
ಭಾನುವಾರ ರಾಂಚಿಯಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ದಕ್ಷಿಣ ಆಪ್ರಿಕಾ ತಂಡವನ್ನು 17 ರನ್ಗಳಿಂದ ಮಣಿಸಿದ ಟೀಂ ಇಂಡಿಯಾ ಗೆಲುವಿನ ಆರಂಭ ಪಡೆದುಕೊಂಡಿದೆ. ತಂಡದ ಈ ಗೆಲುವಿನ ವಿರಾಟ್ ಕೊಹ್ಲಿ ಅವರ ಶತಕ ಹಾಗೂ ಕುಲ್ದೀಪ್ ಯಾದವ್ ಮತ್ತು ಹರ್ಷಿತ್ ರಾಣಾ ಅವರ ಮಾರಕ ದಾಳಿ ಪ್ರಮುಖ ಕಾರಣವಾಗಿತ್ತು. ಈ ಮೂವರ ಜೊತೆಗೆ ಇವರಿಬ್ಬರ ಆಟವೂ ಪ್ರಮುಖ ಕೊಡುಗೆ ನೀಡಿತು ಎಂದು ಮಾಜಿ ಆಯ್ಕೆದಾರ ಕೃಷ್ಣಮಾಚಾರಿ ಶ್ರೀಕಾಂತ್ ಅಭಿಪ್ರಾಯಪಟ್ಟಿದ್ದಾರೆ.

ಮೊದಲ ಏಕದಿನ ಪಂದ್ಯ ಮುಗಿದ ಬಳಿಕ ಮಾತನಾಡಿರುವ 1983 ವಿಶ್ವಕಪ್ ಗೆದ್ದ ತಂಡದ ಭಾಗವಾಗಿದ್ದ ಕೃಷ್ಣಮಾಚಾರಿ ಶ್ರೀಕಾಂತ್, ವಿರಾಟ್ ಕೊಹ್ಲಿ ಅವರ ಶತಕವು ಕೆಎಲ್ ರಾಹುಲ್ ಮತ್ತು ರವೀಂದ್ರ ಜಡೇಜಾ ಅವರ ಕಠಿಣ ಪರಿಶ್ರಮವನ್ನು ಮರೆಮಾಡಿದೆ. ಇಬ್ಬರಿಗೂ ಅರ್ಹವಾದ ಪ್ರಶಂಸೆ ಸಿಗಲಿಲ್ಲ ಎಂದಿದ್ದಾರೆ.

ಈ ಪಂದ್ಯದಲ್ಲಿ ಆರನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿದ ಕೆ.ಎಲ್. ರಾಹುಲ್ ಅದ್ಭುತ ಅರ್ಧಶತಕ ಬಾರಿಸಿದ್ದು ಮಾತ್ರವಲ್ಲದೆ ರವೀಂದ್ರ ಜಡೇಜಾ ಅವರೊಂದಿಗೆ ಆರನೇ ವಿಕೆಟ್‌ಗೆ 36 ಎಸೆತಗಳಲ್ಲಿ 65 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಾಹುಲ್ 60 ರನ್ ಗಳಿಸಿದರೆ, ಜಡೇಜಾ 32 ರನ್ ಗಳಿಸಿದರು. ಇವರಿಬ್ಬರ ಜೊತೆಯಾಟದಿಂದಾಗಿ ಭಾರತದ ಸ್ಕೋರ್ 300 ರ ಗಡಿ ದಾಟಿತು.

ಇವರಿಬ್ಬರ ಆಟವನ್ನು ಹೊಗಳಿರುವ ಕೃಷ್ಣಮಾಚಾರಿ ಶ್ರೀಕಾಂತ್, ‘ರಾಹುಲ್ ಮತ್ತು ಜಡೇಜಾ ಅವರ ಇನ್ನಿಂಗ್ಸ್ ಗಮನಕ್ಕೆ ಬರಲಿಲ್ಲ. ಅವರು ವಾಸ್ತವವಾಗಿ ಬೇರೆಯದೇ ಮಟ್ಟದಲ್ಲಿ ಆಡಿದರು. ಕೆಎಲ್ ರಾಹುಲ್ ಮತ್ತು ಜಡೇಜಾ ನಡುವಿನ ಕೊನೆಯ ಪಾಲುದಾರಿಕೆ ಅದ್ಭುತವಾಗಿತ್ತು ಆದರೆ ಅದು ಗಮನಕ್ಕೆ ಬರಲಿಲ್ಲ. ಇದು ನಿರ್ಣಾಯಕ ಅಂಶವಾಗಿತ್ತು ಮತ್ತು ಇಬ್ಬರೂ, ಪಾಲುದಾರಿಕೆಯಲ್ಲಿ ಅವರ ಸ್ಟ್ರೈಕ್ ರೇಟ್‌ಗಳನ್ನು ಪರಿಗಣಿಸಿ, ಬೌಲರ್ಗಳು ಲಯ ಕಳೆದುಕೊಳ್ಳುವಂತೆ ಮಾಡಿದರು. ಆದರೆ ವಿರಾಟ್ ಕೊಹ್ಲಿಯ ಇನ್ನಿಂಗ್ಸ್ ಎಲ್ಲವನ್ನೂ ಮರೆಮಾಚಿತು. ಇವರಿಬ್ಬರು ಯಾವುದೇ ಶಬ್ದ ಮಾಡದೆ ಸದ್ದಿಲ್ಲದೆ ಕೆಲಸ ಮಾಡಿದರು ಎಂದಿದ್ದಾರೆ.

ಇದರ ಜೊತೆಗೆ ವಾಷಿಂಗ್ಟನ್ ಸುಂದರ್ ಅವರನ್ನು 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಕಳುಹಿಸುವ ನಿರ್ಧಾರವನ್ನು ಪ್ರಶ್ನಿಸಿದ ಶ್ರೀಕಾಂತ್, ‘ವಾಷಿಂಗ್ಟನ್ ಸುಂದರ್ ಅವರಿಗಿಂತ ಮುಂದೆ ಹೋಗುತ್ತಾರೋ ಇಲ್ಲವೋ ಗೊತ್ತಿಲ್ಲ. ಕೆಎಲ್ ರಾಹುಲ್ ಬ್ಯಾಟಿಂಗ್ ಕ್ರಮಾಂಕದಲ್ಲಿ ಮೇಲೆ ಬಂದಿದ್ದರೆ, ಭಾರತಕ್ಕೆ ಉತ್ತಮವಾಗುತ್ತಿತ್ತು. ಅವರು ಎಂದಿಗೂ 5ನೇ ಕ್ರಮಾಂಕಕ್ಕಿಂತ ಕೆಳಗಿಳಿಯಬಾರದು. ಅವರು 4 ಅಥವಾ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕು. 5ನೇ ಕ್ರಮಾಂಕದಲ್ಲಿ ಬರುವ ಬದಲು, ವಾಷಿಂಗ್ಟನ್ ಸುಂದರ್ ಫಿನಿಷರ್ ಆಗಿ ಆಡಬಹುದು ಎಂದಿದ್ದಾರೆ.
Published On - 10:30 pm, Mon, 1 December 25