- Kannada News Photo gallery Cricket photos IPL 2022: 5 top cricketers announce RETIREMENT before IPL 2022 Mega Auction
IPL 2022: ಐಪಿಎಲ್ ಮೆಗಾ ಹರಾಜಿಗೂ ಮುನ್ನ ನಿವೃತ್ತಿ ಘೋಷಿಸಿ ಶಾಕ್ ನೀಡಿದ 5 ಆಟಗಾರರು ಇವರೇ..!
IPL 2022 Mega Auction: ಇತ್ತ ಐಪಿಎಲ್ನಲ್ಲಿ ಮೆಗಾ ಹರಾಜು ಘೋಷಣೆಯಾದ ಬಳಿಕ ಐವರು ಸ್ಟಾರ್ ಆಟಗಾರರು ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ್ದಾರೆ. ಅದರಲ್ಲೂ ಕೆಲ ಆಟಗಾರರು ಎಲ್ಲಾ ಮಾದರಿ ಕ್ರಿಕೆಟ್ಗೆ ವಿದಾಯ ಹೇಳಿ ಅಚ್ಚರಿ ಮೂಡಿಸಿದ್ದಾರೆ.
Updated on: Jan 12, 2022 | 8:58 PM

ವಿಶ್ವದ ಶ್ರೀಮಂತ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 15 ಗಾಗಿ ಸಿದ್ದತೆಗಳು ಶುರುವಾಗಿದೆ. ಈ ಬಾರಿ ಒಟ್ಟು 10 ತಂಡಗಳಿದ್ದು, ಇದರಿಂದ ಹೆಚ್ಚುವರಿ 50 ಆಟಗಾರರಿಗೆ ಅವಕಾಶ ದೊರೆಯಲಿದೆ. ಮತ್ತೊಂದೆಡೆ ಮೆಗಾ ಹರಾಜು ನಡೆಯುತ್ತಿರುವುದರಿಂದ ಪ್ರತಿ ಆಟಗಾರರ ಖರೀದಿಗೂ ಪೈಪೋಟಿ ನಡೆಯಲಿದೆ. ಹೀಗಾಗಿ ಯಾರನ್ನು ಯಾವ ತಂಡ ಖರೀದಿಸಲಿದೆ ಎಂಬುದೇ ಕುತೂಹಲ.

ಆದರೆ ಇತ್ತ ಐಪಿಎಲ್ನಲ್ಲಿ ಮೆಗಾ ಹರಾಜು ಘೋಷಣೆಯಾದ ಬಳಿಕ ಐವರು ಸ್ಟಾರ್ ಆಟಗಾರರು ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ್ದಾರೆ. ಅದರಲ್ಲೂ ಕೆಲ ಆಟಗಾರರು ಎಲ್ಲಾ ಮಾದರಿ ಕ್ರಿಕೆಟ್ಗೆ ವಿದಾಯ ಹೇಳಿ ಅಚ್ಚರಿ ಮೂಡಿಸಿದ್ದಾರೆ. ಐಪಿಎಲ್ನಲ್ಲಿ ಸ್ಟಾರ್ ಆಟಗಾರರಾಗಿ ಗುರುತಿಸಿಕೊಂಡಿದ್ದ ಮೂವರು ಆಟಗಾರರು ಮೆಗಾ ಹರಾಜಿಗೂ ಮುನ್ನ ನಿವೃತ್ತಿ ಘೋಷಿಸಿರುವುದು ವಿಶೇಷ.

ಇನ್ನು ಮತ್ತೊರ್ವ ಆಟಗಾರ ಈ ಹಿಂದೆ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಕಾಣಿಸಿಕೊಂಡಿದ್ದರು. ಹೀಗಾಗಿ ಈ ಬಾರಿ ಮೆಗಾ ಹರಾಜಿನಲ್ಲಿ ಹೆಸರು ನೋಂದಾಯಿಸಿಕೊಳ್ಳುವ ಅವಕಾಶ ಕೂಡ ಇತ್ತು. ಇದಾಗ್ಯೂ ಮೆಗಾ ಹರಾಜಿಗೂ ಮುನ್ನ ನಿವೃತ್ತಿ ಘೋಷಿಸುವ ಮೂಲಕ ಕ್ರಿಕೆಟ್ ಅಂಗಳಕ್ಕೆ ವಿದಾಯ ಹೇಳಿದ್ದಾರೆ. ಹಾಗಿದ್ರೆ ಐಪಿಎಲ್ ಸೀಸನ್ 15 ಹರಾಜಿಗೂ ಮುನ್ನ ನಿವೃತ್ತಿ ಘೋಷಿಸಿದ ಆ ಐವರು ಆಟಗಾರರು ಯಾರೆಂದು ನೋಡೋಣ....

