
ವೈಜಾಗ್‌ನ ಡಾ. ವೈಎಸ್ ರಾಜಶೇಖರ ರೆಡ್ಟಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ಉತ್ತಮ ಮುನ್ನಡೆಯತ್ತ ದಾಪುಗಾಲಿಡುತ್ತಿದೆ. ಇಂಗ್ಲೆಂಡ್ ಅನ್ನು 253 ರನ್ಗಳಿಗೆ ಆಲೌಟ್ ಮಾಡಿ ಎರಡನೇ ಇನ್ನಿಂಗ್ಸ್ ಶುರು ಮಾಡಿರುವ ಭಾರತ ಎರಡನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 28 ರನ್ ಗಳಿಸಿತು. 171 ರನ್ಗಳ ಮುನ್ನಡೆಯೊಂದಿಗೆ ಇಂದು ಮೂರನೇ ದಿನದಾಟ ಆರಂಭಿಸಲಿದೆ.

ಮೊದಲ ದಿನದಾಟದ ಅಂತ್ಯಕ್ಕೆ ಜೈಸ್ವಾಲ್ 179 ರನ್ ಬಾರಿಸಿ ಭಾರತ ತಂಡ ಮೊತ್ತವನ್ನು 6 ವಿಕೆಟ್ ನಷ್ಟಕ್ಕೆ 336 ಕ್ಕೆ ತಂದು ನಿಲ್ಲಿಸಿದ್ದರು. ದ್ವಿತೀಯ ದಿನದಾಟದ ಆರಂಭದಲ್ಲೂ ಯಶಸ್ವಿ ಜೈಸ್ವಾಲ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಅಶ್ವಿನ್ ಜೊತೆಗೂಡಿ 2ನೇ ದಿನದಾಟ ಆರಂಭಿಸಿದ ಜೈಸ್ವಾಲ್ 277 ಎಸೆತಗಳಲ್ಲಿ ಭರ್ಜರಿ ಡಬಲ್ ಸೆಂಚುರಿ ಸಿಡಿಸಿದರು. ಇದರ ನಡುವೆ ಅಶ್ವಿನ್ (20) ವಿಕೆಟ್ ಒಪ್ಪಿಸಿದರು.

ಹೀಗಾಗಿ ಯಶಸ್ವಿ ಜೈಸ್ವಾಲ್ ಬಿರುಸಿನ ಬ್ಯಾಟಿಂಗ್ಗೆ ಮುಂದಾದರು. ಪರಿಣಾಮ ಜೇಮ್ಸ್ ಅ್ಯಂಡರ್ಸನ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನಿಸಿ ಜಾನಿ ಬೈರ್ಸ್ಟೋವ್ಗೆ ಕ್ಯಾಚ್ ನೀಡಿದರು. ಇದರೊಂದಿಗೆ 290 ಎಸೆತಗಳಲ್ಲಿ 7 ಸಿಕ್ಸ್ ಹಾಗೂ 19 ಫೋರ್ಗಳನ್ನೊಳಗೊಂಡ 209 ರನ್ಗಳ ಯಶಸ್ವಿ ಜೈಸ್ವಾಲ್ ಅವರ ಇನಿಂಗ್ಸ್ ಅಂತ್ಯಗೊಂಡಿತು.

ಆ ಬಳಿಕ ಬಂದ ಜಸ್ಪ್ರೀತ್ ಬುಮ್ರಾ 6 ರನ್ಗಳಿಸಿ ರೆಹಾನ್ ಅಹ್ಮದ್ ಎಸೆತದಲ್ಲಿ ಕ್ಯಾಚ್ ನೀಡಿದರು. ಇನ್ನು ಕೊನೆಯ ವಿಕೆಟ್ ಆಗಿ ಮುಖೇಶ್ ಕುಮಾರ್ (0) ಔಟಾದರು. ಈ ಮೂಲಕ ಟೀಮ್ ಇಂಡಿಯಾ ಮೊದಲ ಇನಿಂಗ್ಸ್ನಲ್ಲಿ ಬರೋಬ್ಬರಿ 396 ರನ್ ಕಲೆಹಾಕಿ ಆಲೌಟ್ ಆಯಿತು.

ಬಳಿಕ ತನ್ನ ಮೊದಲ ಇನ್ನಿಂಗ್ಸ್ ಶುರುಮಾಡಿದ ಇಂಗ್ಲೆಂಡ್ ತಂಡದಲ್ಲಿ ಮೊದಲ ವಿಕೆಟ್ಗೆ 59 ರನ್ಗಳ ಜೊತೆಯಾಟ ಕಂಡಿದ್ದು ಬಿಟ್ಟರೆ ಬಳಿಕ ವಿಕೆಟ್ ಕಳೆದುಕೊಂಡು ಸಾಗಿತು. ಆರಂಭಿಕ ಝಾಕ್ ಕ್ರೌಲಿ ಅತ್ಯಧಿಕ 76 ರನ್ಗಳ ಇನ್ನಿಂಗ್ಸ್ ಆಡಿದರೆ, ನಾಯಕ ಬೆನ್ ಸ್ಟೋಕ್ಸ್ 47 ರನ್ಗಳ ಕೊಡುಗೆ ನೀಡಿದರು.

ಬೌಲಿಂಗ್ನಲ್ಲಿ ಟೀಂ ಇಂಡಿಯಾ ಪರ ಮಿಂಚಿದ ಜಸ್ಪ್ರೀತ್ ಬುಮ್ರಾ ಬರೋಬ್ಬರಿ 6 ವಿಕೆಟ್ ಪಡೆದ ಸಾಧನೆ ಮಾಡಿದರು. ಕುಲ್ದೀಪ್ ಯಾದವ್ 3 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಅಕ್ಷರ್ ಪಟೇಲ್ 1 ವಿಕೆಟ್ ಕಿತ್ತರು. ಆರ್. ಅಶ್ವಿನ್ ಅವರಿಗೆ ಒಂದು ವಿಕೆಟ್ ಕೂಡ ಸಿಗಲಿಲ್ಲ.

ಭಾರತ ಎರಡನೇ ಇನ್ನಿಂಗ್ಸ್ನಲ್ಲಿ ದ್ವಿತೀಯ ದಿನದಾಟದ ಅಂತ್ಯಕ್ಕೆ 5 ಓವರ್ಗಳಲ್ಲಿ 28 ರನ್ ಗಳಿಸಿತು. ರೋಹಿತ್ ಶರ್ಮಾ13 ಹಾಗೂ ಜೈಸ್ವಾಲ್ 15 ರನ್ ಗಳಿಸಿ ಕ್ರೀಸ್ನಲ್ಲಿದ್ದಾರೆ. ಸತತ ವೈಫಲ್ಯ ಅನುಭವಿಸಿರುವ ಹಿಟ್ಮ್ಯಾನ್ ಇಂದು ಆಡಲೇ ಬೇಕಾದ ಒತ್ತಡಕ್ಕೆ ಸಿಲುಕಿದ್ದು, ಕನಿಷ್ಠ 350 ರನ್ಗಳ ಮುನ್ನಡೆ ಸಾಧಿಸಲೇಬೇಕಿದೆ.