
Women’s ODI World Cup final 2025: ಮಹಿಳಾ ಏಕದಿನ ವಿಶ್ವಕಪ್ನ 13ನೇ ಫೈನಲ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಇಂದು (ನ.2) ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಭಾರತ ಮತ್ತು ಸೌತ್ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿದೆ.

ಈ ಪಂದ್ಯದಲ್ಲಿ ಯಾರೇ ಗೆದ್ದರೂ ಹೊಸ ಇತಿಹಾಸ ನಿರ್ಮಾಣವಾಗಲಿದೆ. ಏಕೆಂದರೆ ಸೌತ್ ಆಫ್ರಿಕಾ ತಂಡವು ಇದೇ ಮೊದಲ ಬಾರಿಗೆ ಮಹಿಳಾ ಏಕದಿನ ವಿಶ್ವಕಪ್ ಫೈನಲ್ ಆಡುತ್ತಿದೆ. ಅತ್ತ ಭಾರತ ತಂಡವು ಈ ಹಿಂದೆ 2 ಬಾರಿ ಫೈನಲ್ನಲ್ಲಿ ಕಣಕ್ಕಿಳಿದಿದ್ದರೂ ಪ್ರಶಸ್ತಿ ಗೆಲ್ಲಲಾಗಿರಲಿಲ್ಲ. ಹೀಗಾಗಿ ಇಂದಿನ ಮ್ಯಾಚ್ನಲ್ಲಿ ಗೆಲ್ಲುವ ತಂಡ ಚಾಂಪಿಯನ್ ಪಟ್ಟದೊಂದಿಗೆ ಹೊಸ ಇತಿಹಾಸ ನಿರ್ಮಿಸಲಿದೆ.

ಭಾರತ ಮತ್ತು ಸೌತ್ ಆಫ್ರಿಕಾ ಮಹಿಳಾ ತಂಡಗಳು ಏಕದಿನ ಕ್ರಿಕೆಟ್ನಲ್ಲಿ ಈವರೆಗೆ 34 ಬಾರಿ ಮುಖಾಮುಖಿಯಾಗಿವೆ. ಈ ವೇಳೆ ಟೀಮ್ ಇಂಡಿಯಾ 20 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಇನ್ನು ಸೌತ್ ಆಫ್ರಿಕಾ ತಂಡ ಗೆದ್ದಿರುವುದು 13 ಪಂದ್ಯಗಳಲ್ಲಿ ಮಾತ್ರ. ಇನ್ನೊಂದು ಪಂದ್ಯವು ಕಾರಣಾಂತರಗಳಿಂದ ರದ್ದಾಗಿತ್ತು.

ಅಂದರೆ ಅಂಕಿ ಅಂಶಗಳ ಪ್ರಕಾರ ಸೌತ್ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾ ಮೇಲುಗೈ ಹೊಂದಿದೆ. ಇದಾಗ್ಯೂ ಆಫ್ರಿಕಾ ಪಡೆಯಿಂದ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು. ಏಕೆಂದರೆ ಈ ಬಾರಿಯ ವಿಶ್ವಕಪ್ನ ಲೀಗ್ ಹಂತದ ಪಂದ್ಯದಲ್ಲಿ ಭಾರತ ತಂಡವನ್ನು 3 ವಿಕೆಟ್ಗಳಿಂದ ಮಣಿಸುವಲ್ಲಿ ಸೌತ್ ಆಫ್ರಿಕಾ ಯಶಸ್ವಿಯಾಗಿತ್ತು. ಹೀಗಾಗಿ ಇಂದಿನ ಮ್ಯಾಚ್ನಲ್ಲೂ ಸೌತ್ ಆಫ್ರಿಕಾ ಪಡೆಯಿಂದ ಅತ್ಯುತ್ತಮ ಪೈಪೋಟಿಯನ್ನು ಎದುರು ನೋಡಬಹುದು. ಈ ಪೈಪೋಟಿಯಲ್ಲಿ ಜಯಿಸಿ ಈ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವವರು ಯಾರು ಎಂಬುದನ್ನು ಕಾದು ನೋಡಬೇಕಿದೆ.

ಸೌತ್ ಆಫ್ರಿಕಾ ಏಕದಿನ ತಂಡ: ಲಾರಾ ವೊಲ್ವಾರ್ಡ್ಟ್ (ನಾಯಕಿ), ತಜ್ಮಿನ್ ಬ್ರಿಟ್ಸ್, ಅನ್ನೆಕೆ ಬಾಷ್, ಸುನೆ ಲೂಸ್, ಮರಿಝನ್ನೆ ಕಪ್, ಸಿನಾಲೊ ಜಾಫ್ತಾ (ವಿಕೆಟ್ ಕೀಪರ್), ಆನ್ನೆರಿ ಡೆರ್ಕ್‌ಸೆನ್, ಕ್ಲೋಯ್ ಟ್ರಯಾನ್, ನಾಡಿನ್ ಡಿ ಕ್ಲರ್ಕ್, ಅಯಾಬೊಂಗಾ ಖಾಕಾ, ನಾನ್‌ಕುಲುಲೆಕೊ ಮ್ಲಾಬಾ, ಮಸಾಬಟಾ ಸೆಗಾಸೊ, ಟುಮಿ ಸೆಖುಖುನ್ನೆ, ನೊಂಡುಮಿಸೊ ಶನ್ಗ್ಸೆ, ಕರಬೊ ಮೆಸೊ.

ಭಾರತ ಏಕದಿನ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಶಫಾಲಿ ವರ್ಮಾ, ಹರ್ಲೀನ್ ಡಿಯೋಲ್, ದೀಪ್ತಿ ಶರ್ಮಾ, ಜೆಮಿಮಾ ರೊಡ್ರಿಗಸ್, ರೇಣುಕಾ ಸಿಂಗ್ ಠಾಕೂರ್, ಅರುಂಧತಿ ರೆಡ್ಡಿ, ರಿಚಾ ಘೋಷ್ (ವಿಕೆಟ್ ಕೀಪರ್), ಕ್ರಾಂತಿ ಗೌಡ್, ಅಮನ್ಜೋತ್ ಕೌರ್, ರಾಧಾ ಯಾದವ್, ಶ್ರೀ ಚಾರಣಿ, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ಸ್ನೇಹ್ ರಾಣಾ.