Updated on: Nov 27, 2021 | 7:06 PM
ಐಪಿಎಲ್ ಸೀಸನ್ 15 ಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಬ್ಬರನ್ನು ಮಾತ್ರ ಉಳಿಸಿಕೊಳ್ಳಲಿದೆ ಎಂದು ವರದಿಯಾಗಿದೆ. ಆರ್ಸಿಬಿ ಫ್ರಾಂಚೈಸಿ ಹೊಸ ತಂಡ ಕಟ್ಟುವ ಇರಾದೆಯಲ್ಲಿದ್ದು, ಹೀಗಾಗಿ ಇಬ್ಬರು ಸ್ಟಾರ್ ಆಟಗಾರರನ್ನು ಉಳಿಸಿ, ಉಳಿದ ಆಟಗಾರರನ್ನು ರಿಲೀಸ್ ಮಾಡಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಅದರಂತೆ ಆರ್ಸಿಬಿ ತಂಡವು ವಿರಾಟ್ ಕೊಹ್ಲಿಯನ್ನು ಮೊದಲ ಆಯ್ಕೆಯಾಗಿ ಉಳಿಸಿಕೊಳ್ಳಲಿದೆ. ತಂಡದ ಬ್ರಾಂಡ್ ವಾಲ್ಯೂ ಹೆಚ್ಚಿಸುವ ಆಟಗಾರನಾಗಿರುವ ಕೊಹ್ಲಿಯನ್ನು ಆರ್ಸಿಬಿ ಬ್ಯಾಟ್ಸ್ಮನ್ ಆಗಿ ತಂಡದಲ್ಲೇ ಇರಿಸಿಕೊಳ್ಳಲಿದ್ದಾರೆ. ಇನ್ನು ಆಲ್ರೌಂಡರ್ ಆಗಿ ವಿದೇಶಿ ಆಟಗಾರನನ್ನು ಉಳಿಸಿಕೊಳ್ಳಲು ನಿರ್ಧರಿಸಲಾಗಿದೆ. ಅದರಂತೆ ಗ್ಲೆನ್ ಮ್ಯಾಕ್ಸ್ವೆಲ್ ಅವರನ್ನು ರಿಟೈನ್ ಮಾಡಿಕೊಳ್ಳಲಿದೆ.
ಮ್ಯಾಕ್ಸ್ವೆಲ್ ಅವರನ್ನು ಕಳೆದ ಸೀಸನ್ನಲ್ಲಿ ಆರ್ಸಿಬಿ 14 ಕೋಟಿಗೂ ಅಧಿಕ ಮೊತ್ತಕ್ಕೆ ಖರೀದಿಸಿತ್ತು. ಒಂದು ವೇಳೆ ಈ ಬಾರಿ ಬಿಡುಗಡೆ ಮಾಡಿದರೆ ಮತ್ತೆ ಖರೀದಿಸಲು ಹೆಚ್ಚಿನ ಮೊತ್ತ ನೀಡಬೇಕಾಗುತ್ತದೆ. ಹೀಗಾಗಿ ಗ್ಲೆನ್ ಮ್ಯಾಕ್ಸ್ವೆಲ್ ಅವರನ್ನು ಆರ್ಸಿಬಿ ಫ್ರಾಂಚೈಸಿ ಮನವೊಲಿಸಿದ್ದು, ಅದರಂತೆ ಈ ಇಬ್ಬರು ಸ್ಟಾರ್ ಆಟಗಾರರನ್ನು ಉಳಿಸಿಕೊಳ್ಳಲು ಆರ್ಸಿಬಿ ನಿರ್ಧರಿಸಿದೆ ಎಂದು ವರದಿಯಾಗಿದೆ.
ಇನ್ನು ಆರ್ಸಿಬಿ ಉಳಿಸಿಕೊಳ್ಳಲಿರುವ 3ನೇ ಮತ್ತು 4ನೇ ಆಟಗಾರ ಯಾರೆಂಬುದರ ಯಾವುದೇ ಮಾಹಿತಿಯಿಲ್ಲ. ಹೀಗಾಗಿ ಆರ್ಸಿಬಿ ಈ ಇಬ್ಬರು ಸ್ಟಾರ್ ಆಟಗಾರರನ್ನು ಉಳಿಸಿ ಹೊಸ ತಂಡ ಕಟ್ಟುವ ಇರಾದೆಯಲ್ಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಅಷ್ಟೇ ಅಲ್ಲದೆ ಮುಂದಿನ ಸೀಸನ್ನಲ್ಲಿ ಯಾರನ್ನು ನಾಯಕನಾಗಿ ಆಯ್ಕೆ ಮಾಡಬೇಕು ಎಂಬುದರ ಬಗ್ಗೆ ಕೂಡ ಆರ್ಸಿಬಿ ಇನ್ನೂ ಕೂಡ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಸದ್ಯ ಇಬ್ಬರನ್ನು ಉಳಿಸಿ ಬಹುತೇಕ ಹೊಸ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಲು ಆರ್ಸಿಬಿ ಬಯಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಮುಂದಿನ ಸೀಸನ್ ಮೆಗಾ ಹರಾಜಿಗೂ ಮುನ್ನ ಹಳೆಯ ಫ್ರಾಂಚೈಸಿಗಳು 4 ಆಟಗಾರರನ್ನು ಉಳಿಸಿಕೊಳ್ಳಬಹುದು. ಇನ್ನು ಹೊಸ 2 ಫ್ರಾಂಚೈಸಿಗಳಿಗೆ 3 ಆಟಗಾರರನ್ನು ಆಯ್ಕೆ ಮಾಡುವ ಅವಕಾಶ ನೀಡಲಾಗುತ್ತದೆ. ಹೀಗೆ ಉಳಿಸಿಕೊಂಡ ಆಟಗಾರರ ಪಟ್ಟಿಯನ್ನು ನವೆಂಬರ್ 30ರೊಳಗೆ ಸಲ್ಲಿಸಬೇಕಾಗುತ್ತದೆ.