ಎಬಿ ಡಿವಿಲಿಯರ್ಸ್: ಐಪಿಎಲ್ನ ಅತ್ಯಂತ ಡೇಂಜರಸ್ ಬ್ಯಾಟರ್ಗಳಲ್ಲಿ ಒಬ್ಬರಾಗಿರುವ ಎಬಿ ಡಿವಿಲಿಯರ್ಸ್ ಈ ಬಾರಿ ಮೆಗಾ ಹರಾಜಿಗೂ ಮುನ್ನ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ. 37 ವರ್ಷವಾಗಿದ್ದರೂ ಎಬಿಡಿಗೆ ಐಪಿಎಲ್ನಲ್ಲಿ ಉತ್ತಮ ಬೇಡಿಕೆಯಿದೆ. ಅದರಲ್ಲೂ ಆರ್ಸಿಬಿ ತಂಡದ ಆಪತ್ಭಾಂಧವರಾಗಿ ಗುರುತಿಸಿಕೊಂಡಿದ್ದ ಎಬಿಡಿ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡಿದ್ದರೆ ಯಾವುದಾದರೂ ತಂಡ ಖರೀದಿಸುವುದರಲ್ಲಿ ಅನುಮಾನವೇ ಇಲ್ಲ. ಇದಾಗ್ಯೂ ಎಬಿಡಿ ದಿಢೀರ್ ನಿವೃತ್ತಿ ಘೋಷಿಸಿ ಅಭಿಮಾನಿಗಳಿಗೆ ಶಾಕ್ ನೀಡಿದ್ದರು.

ಹರ್ಭಜನ್ ಸಿಂಗ್: ಟೀಮ್ ಇಂಡಿಯಾ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಕೂಡ ಐಪಿಎಲ್ ಮೆಗಾ ಹರಾಜಿಗೂ ಮುನ್ನ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ್ದರು. ಕಳೆದ ಸೀಸನ್ನಲ್ಲಿ ಕೆಕೆಆರ್ ತಂಡವು ಭಜ್ಜಿಯನ್ನು 2 ಕೋಟಿ ರೂ. ನೀಡಿ ಖರೀದಿಸಿತ್ತು. ಈಗಲೂ ಅತ್ಯುತ್ಸಾಹದಿಂದ ಮೈದಾನದಲ್ಲಿ ಕಾಣಿಸಿಕೊಳ್ಳುವ ಹರ್ಭಜನ್ ಸಿಂಗ್ ಈ ಬಾರಿ ಕಡಿಮೆ ಮೊತ್ತದೊಂದಿಗೆ ಹರಾಜಿನಲ್ಲಿ ಕಾಣಿಸಿಕೊಂಡಿದ್ದರೂ 10 ತಂಡಗಳಲ್ಲಿ ಒಂದು ತಂಡವು ಖರೀದಿಗೆ ಮುಂದಾಗುತ್ತಿತ್ತು. ಇದಾಗ್ಯೂ ಭಜ್ಜಿ ಮೆಗಾ ಹರಾಜಿಗೂ ಮುನ್ನ ನಿವೃತ್ತಿ ನೀಡಿ ಅಚ್ಚರಿ ಮೂಡಿಸಿದರು.

