗಳಿಸಲಷ್ಟೇ ಶಕ್ತವಾಯಿತು.

ಟೀಂ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿದು ಸ್ಫೋಟಕ ಬ್ಯಾಟಿಂಗ್ ಮಾಡಿದ ಯುವ ಬ್ಯಾಟರ್ ಅಭಿಷೇಕ್ ಶರ್ಮಾ ಚೊಚ್ಚಲ ಸರಣಿಯ ಎರಡನೇ ಪಂದ್ಯದಲ್ಲೇ ಸಿಡಿಲಬ್ಬರದ ಶತಕ ಸಿಡಿಸಿ ಹಲವು ದಾಖಲೆಗಳನ್ನು ಸೃಷ್ಟಿಸಿದ್ದಾರೆ.

ತಮ್ಮ ಇನ್ನಿಂಗ್ಸ್‌ನಲ್ಲಿ ಕೇವಲ 46 ಎಸೆತಗಳಲ್ಲಿ ಶತಕ ಪೂರೈಸಿದ ಅಭಿಷೇಕ್ 7 ಬೌಂಡರಿ ಹಾಗೂ 8 ಸಿಕ್ಸರ್‌ಗಳನ್ನು ಬಾರಿಸಿದರು. ಆದರೆ ಶತಕ ಬಾರಿಸಿದ ಅವರು ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲು ಸಾಧ್ಯವಾಗದೆ ಮುಂದಿನ ಎಸೆತದಲ್ಲಿಯೇ ವಿಕೆಟ್ ಕಳೆದುಕೊಂಡರು.

ಆದಾಗ್ಯೂ ಮೊದಲ 33 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಅಭಿಷೇಕ್ ಮುಂದಿನ 50 ರನ್‌ಗಳನ್ನು ಕೇವಲ 13 ಎಸೆತಗಳಲ್ಲಿ ಕಲೆಹಾಕಿದರು. ಈ 13 ಎಸೆತಗಳಲ್ಲಿ ಅಭಿಷೇಕ್ ಕ್ರಮವಾಗಿ 4,6,4,2,1,1,6,4,1,0,6,6,6 ರನ್ ಬಾರಿಸಿದರು.

ತಮ್ಮ ಇನ್ನಿಂಗ್ಸ್‌ನಲ್ಲಿ 212.77 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ ಅಭಿಷೇಕ್ ಶರ್ಮಾ ಭಾರತದ ಪರ ಜಂಟಿಯಾಗಿ ಮೂರನೇ ವೇಗದ ಟಿ20 ಶತಕ ಸಿಡಿಸಿದ ಹೆಗ್ಗಳಿಕೆಗೆ ಪಾತ್ರರಾದರು. ಅಲ್ಲದೆ ಟಿ20ಯಲ್ಲಿ ಅತಿ ಕಡಿಮೆ ಇನ್ನಿಂಗ್ಸ್‌ಗಳಲ್ಲಿ ಶತಕ ಸಿಡಿಸಿದ ಭಾರತೀಯ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ನಿರ್ಮಿಸಿದರು.

ಈ ಮೊದಲು ಈ ದಾಖಲೆ ದೀಪಕ್ ಹೂಡಾ ಹೆಸರಿನಲ್ಲಿತ್ತು. ದೀಪಕ್ ತಮ್ಮ ಮೂರನೇ ಟಿ20 ಇನ್ನಿಂಗ್ಸ್‌ನಲ್ಲಿಯೇ ಶತಕ ಗಳಿಸಿದ ಸಾಧನೆ ಮಾಡಿದ್ದರು. ಇದೀಗ ಕೇವಲ 2ನೇ ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸಿರುವ ಅಭಿಷೇಕ್ ಹೂಡಾರನ್ನು ಹಿಂದಿಕ್ಕಿದ್ದಾರೆ.

ಇದಲ್ಲದೆ, ತಮ್ಮ ಎರಡನೇ ಅಂತರಾಷ್ಟ್ರೀಯ ಟಿ20 ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಅಭಿಷೇಕ್ ಶರ್ಮಾ ಈ ಸಾಧನೆ ಮಾಡಿದ ವಿಶ್ವದ ಮೂರನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.









