- Kannada News Photo gallery Cricket photos IND vs SA 3rd T20: India Dominates Early as Proteas Lose Quick Wickets
IND vs SA: W,W,W,W.. ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ದಕ್ಷಿಣ ಆಫ್ರಿಕಾ
IND vs SA 3rd T20: ಧರ್ಮಶಾಲಾದಲ್ಲಿ ನಡೆದ ಭಾರತ-ದಕ್ಷಿಣ ಆಫ್ರಿಕಾ ಮೂರನೇ T20 ಪಂದ್ಯದಲ್ಲಿ, ದಕ್ಷಿಣ ಆಫ್ರಿಕಾ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿ ಆರಂಭಿಕ ಆಘಾತ ಅನುಭವಿಸಿತು. ಅರ್ಷದೀಪ್ ಸಿಂಗ್ ಮತ್ತು ಹರ್ಷಿತ್ ರಾಣಾ ಅವರ ಉತ್ತಮ ಬೌಲಿಂಗ್ ದಾಳಿಯಿಂದಾಗಿ ಪವರ್‌ಪ್ಲೇನಲ್ಲಿ ಕ್ವಿಂಟನ್ ಡಿ ಕಾಕ್, ರೀಜಾ ಹೆಂಡ್ರಿಕ್ಸ್ ಸೇರಿದಂತೆ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿತು. ಭಾರತ ತಂಡ ಪಂದ್ಯದ ಮೇಲೆ ಪ್ರಾಬಲ್ಯ ಸಾಧಿಸಿತು.
Updated on: Dec 14, 2025 | 8:00 PM

ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುತ್ತಿರುವ ದಕ್ಷಿಣ ಆಫ್ರಿಕಾ ತಂಡ ಪವರ್‌ಪ್ಲೇನಲ್ಲಿಯೇ ಪ್ರಮುಖ 3 ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 25 ರನ್ಗಳನ್ನು ಕಲೆಹಾಕಿದೆ.

ಎಂದಿನಂತೆ ದಕ್ಷಿಣ ಆಫ್ರಿಕಾ ಪರ ಕ್ವಿಂಟನ್ ಡಿ ಕಾಕ್ ಹಾಗೂ ರೀಜಾ ಹೆಂಡ್ರಿಕ್ಸ್ ಇನ್ನಿಂಗ್ಸ್ ಆರಂಭಿಸಿದರು. ಇತ್ತ ಭಾರತದ ಪರ ವೇಗದ ಬೌಲರ್ ಅರ್ಷದೀಪ್ ಸಿಂಗ್ ಬೌಲಿಂಗ್ ಆರಂಭಿಸಿದರು. ಅರ್ಷದೀಪ್ ಬೌಲ್ ಮಾಡಿದ ಮೊದಲ ಓವರ್ನಲ್ಲೇ ದಕ್ಷಿಣ ಆಫ್ರಿಕಾದ ಆರಂಭಿಕ ರೀಜಾ ಹೆಂಡ್ರಿಕ್ಸ್ ಅವರನ್ನು ಎಲ್‌ಬಿಡಬ್ಲ್ಯೂ ಮಾಡುವ ಮೂಲಕ ಔಟ್ ಮಾಡಿದರು. ಅಂಪೈರ್ ನಾಟ್ ಔಟ್ ನೀಡಿದರೂ, ಭಾರತ ಯಶಸ್ವಿಯಾಗಿ ರಿವ್ಯೂ ತೆಗೆದುಕೊಂಡಿತು. ಹೆಂಡ್ರಿಕ್ಸ್ ರನ್ ಗಳಿಸದೆ ಔಟಾದರು.

ಆ ನಂತರ ದಾಳಿಗಿಳಿದ ಹರ್ಷಿತ್ ರಾಣಾ ಇನ್ನಿಂಗ್ಸ್ನ ಎರಡನೇ ಓವರ್ನಲ್ಲೇ ಆಫ್ರಿಕಾ ತಂಡಕ್ಕೆ ಸತತ ಎರಡನೇ ಶಾಕ್ ನೀಡಿದರು. ಕಳೆದ ಪಂದ್ಯದಲ್ಲಿ 90 ರನ್ಗಳ ಸ್ಫೋಟಕ ಇನ್ನಿಂಗ್ಸ್ ಆಡುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಮತ್ತೊಬ್ಬ ಆರಂಭಿಕ ಕ್ವಿಂಟನ್ ಡಿ ಕಾಕ್ ಅವರನ್ನು ಹರ್ಷಿತ್ ಔಟ್ ಮಾಡಿದರು. ಹಿಂದಿನ ಪಂದ್ಯದಲ್ಲಿ 90 ರನ್ ಗಳಿಸಿದ್ದ ಡಿ ಕಾಕ್, ಈ ಪಂದ್ಯದಲ್ಲಿ ಕೇವಲ ಒಂದು ರನ್ ಗಳಿಸಿ ಔಟಾದರು.

ಈ ಎರಡು ವಿಕೆಟ್ ಪತನದ ಬಳಿಕ ಬಂದ ಸ್ಫೋಟಕ ದಾಂಡಿಗ ಡೆವಾಲ್ಡ್ ಬ್ರೆವಿಸ್ ಕೂಡ ಈ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ಬ್ರೆವಿಸ್ ಇನ್ನಿಂಗ್ಸ್ಗೆ ಅಂತ್ಯ ಹಾಡುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ ವೇಗದ ಬೌಲರ್ ಹರ್ಷಿತ್ ರಾಣಾ, ರನ್ ಗಳಿಸಿದ್ದ ಡೆವಾಲ್ಡ್ ಬ್ರೆವಿಸ್ ಅವರನ್ನು ಬೌಲ್ಡ್ ಮಾಡಿದರು. ಹೀಗಾಗಿ ದಕ್ಷಿಣ ಆಫ್ರಿಕಾ ಕೇವಲ ಏಳು ರನ್ ಗಳಿಗೆ ಮೂರು ವಿಕೆಟ್ ಕಳೆದುಕೊಂಡಿತು.

ಈ ಮೂಲಕ ದಕ್ಷಿಣ ಆಫ್ರಿಕಾ ತಂಡ ಪವರ್‌ಪ್ಲೇನಲ್ಲಿ ತನ್ನ ಪ್ರಮುಖ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ಹೀಗಾಗಿ ತಂಡದ ನಾಯಕ ಐಡೆನ್ ಮಾರ್ಕ್ರಮ್ ಮೇಲೆ ಒತ್ತಡ ಹೆಚ್ಚಾಗಿದೆ. ಇದು ಮಾತ್ರವಲ್ಲದೆ ಪವರ್‌ಪ್ಲೇ ಮುಗಿದ ಬೆನ್ನಲ್ಲೇ ದಾಳಿಗಿಳಿದ ಹಾರ್ದಿಕ್ ಪಾಂಡ್ಯ ಟ್ರಿಸ್ಟಾನ್ ಸ್ಟಬ್ಸ್ ಅವರನ್ನು ಬಲಿ ಪಡೆದಿದ್ದಾರೆ. ಹೀಗಾಗಿ ಆಫ್ರಿಕಾ ತಂಡ 7 ಓವರ್ಗಳ ಅಂತ್ಯಕ್ಕೆ 30 ರನ್ಗಳನ್ನು ಕಲೆಹಾಕಿದ್ದು, ಪ್ರಮುಖ 4 ವಿಕೆಟ್‌ಗಳನ್ನು ಕಳೆದುಕೊಂಡಿದೆ.
