Updated on: Nov 27, 2021 | 10:24 PM
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 15 ರಿಟೈನ್ ಪ್ರಕ್ರಿಯೆ ಜೋರಾಗಿಯೇ ನಡೆಯುತ್ತಿದೆ. ಈ ಬಾರಿ ಹೊಸ ಎರಡು ತಂಡಗಳು ಸೇರ್ಪಡೆಯಾಗುತ್ತಿರುವ ಕಾರಣ ಎಲ್ಲಾ ಫ್ರಾಂಚೈಸಿಗಳು ಅಳೆದು ತೂಗಿ ಆಟಗಾರರನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ. ಅದರಂತೆ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಗರಿಷ್ಠ ನಾಲ್ವರು ಆಟಗಾರರನ್ನು ಉಳಿಸಿಕೊಳ್ಳುವುದು ಬಹುತೇಕ ಖಚಿತ ಎನ್ನಲಾಗಿದೆ.
ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಡೆ ಇನ್ನೂ ಕೂಡ ನಿಗೂಢವಾಗಿದೆ. ಇದಾಗ್ಯೂ ಆರ್ಸಿಬಿ ವಿರಾಟ್ ಕೊಹ್ಲಿ ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ ಅವರನ್ನು ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಆದರೆ ಆರ್ಸಿಬಿ ಉಳಿಸಿಕೊಳ್ಳುವ ಉಳಿದ ಆಟಗಾರರು ಯಾರು ಎಂಬ ಪ್ರಶ್ನೆ ಎಲ್ಲರಲ್ಲಿದೆ. ಇಂತಹದೊಂದು ಪ್ರಶ್ನೆಗೆ ಆರ್ಸಿಬಿ ಮಾಜಿ ನಾಯಕ ಡೇನಿಯಲ್ ವೆಟ್ಟೋರಿ ಉತ್ತರ ನೀಡಿದ್ದಾರೆ. ಅಷ್ಟೇ ಅಲ್ಲದೆ ಆರ್ಸಿಬಿ ತಂಡ ಉಳಿಸಿಕೊಳ್ಳಲೇಬೇಕಾದ ನಾಲ್ವರು ಆಟಗಾರರನ್ನೂ ಕೂಡ ಹೆಸರಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ವೆಟ್ಟೋರಿ, ಈ ಬಾರಿ ಎಬಿ ಡಿವಿಲಿಯರ್ಸ್ ತಂಡದಲ್ಲಿಲ್ಲ. ಎಬಿಡಿ ನಿವೃತ್ತಿ ಘೋಷಿಸಿರುವ ಕಾರಣ ಆರ್ಸಿಬಿಗೆ ರಿಟೈನ್ ಪ್ರಕ್ರಿಯೆ ಮತ್ತಷ್ಟು ಸುಲಭವಾಗಿದೆ. ಇಲ್ಲದಿದ್ದರೆ ಅವರಿಗೂ ಸ್ಥಾನ ನೀಡಲೇಬೇಕಿತ್ತು. ಆದರೀಗ ಅವರಿಲ್ಲದ ಕಾರಣ, ನಾಲ್ವರ ಆಯ್ಕೆ ಸುಲಭವಾಗಿದೆ ಎಂದು ತಿಳಿಸಿದ್ದಾರೆ.
ಅದರಂತೆ ಆರ್ಸಿಬಿ ತಂಡವು ಮೊದಲ ಆಯ್ಕೆಯಾಗಿ ವಿರಾಟ್ ಕೊಹ್ಲಿಯನ್ನು ಉಳಿಸಿಕೊಳ್ಳಲಿದೆ. ಅವರ ಜೊತೆ ಗ್ಲೆನ್ ಮ್ಯಾಕ್ಸ್ವೆಲ್ ಅವರನ್ನೂ ಕೂಡ ರಿಟೈನ್ ಮಾಡಿಕೊಳ್ಳಬೇಕು ಎಂದು ಡೇನಿಯಲ್ ವೆಟ್ಟೋರಿ ಹೇಳಿದ್ದಾರೆ.
ಇನ್ನು 3ನೇ ಆಟಗಾರನಾಗಿ ನನ್ನ ಪ್ರಕಾರ, ಯುಜುವೇಂದ್ರ ಚಹಲ್ ಅವರನ್ನು ಆಯ್ಕೆ ಮಾಡಬೇಕು. ಏಕೆಂದರೆ 2014 ರಿಂದ ಆರ್ಸಿಬಿ ಪರ ಅತ್ಯುತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಹೀಗಾಗಿ ಅವರನ್ನು ಉಳಿಸಿಕೊಳ್ಳುವುದು ಉತ್ತಮ ಆಯ್ಕೆ ಎಂದಿದ್ದಾರೆ ವೆಟ್ಟೋರಿ.
ಹಾಗೆಯೇ ನಾಲ್ಕನೇ ಆಯ್ಕೆಯಾಗಿ ಹರ್ಷಲ್ ಪಟೇಲ್ ಅವರನ್ನು ತಂಡದಲ್ಲಿರಿಸಿಕೊಳ್ಳುವುದು ಉತ್ತಮ ಎಂದು ಡೇನಿಯಲ್ ವೆಟ್ಟೋರಿ ತಿಳಿಸಿದ್ದಾರೆ. ಹರ್ಷಲ್ ಕಳೆದ ಸೀಸನ್ನಲ್ಲಿನ ಅತ್ಯಂತ ಯಶಸ್ವಿ ಬೌಲರ್. 32 ವಿಕೆಟ್ ಪಡೆದಿರುವ ಅವರನ್ನು ಆರ್ಸಿಬಿ ಉಳಿಸಿಕೊಳ್ಳುವುದು ಉತ್ತಮ ಆಯ್ಕೆ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ಡೇನಿಯಲ್ ವೆಟ್ಟೋರಿ ತಿಳಿಸಿದ್ದಾರೆ.