ರಾಸ್ ಟೇಲರ್: ನ್ಯೂಜಿಲೆಂಡ್ನ ಸ್ಪೋಟಕ ಬ್ಯಾಟರ್ ರಾಸ್ ಟೇಲರ್ ಈ ಹಿಂದೆ ಆರ್ಸಿಬಿ ಹಾಗೂ ಡೆಲ್ಲಿ ಡೇರ್ ಡೇವಿಲ್ಸ್ (ಡೆಲ್ಲಿ ಕ್ಯಾಪಿಟಲ್ಸ್) ತಂಡಗಳ ಪರ ಆಡಿದ್ದರು. ಆದರೆ ಕಳೆದ ಕೆಲ ವರ್ಷಗಳಿಂದ ಅವರು ಐಪಿಎಲ್ನಲ್ಲಿ ಹೆಸರು ನೋಂದಣಿ ಮಾಡಿಕೊಂಡಿರಲಿಲ್ಲ. ಇದಾಗ್ಯೂ ಈ ಬಾರಿ 10 ತಂಡಗಳಿದ್ದ ಕಾರಣ ಟೇಲರ್ ಹೆಸರು ನೀಡಿ ಪರೀಕ್ಷೆ ನಡೆಸುವ ಅವಕಾಶವಿತ್ತು. ಇದಾಗ್ಯೂ ಅವರು ಮತ್ತೆ ಐಪಿಎಲ್ನಲ್ಲಿ ಕಾಣಿಸಿಕೊಳ್ಳಲು ಬಯಸಲಿಲ್ಲ ಎಂಬುದೇ ಅಚ್ಚರಿ.

ಕ್ರಿಸ್ ಮೋರಿಸ್: ಕಳೆದ ಸೀಸನ್ ಐಪಿಎಲ್ನಲ್ಲಿನ ಅತ್ಯಂತ ದುಬಾರಿ ಆಟಗಾರ ಕ್ರಿಸ್ ಮೋರಿಸ್ ಕೂಡ ಎಲ್ಲಾ ಮಾದರಿಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಆದರೆ ಇಲ್ಲಿ ಅಚ್ಚರಿ ಅಂಶವೆಂದರೆ ಕಳೆದ ಸೀಸನ್ನಲ್ಲಿ 16 ಕೋಟಿ ರೂ.ಗೂ ಅಧಿಕ ಮೊತ್ತಕ್ಕೆ ಹರಾಜಾಗಿದ್ದ ಮೋರಿಸ್ ಐಪಿಎಲ್ ಮೆಗಾ ಹರಾಜಿಗೂ ಮುನ್ನವೇ ನಿವೃತ್ತಿ ಘೋಷಿಸಿರುವುದು.

ಭಾನುಕಾ ರಾಜಪಕ್ಸೆ: ಶ್ರೀಲಂಕಾ ಆಟಗಾರ ಭಾನುಕಾ ರಾಜಪಕ್ಸೆ ಕೂಡ ಕೆಲ ದಿನಗಳ ಹಿಂದೆಯಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ್ದಾರೆ. 30 ವರ್ಷದ ರಾಜಪಕ್ಸೆ ಲೀಗ್ ಕ್ರಿಕೆಟ್ನಲ್ಲಿ ಮುಂದುವರೆಯಲಿದ್ದಾರಾ ಎಂಬುದರ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಇದಾಗ್ಯೂ ಲಂಕಾ ತಂಡದ ಉತ್ತಮ ಆಟಗಾರನಾಗಿ ಗುರುತಿಸಿಕೊಂಡಿದ್ದ ರಾಜಪಕ್ಸೆ ಮೆಗಾ ಹರಾಜಿಗೂ ಮುನ್ನ ನಿವೃತ್ತಿ ಘೋಷಿಸಿರುವುದೇ ಅಚ್ಚರಿ. ನಿವೃತ್ತಿ ಘೋಷಿಸಿದ ಬಳಿಕ ಐಪಿಎಲ್ನಲ್ಲಿ ಹೆಸರು ನೀಡಿದರೂ ಅದು ಭಾನುಕಾ ರಾಜಪಕ್ಸೆಗೆ ಹಿನ್ನಡೆಯಾಗುವ ಸಾಧ್ಯತೆಯಿದೆ. ಏಕೆಂದರೆ ಐಪಿಎಲ್ ಫ್ರಾಂಚೈಸಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುವ ವಿದೇಶಿ ಆಟಗಾರರ ಖರೀದಿಗೆ ಹೆಚ್ಚಿನ ಆಸಕ್ತಿವಹಿಸುತ್ತಾರೆ.









