
T20 World Cup 2026: ಟಿ20 ವಿಶ್ವಕಪ್ನ 52ನೇ ಪಂದ್ಯದಲ್ಲಿ ಭಾರತ ತಂಡವು ಭರ್ಜರಿ ಜಯ ಸಾಧಿಸಿದೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳು ಮುಖಾಮುಖಿಯಾಗಿದ್ದವು. ಸೆಮಿಫೈನಲ್ಗೇರಲು ಉಭಯ ತಂಡಗಳಿಗೂ ನಿರ್ಣಾಯಕವಾಗಿದ್ದ ಈ ಪಂದ್ಯವನ್ನು ಗೆದ್ದುಕೊಳ್ಳುವಲ್ಲಿ ಟೀಮ್ ಇಂಡಿಯಾ ಯಶಸ್ವಿಯಾಗಿದೆ.

ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ 20 ಓವರ್ಗಳಲ್ಲಿ 195 ರನ್ ಕಲೆಹಾಕಿತು. ಈ ಗುರಿಯನ್ನು 19.2 ಓವರ್ಗಳಲ್ಲಿ ಚೇಸ್ ಮಾಡಿ ಟೀಮ್ ಇಂಡಿಯಾ 5 ವಿಕೆಟ್ಗಳ ಜಯ ಸಾಧಿಸಿದೆ.

ಈ ಗೆಲುವಿನೊಂದಿಗೆ ಭಾರತ ತಂಡವು ಟಿ20 ವಿಶ್ವಕಪ್ನ ಸೆಮಿಫೈನಲ್ಗೇರಿದೆ. ಈ ಮೂಲಕ ಪಾಕಿಸ್ತಾನ್ ತಂಡದ ಹೆಸರಿನಲ್ಲಿದ್ದ ವಿಶೇಷ ದಾಖಲೆಯನ್ನು ಸರಿಗಟ್ಟುವಲ್ಲಿ ಟೀಮ್ ಇಂಡಿಯಾ ಯಶಸ್ವಿಯಾಗಿದೆ. ಅಂದರೆ ಟಿ20 ವಿಶ್ವಕಪ್ನಲ್ಲಿ ಅತೀ ಹೆಚ್ಚು ಬಾರಿ ಸೆಮಿಫೈನಲ್ನಲ್ಲಿ ಕಾಣಿಸಿಕೊಂಡ ತಂಡವೆಂಬ ವಿಶ್ವ ದಾಖಲೆ ಪಾಕಿಸ್ತಾನದ ಹೆಸರಿನಲ್ಲಿತ್ತು.

ಪಾಕಿಸ್ತಾನ್ ತಂಡವು 2007, 2009, 2010, 2012, 2021 ಮತ್ತು 2022 ರ ಟಿ20 ವಿಶ್ವಕಪ್ನಲ್ಲಿ ಸೆಮಿಫೈನಲ್ ಪಂದ್ಯವಾಡುವ ಮೂಲಕ ಈ ವಿಶ್ವ ದಾಖಲೆ ನಿರ್ಮಿಸಿದ್ದರು. ಅಂದರೆ ಪಾಕ್ ಪಡೆ ಟಿ20 ವಿಶ್ವಕಪ್ನಲ್ಲಿ 6 ಬಾರಿ ಸೆಮಿಫೈನಲ್ ಪಂದ್ಯಗಳನ್ನಾಡಿದೆ.

ಇದೀಗ 6ನೇ ಬಾರಿಗೆ ಸೆಮಿಫೈನಲ್ಗೇರುವ ಮೂಲಕ ಟೀಮ್ ಇಂಡಿಯಾ ಪಾಕಿಸ್ತಾನ್ ತಂಡದ ವಿಶ್ವ ದಾಖಲೆಯನ್ನು ಸರಿಗಟ್ಟಿದೆ. ಭಾರತ ತಂಡವು 2007, 2014, 2016, 2022, 2024 ಮತ್ತು 2026 ರ ಟಿ20 ವಿಶ್ವಕಪ್ನಲ್ಲಿ ಸೆಮಿಫೈನಲ್ ಹಂತಕ್ಕೇರಿದೆ. ಈ ಮೂಲಕ ಟಿ20 ವಿಶ್ವಕಪ್ ಇತಿಹಾಸದಲ್ಲೇ ಅತ್ಯಧಿಕ ಬಾರಿ ಸೆಮಿಫೈನಲ್ ರೌಂಡ್ನಲ್ಲಿ ಕಾಣಿಸಿಕೊಂಡ ತಂಡವೆಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.