
ಟೀಂ ಇಂಡಿಯಾದ ಆಸ್ಟ್ರೇಲಿಯಾ ಪ್ರವಾಸ ಸೋಲಿನೊಂದಿಗೆ ಪ್ರಾರಂಭವಾಗಿದೆ. ಉಭಯ ತಂಡಗಳ ನಡುವೆ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ ಹೀನಾಯ ಸೋಲು ಅನುಭವಿಸಿತು. ಇದರೊಂದಿಗೆ 438 ದಿನಗಳ ನಂತರ ಏಕದಿನ ಕ್ರಿಕೆಟ್‌ನಲ್ಲಿ ಭಾರತದ ಆಳ್ವಿಕೆ ಕೊನೆಗೊಂಡಿದೆ. ಇತ್ತ ಶುಭ್‌ಮನ್ ಗಿಲ್ ಏಕದಿನ ನಾಯಕನಾಗಿ ತಮ್ಮ ಮೊದಲ ಪಂದ್ಯದಲ್ಲೇ ಸೋಲನ್ನು ಅನುಭವಿಸಬೇಕಾಗಿ ಬಂದಿದೆ.

ಪರ್ತ್‌ನಲ್ಲಿ ನಡೆದ ಎರಡೂ ತಂಡಗಳ ನಡುವಿನ ಪಂದ್ಯಕ್ಕೆ ಮಳೆಯಿಂದ ಸಾಕಷ್ಟು ಭಾರಿ ಅಡಚಣೆಯುಂಟಾಯಿತು. ಹೀಗಾಗಿ ಪಂದ್ಯವನ್ನು 26 ಓವರ್‌ಗಳಿಗೆ ನಿಗದಿಪಡಿಸಲಾಯಿತು. ಆದಾಗ್ಯೂ, ಟೀಂ ಇಂಡಿಯಾ ಬ್ಯಾಟಿಂಗ್ ಪ್ರಾರಂಭಿಸಿದಾಗ ಪಂದ್ಯವನ್ನು 50 ಓವರ್‌ಗಳಿಗೆ ನಿಗದಿಪಡಿಸಲಾಯಿತು. ಆದರೆ ಆ ಬಳಿಕ ಮಳೆಯಿಂದಾಗಿ ಓವರ್‌ಗಳ ಸಂಖ್ಯೆಯನ್ನು ಕಡಿಮೆ ಮಾಡಿದ್ದರಿಂದ ಭಾರತ ತಂಡಕ್ಕೆ ಹಿನ್ನಡೆ ಉಂಟಾಯಿತು.

ಪರಿಣಾಮವಾಗಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 26 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 136 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾಕ್ಕೆ ಡಕ್ವರ್ತ್-ಲೂಯಿಸ್ ವಿಧಾನದಡಿಯಲ್ಲಿ 131 ರನ್‌ಗಳ ಗುರಿಯನ್ನು ನಿಗದಿಪಡಿಸಲಾಯಿತು. ಅಂತಿಮವಾಗಿ ಆಸ್ಟ್ರೇಲಿಯಾ ಕೇವಲ 3 ವಿಕೆಟ್‌ಗಳ ನಷ್ಟಕ್ಕೆ ಜಯದ ನಗೆ ಬೀರಿತು.

ಈ ಸೋಲಿನೊಂದಿಗೆ ಭಾರತ ತಂಡವು 437 ದಿನಗಳ ನಂತರ ಏಕದಿನ ಮಾದರಿಯಲ್ಲಿ ತನ್ನ ಮೊದಲ ಸೋಲನ್ನು ಅನುಭವಿಸ ಬೇಕಾಯಿತು. ಟೀಂ ಇಂಡಿಯಾ ಈ ಹಿಂದೆ ಏಕದಿನ ಕ್ರಿಕೆಟ್‌ನಲ್ಲಿ 2024 ರ ಆಗಸ್ಟ್ 4 ರಂದು ನಡೆದಿದ್ದ ಶ್ರೀಲಂಕಾ ವಿರುದ್ಧ ಪಂದ್ಯದಲ್ಲಿ ಕೊನೆಯ ಬಾರಿಗೆ ಸೋತಿತ್ತು. ಆ ಬಳಿಕ ಜಯದ ಹಾದಿಗೆ ಮರಳಿದ್ದ ಭಾರತ ತಂಡ ತನ್ನ ಅಜೇಯ ಓಟವನ್ನು ಮುಂದುವರೆಸಿತ್ತು.

ಲಂಕಾ ವಿರುದ್ಧದ ಸೋಲಿನ ಬಳಿಕ, ಇಂಗ್ಲೆಂಡ್ ತಂಡವನ್ನು ಎದುರಿಸಿದ್ದ ಭಾರತ, ಆಡಿದ ಮೂರು ಪಂದ್ಯಗಳನ್ನು ಗೆದ್ದುಕೊಂಡಿತ್ತು. ನಂತರ ಚಾಂಪಿಯನ್ಸ್ ಟ್ರೋಫಿಯಲ್ಲಿ ಐದಕ್ಕೆ ಐದು ಪಂದ್ಯಗಳನ್ನು ಗೆದ್ದಿತ್ತು. ಹಾಗೆಯೇ ಭಾರತ ಒಂದೇ ಒಂದು ಪಂದ್ಯವನ್ನು ಸೋಲದೆ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದುಕೊಂಡಿತು. ಆದರೆ ಈಗ ಆಸ್ಟ್ರೇಲಿಯಾ ವಿರುದ್ಧದ ಪಂದ್ಯವನ್ನು ಸೋಲುವ ಮೂಲಕ ಭಾರತದ ಗೆಲುವಿನ ಸರಣಿ ಕೊನೆಗೊಂಡಿದೆ.