Jasprit Bumrah: ಝಹೀರ್ ಖಾನ್ ದಾಖಲೆ ಸರಿಗಟ್ಟಿದ ಜಸ್ಪ್ರೀತ್ ಬುಮ್ರಾ
Jasprit Bumrah Records: ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 6 ವಿಕೆಟ್ ಕಬಳಿಸುವ ಮೂಲಕ ಟೀಮ್ ಇಂಡಿಯಾ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಈ ದಾಖಲೆಗಳೊಂದಿಗೆ ಮಾಜಿ ಎಡಗೈ ವೇಗಿ ಝಹೀರ್ ಖಾನ್ ಹೆಸರಿನಲ್ಲಿದ್ದ ರೆಕಾರ್ಡ್ವೊಂದನ್ನು ಬುಮ್ರಾ ಸರಿಗಟ್ಟಿದ್ದಾರೆ.
Updated on: Feb 04, 2024 | 9:11 AM

ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಆರು ವಿಕೆಟ್ ಕಬಳಿಸುವ ಮೂಲಕ ಜಸ್ಪ್ರೀತ್ ಬುಮ್ರಾ (Jasprit Bumrah) ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ವಿಶಾಖಪಟ್ಟಣಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ 15.5 ಓವರ್ಗಳನ್ನು ಬೌಲ್ ಮಾಡಿದ ಬುಮ್ರಾ 45 ರನ್ ನೀಡಿ 6 ವಿಕೆಟ್ ಪಡೆದರು.

ಈ ಆರು ವಿಕೆಟ್ಗಳೊಂದಿಗೆ ಟೆಸ್ಟ್ ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾ ಪರ ಅತ್ಯಧಿಕ ಬಾರಿ 5 ವಿಕೆಟ್ಗಳನ್ನು ಕಬಳಿಸಿದ ವೇಗಿಗಳ ಪಟ್ಟಿಯಲ್ಲಿ ಬುಮ್ರಾ ಮೂರನೇ ಸ್ಥಾನಕ್ಕೇರಿದರು. ಅದು ಕೂಡ ಮಾಜಿ ಎಡಗೈ ವೇಗಿ ಝಹೀರ್ ಖಾನ್ ದಾಖಲೆಯನ್ನು ಸರಿಗಟ್ಟುವ ಮೂಲಕ ಎಂಬುದು ವಿಶೇಷ.

ಟೀಮ್ ಇಂಡಿಯಾ ಪರ 165 ಟೆಸ್ಟ್ ಇನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿರುವ ಝಹೀರ್ ಖಾನ್ ಒಟ್ಟು 311 ವಿಕೆಟ್ಗಳನ್ನು ಕಬಳಿಸಿದ್ದಾರೆ. ಈ ವೇಳೆ 12 ಬಾರಿ 5 ವಿಕೆಟ್ಗಳ ಸಾಧನೆ ಮಾಡಿದ್ದರು. ಇದೀಗ ಈ ದಾಖಲೆಯನ್ನು ಬುಮ್ರಾ ಸರಿಗಟ್ಟಿದ್ದಾರೆ.

ಭಾರತದ ಪರ ಇದುವರೆಗೆ 64 ಟೆಸ್ಟ್ ಇನಿಂಗ್ಸ್ಗಳಲ್ಲಿ ಬೌಲ್ ಮಾಡಿರುವ ಬುಮ್ರಾ 152 ವಿಕೆಟ್ ಪಡೆದಿದ್ದಾರೆ. ಇದೇ ವೇಳೆ ಒಟ್ಟು 12 ಬಾರಿ 5 ವಿಕೆಟ್ಗಳ ಸಾಧನೆ ಮಾಡಿದ್ದಾರೆ. ಈ ಮೂಲಕ ಝಹೀರ್ ಖಾನ್ ಅವರ ದಾಖಲೆಯನ್ನು ಸರಿಗಟ್ಟಿ ಟೀಮ್ ಇಂಡಿಯಾ ಪರ ಅತ್ಯಧಿಕ ಬಾರಿ 5 ವಿಕೆಟ್ಗಳನ್ನು ಪಡೆದ 3ನೇ ವೇಗದ ಬೌಲರ್ ಎನಿಸಿಕೊಂಡಿದ್ದಾರೆ.

ಇನ್ನು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಮಾಜಿ ಆಲ್ರೌಂಡರ್ ಕಪಿಲ್ ದೇವ್. ಭಾರತದ ಪರ 227 ಇನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿರುವ ಕಪಿಲ್ ದೇವ್ 24 ಬಾರಿ 5 ವಿಕೆಟ್ಗಳ ಸಾಧನೆ ಮಾಡಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ ಪರ ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ಬಾರಿ 5 ವಿಕೆಟ್ ಕಬಳಿಸಿದ ವೇಗದ ಬೌಲರ್ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ.
