2 ವರ್ಷಗಳ ಬಳಿಕ ಮತ್ತೆ 10 ಓವರ್ಗಳಲ್ಲಿ ಮುಗ್ಗರಿಸಿದ ಟೀಮ್ ಇಂಡಿಯಾ
India vs Australia ODI: ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಸರಣಿ ಶುರುವಾಗಿದೆ. ಪರ್ತ್ನಲ್ಲಿ ನಡೆಯುತ್ತಿರುವ ಪ್ರಥಮ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಗಿದೆ. ಅಲ್ಲದೆ 11.5 ಓವರ್ಗಳ ಮುಕ್ತಾಯದ ವೇಳೆಗೆ ಭಾರತ ತಂಡವು 3 ವಿಕೆಟ್ ಕಳೆದುಕೊಂಡು ಕೇವಲ 37 ರನ್ ಮಾತ್ರ ಕಲೆಹಾಕಿದೆ.
Updated on: Oct 19, 2025 | 10:55 AM

ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡವು ನೀರಸ ಆರಂಭ ಪಡೆದುಕೊಂಡಿದೆ. ಪರ್ತ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಮಿಚೆಲ್ ಮಾರ್ಷ್ ಟೀಮ್ ಇಂಡಿಯಾವನ್ನು ಬ್ಯಾಟಿಂಗ್ಗೆ ಆಹ್ವಾನಿಸಿದ್ದರು.

ಅದರಂತೆ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಆರಂಭಿಕನಾಗಿ ಕಣಕ್ಕಿಳಿದ ಅನುಭವಿ ದಾಂಡಿಗ ರೋಹಿತ್ ಶರ್ಮಾ ಕೇವಲ 8 ರನ್ಗಳಿಗೆ ಬಲಗೈ ವೇಗಿ ಜೋಶ್ ಹೇಝಲ್ವುಡ್ಗೆ ವಿಕೆಟ್ ಒಪ್ಪಿಸಿದರು.

ಹಿಟ್ಮ್ಯಾನ್ ನಿರ್ಗಮನದ ಬಳಿಕ ಕ್ರೀಸ್ಗೆ ಆಗಮಿಸಿದ ವಿರಾಟ್ ಕೊಹ್ಲಿ 8 ಎಸೆತಗಳನ್ನು ಎದುರಿಸಿದರೂ ಒಂದೇ ಒಂದು ರನ್ಗಳಿಸಲು ಸಾಧ್ಯವಾಗಿಲ್ಲ. ಅಲ್ಲದೆ ಮಿಚೆಲ್ ಸ್ಟಾರ್ಕ್ ಎಸೆತದಲ್ಲಿ ಕೂಪರ್ ಕೊನೊಲಿಗೆ ಕ್ಯಾಚ್ ನೀಡಿ ಶೂನ್ಯದೊಂದಿಗೆ ಹಿಂತಿರುಗಿದರು.

ವಿರಾಟ್ ಕೊಹ್ಲಿಯ ನಿರ್ಗಮನದ ಬೆನ್ನಲ್ಲೇ ನಾಯಕ ಶುಭ್ಮನ್ ಗಿಲ್ (10) ವೇಗಿ ನಾಥನ್ ಎಲ್ಲಿಸ್ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದರು. ಪರಿಣಾಮ ಟೀಮ್ ಇಂಡಿಯಾ 8.1 ಓವರ್ಗಳಲ್ಲಿ ಕೇವಲ 25 ರನ್ಗಳಿಸಿ 3 ವಿಕೆಟ್ ಕಳೆದುಕೊಂಡಿತು. ಅಲ್ಲದೆ ಮೊದಲ 10 ಓವರ್ಗಳಲ್ಲಿ ಗಳಿಸಿದ್ದು ಕೇವಲ 27 ರನ್ಗಳು ಮಾತ್ರ.

ಅಂದರೆ 2023ರ ಬಳಿಕ ಟೀಮ್ ಇಂಡಿಯಾ ಇದೇ ಮೊದಲ ಬಾರಿಗೆ ಅತ್ಯಂತ ಕಳಪೆ ಆರಂಭ ಪಡೆದುಕೊಂಡಿದೆ. ಇದಕ್ಕೂ ಮುನ್ನ 2023 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಪವರ್ಪ್ಲೇನಲ್ಲಿ 27 ರನ್ಗಳಿಸಿ ಕಳಪೆ ಪ್ರದರ್ಶನ ನೀಡಿತ್ತು. ಇದೀಗ ಮತ್ತೊಮ್ಮೆ ಆಸ್ಟ್ರೇಲಿಯಾ ವಿರುದ್ಧವೇ 10 ಓವರ್ಗಳಲ್ಲಿ ಕೇವಲ 27 ರನ್ಗಳಿಸಿ ಕಳಪೆ ಆರಂಭ ಪಡೆದುಕೊಂಡಿದೆ.

ಇನ್ನು ಏಕದಿನ ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾ ಮೊದಲ 10 ಓವರ್ಗಳಲ್ಲಿ ಅತೀ ಕಡಿಮೆ ರನ್ ಕಲೆಹಾಕಿದ್ದು ಶ್ರೀಲಂಕಾ ವಿರುದ್ಧ. 2017 ರಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಭಾರತ ತಂಡವು ಪವರ್ಪ್ಲೇನಲ್ಲಿ ಕೇವಲ 17 ರನ್ಗಳಿಸಿ ಅತ್ಯಂತ ಕಳಪೆ ದಾಖಲೆ ಬರೆದಿತ್ತು. ಇದೀಗ ಆಸ್ಟ್ರೇಲಿಯಾ ಪಿಚ್ನಲ್ಲೂ ಟೀಮ್ ಇಂಡಿಯಾ ಬಿರುಸಿನ ಆರಂಭ ಪಡೆಯುವಲ್ಲಿ ವಿಫಲವಾಗಿದೆ.
