IPL 2022: ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ನಾಯಕ ಫಿಕ್ಸ್
IPL 2022 Rajasthan Royals: ಮುಂದಿನ ಸೀಸನ್ಗಾಗಿ ನಡೆಯಲಿರುವ ಮೆಗಾ ಹರಾಜಿಗಾಗಿ ಬಿಸಿಸಿಐ ಈಗಾಗಲೇ ರೂಪುರೇಷೆಗಳನ್ನು ಸಿದ್ದಪಡಿಸಿದೆ. ಅದರಂತೆ ಮುಂದಿನ ಸೀಸನ್ ಮೆಗಾ ಹರಾಜಿಗೂ ಮುನ್ನ ಹಳೆಯ 8 ಫ್ರಾಂಚೈಸಿಗಳು 4 ಆಟಗಾರರನ್ನು ಉಳಿಸಿಕೊಳ್ಳಬಹುದು.
Updated on: Nov 27, 2021 | 4:46 PM

ಐಪಿಎಲ್ ಸೀಸನ್ 15ಗಾಗಿ ರಿಟೆನ್ಶನ್ ಪ್ರಕ್ರಿಯೆ ಜೋರಾಗಿ ನಡೆಯುತ್ತಿದೆ. ಈಗಾಗಲೇ ಎಲ್ಲಾ ತಂಡಗಳು ಉಳಿಸಿಕೊಳ್ಳಬೇಕಾದ ಆಟಗಾರರ ಮನವೊಲಿಸುವಲ್ಲಿ ನಿರತರಾಗಿದ್ದಾರೆ. ಇತ್ತ ರಾಜಸ್ಥಾನ್ ರಾಯಲ್ಸ್ ತಂಡವು ಯುವ ಆಟಗಾರನನ್ನು ಉಳಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ.

ಹೌದು, ರಾಜಸ್ಥಾನ್ ತಂಡವು ಯುವ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಸಂಜು ಸ್ಯಾಮ್ಸನ್ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದೆ. ಕಳೆದ ಸೀಸನ್ನಲ್ಲಿ 8 ಕೋಟಿ ಪಡೆದಿದ್ದ ಸ್ಯಾಮ್ಸನ್ ಈ ಬಾರಿ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲು ಬಯಸಿದ್ದರು. ಆದರೀಗ 14 ಕೋಟಿಯೊಂದಿಗೆ ಸ್ಯಾಮ್ಸನ್ ಜೊತೆ ರಾಜಸ್ಥಾನ್ ಫ್ರಾಂಚೈಸಿ ಡೀಲ್ ಮಾಡಿಕೊಂಡಿದೆ ಎಂದು ವರದಿಯಾಗಿದೆ.

ಅದರಂತೆ ಮುಂದಿನ ಸೀಸನ್ನಲ್ಲೂ ಸಂಜು ಸ್ಯಾಮ್ಸನ್ ರಾಜಸ್ಥಾನ್ ರಾಯಲ್ಸ್ ಪರ ಆಡಲಿದ್ದಾರೆ. ಅಷ್ಟೇ ಅಲ್ಲದೆ ಅವರನ್ನೇ ನಾಯಕನಾಗಿ ಮುಂದುವರೆಸುವುದು ಕೂಡ ಖಚಿತ ಎಂದೇ ಹೇಳಬಹುದು. ಇದಾಗ್ಯೂ ರಾಜಸ್ಥಾನ್ ಉಳಿಸಿಕೊಳ್ಳಲಿರುವ ಉಳಿದ ಆಟಗಾರರು ಯಾರೆಂಬುದು ಇನ್ನೂ ಬಹಿರಂಗವಾಗಿಲ್ಲ.

ಈ ಪಟ್ಟಿಯಲ್ಲಿ ಜೋಸ್ ಬಟ್ಲರ್, ಜೋಫ್ರಾ ಆರ್ಚರ್, ಬೆನ್ ಸ್ಟೋಕ್ಸ್ ಹಾಗೂ ಯಶಸ್ವಿ ಜೈಸ್ವಾಲ್ ಹೆಸರುಗಳು ಮುಂಚೂಣಿಯಲ್ಲಿದ್ದು, ಇವರಲ್ಲಿ ಯಾರನ್ನು ರಿಟೈನ್ ಮಾಡಿಕೊಳ್ಳಲಿದ್ದಾರೆ ಕಾದು ನೋಡಬೇಕಿದೆ.

ಮುಂದಿನ ಸೀಸನ್ಗಾಗಿ ನಡೆಯಲಿರುವ ಮೆಗಾ ಹರಾಜಿಗಾಗಿ ಬಿಸಿಸಿಐ ಈಗಾಗಲೇ ರೂಪುರೇಷೆಗಳನ್ನು ಸಿದ್ದಪಡಿಸಿದೆ. ಅದರಂತೆ ಮುಂದಿನ ಸೀಸನ್ ಮೆಗಾ ಹರಾಜಿಗೂ ಮುನ್ನ ಹಳೆಯ 8 ಫ್ರಾಂಚೈಸಿಗಳು 4 ಆಟಗಾರರನ್ನು ಉಳಿಸಿಕೊಳ್ಳಬಹುದು.

ಇನ್ನು ಹೊಸ 2 ಫ್ರಾಂಚೈಸಿಗೆ 3 ಆಟಗಾರರನ್ನು ಆಯ್ಕೆ ಮಾಡುವ ಅವಕಾಶ ನೀಡಲಾಗುತ್ತದೆ. ಹೀಗೆ ಉಳಿಸಿಕೊಂಡ ಆಟಗಾರರ ಪಟ್ಟಿಯನ್ನು ನವೆಂಬರ್ 30ರೊಳಗೆ ಸಲ್ಲಿಸಬೇಕಾಗುತ್ತದೆ. ಆ ಬಳಿಕ ಹೊಸ ಫ್ರಾಂಚೈಸಿಗಳಿಗೆ ಆಟಗಾರರ ಆಯ್ಕೆಗೆ ಅವಕಾಶ ದೊರೆಯಲಿದೆ.
