Updated on: Jan 22, 2022 | 3:40 PM
ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿನ ಸಿದ್ಧತೆಗಳು ಅಂತಿಮ ಹಂತಕ್ಕೆ ತಲುಪಿದೆ. ಈಗಾಗಲೇ 10 ತಂಡಗಳು ಒಟ್ಟು 33 ಆಟಗಾರರನ್ನು ರಿಟೈನ್ ಮಾಡಿಕೊಂಡಿದೆ. ಅಲ್ಲದೆ ಮೆಗಾ ಹರಾಜಿಗಾಗಿ ಒಟ್ಟು 1,214 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಈ ಬಾರಿ ಎರಡು ಹೊಸ ತಂಡಗಳ ಸೇರ್ಪಡೆಯಿಂದಾಗಿ ಹರಾಜಿನಲ್ಲೂ ಭರ್ಜರಿ ಪೈಪೋಟಿ ಕಂಡು ಬರಲಿದೆ.
ಏಕೆಂದರೆ ಮುಂಬರುವ ಸೀಸನ್ನಲ್ಲಿ ಕಾಣಿಸಿಕೊಳ್ಳಲಿರುವ 10 ತಂಡಗಳಲ್ಲಿ 3 ತಂಡಗಳು ಇನ್ನೂ ಕೂಡ ನಾಯಕನನ್ನು ಆಯ್ಕೆ ಮಾಡಿಲ್ಲ. ಕಳೆದ ಸೀಸನ್ನಲ್ಲಿದ್ದ ನಾಯಕರುಗಳನ್ನು ಈ ಬಾರಿ ಫ್ರಾಂಚೈಸಿಗಳು ರಿಲೀಸ್ ಮಾಡಿತ್ತು. ಈ ಮೂಲಕ ಹೊಸ ತಂಡ ಕಟ್ಟುವ ಇರಾದೆಯಲ್ಲಿದೆ. ಹಾಗಿದ್ರೆ ಯಾವ ತಂಡ ನಾಯಕನ ಹುಡುಕಾಟದಲ್ಲಿದೆ ನೋಡೋಣ.
ಪಂಜಾಬ್ ಕಿಂಗ್ಸ್: ಕೆಎಲ್ ರಾಹುಲ್ ಪಂಜಾಬ್ ಕಿಂಗ್ಸ್ ತಂಡ ಬಿಟ್ಟು ಇದೀಗ ಹೊಸ ಫ್ರಾಂಚೈಸಿ ಲಕ್ನೋ ತಂಡದ ನಾಯಕರಾಗಿದ್ದಾರೆ. ಹೀಗಾಗಿ ಪಂಜಾಬ್ ಕಿಂಗ್ಸ್ ತಂಡವನ್ನು ಮುಂದಿನ ಸೀಸನ್ನಲ್ಲಿ ಹೊಸ ನಾಯಕ ಮುನ್ನಡೆಸುವುದು ಬಹುತೇಕ ಖಚಿತ. ಅಂತಹ ನಾಯಕನಿಗಾಗಿ ಪಂಜಾಬ್ ಕಿಂಗ್ಸ್ ಮೆಗಾ ಹರಾಜಿನಲ್ಲಿ ಭರ್ಜರಿ ಪೈಪೋಟಿ ನಡೆಸಲಿದೆ.
ಕೊಲ್ಕತ್ತಾ ನೈಟ್ ರೈಡರ್ಸ್: ಕೆಕೆಆರ್ ತಂಡದ ನಾಯಕನಾಗಿ ಇಯಾನ್ ಮೋರ್ಗನ್ ಯಶಸ್ವಿಯಾಗಿದ್ದಾರೆ. ಆದರೆ ತಂಡದ ಪ್ರದರ್ಶನದಲ್ಲಿ ಅವರ ಕೊಡುಗೆಯಿಲ್ಲ ಎಂಬ ಟೀಕೆಗಳು ಕಳೆದ ಸೀಸನ್ ವೇಳೆ ಜೋರಾಗಿ ಕೇಳಿ ಬಂದಿತ್ತು. ಅಂದರೆ ಕೆಕೆಆರ್ ತಂಡದಲ್ಲಿ ಮೋರ್ಗನ್ ಸಂಪೂರ್ಣ ವಿಫಲರಾಗಿರುವ ಕಾರಣ ಅವರನ್ನು ತಂಡದಿಂದ ಕೈಬಿಡಲಾಗಿದೆ. ಅದರಂತೆ ಕೆಕೆಆರ್ ತಂಡ ಕೂಡ ಮುಂದಿನ ಸೀಸನ್ನಲ್ಲಿ ಹೊಸ ನಾಯಕನೊಂದಿಗೆ ಕಣಕ್ಕಿಳಿಯಲಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಆರ್ಸಿಬಿ ತಂಡದ ನಾಯಕತ್ವಕ್ಕೆ ವಿರಾಟ್ ಕೊಹ್ಲಿ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಮುಂದಿನ ಸೀಸನ್ನಲ್ಲಿ ಆರ್ಸಿಬಿ ತಂಡವು ಹೊಸ ನಾಯಕನ ಆಯ್ಕೆ ಮಾಡಬೇಕಿದೆ. ಅದರಂತೆ ಐಪಿಎಲ್ ಸೀಸನ್ 15ನಲ್ಲಿ ಆರ್ಸಿಬಿ ತಂಡವನ್ನು ಹೊಸ ಕಪ್ತಾನ ಮುನ್ನಡೆಸಲಿದ್ದಾರೆ.
ಇನ್ನುಳಿದಂತೆ ಸಿಎಸ್ಕೆ ತಂಡವನ್ನು ಧೋನಿ, ಮುಂಬೈ ಇಂಡಿಯನ್ಸ್ ತಂಡವನ್ನು ರೋಹಿತ್ ಶರ್ಮಾ, ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ರಿಷಭ್ ಪಂತ್, ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಕೇನ್ ವಿಲಿಯಮ್ಸನ್, ರಾಜಸ್ಥಾನ್ ರಾಯಲ್ಸ್ ತಂಡವನ್ನು ಸಂಜು ಸ್ಯಾಮ್ಸನ್ ಮುನ್ನಡೆಸಲಿದ್ದಾರೆ.
ಹಾಗೆಯೇ ಹೊಸ ಫ್ರಾಂಚೈಸಿಗಳಾದ ಲಕ್ನೋ ತಂಡವನ್ನು ಕೆಎಲ್ ರಾಹುಲ್ ಹಾಗೂ ಅಹಮದಾಬಾದ್ ತಂಡವನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸಲಿದ್ದಾರೆ.