IPL 2022: ಹೊಸ ಜೆರ್ಸಿ ಅನಾವರಣಗೊಳಿಸಿದ SRH
SRH New Jersey 2022: ತಂಡದಲ್ಲಿ ನಾಯಕನಾಗಿ ಕೇನ್ ವಿಲಿಯಮ್ಸನ್, ಕಾಶ್ಮೀರದ ಯುವ ಕ್ರಿಕೆಟಿಗರಾದ ಅಬ್ದುಲ್ ಸಮದ್ ಹಾಗೂ ಉಮ್ರಾನ್ ಮಲಿಕ್ ಇದ್ದಾರೆ. ಇನ್ನು ಮುಖ್ಯ ಕೋಚ್ ಆಗಿ ಟಾಮ್ ಮೂಡಿ ಅವರನ್ನು ನೇಮಿಸಲಾಗಿದೆ.
Updated on: Feb 09, 2022 | 6:50 PM

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 15 ಮೆಗಾ ಹರಾಜಿಗೂ ಮುನ್ನ ಸನ್ರೈಸರ್ಸ್ ಹೈದಾರಾಬಾದ್ ತಂಡವು ತನ್ನ ಹೊಸ ಜೆರ್ಸಿಯನ್ನು ಅನಾವರಣಗೊಳಿಸಿದೆ. ಈ ಬಾರಿ ಕೂಡ ಈ ಹಿಂದಿನ ಬಣ್ಣಗಳನ್ನೇ ಮುಂದುವರೆಸಿದ್ದು, ಅದರಂತೆ ಕಿತ್ತಳೆ ಮತ್ತು ಕಪ್ಪು ಬಣ್ಣಗಳಲ್ಲಿ ಹೊಸ ಜೆರ್ಸಿಯನ್ನು ವಿನ್ಯಾಸಗೊಳಿಸಲಾಗಿದೆ.

ಆದರೆ ಕಳೆದ ಬಾರಿಯ ಜೆರ್ಸಿಗೆ ಹೋಲಿಸಿದರೆ ಈ ಬಾರಿ ಕಪ್ಪು ಬಣ್ಣವನ್ನು ಶೇಡ್ನಲ್ಲಿ ಬಳಸಲಾಗಿದೆ. ಅದರಂತೆ ತೋಳುಗಳ ಭಾಗದಲ್ಲಿ ಆರೆಂಜ್ ಮಿಶ್ರಿತ ಕಪ್ಪು ಬಣ್ಣಗಳನ್ನು ನೀಡಲಾಗಿದ್ದು, ಉಳಿದ ಭಾಗದಲ್ಲಿ ಆರೆಂಜ್ ಆರ್ಮಿಯ ಟ್ಯಾಗ್ ಲೈನ್ ಅನ್ನು ಉಳಿಸಿಕೊಳ್ಳಲು ಅದೇ ಬಣ್ಣವನ್ನು ಮುಂದುವರೆಸಲಾಗಿದೆ.

ಇನ್ನು ಈ ಬಾರಿ ಎಸ್‌ಆರ್‌ಹೆಚ್ ತಂಡದ ಪ್ರಾಯೋಜಕರು ಕೂಡ ಬದಲಾಗಿದ್ದು, ಅದರಂತೆ ಜೆರ್ಸಿಯ ಮುಂಭಾಗದಲ್ಲಿ ಕಾರ್ಸ್ 24 ಜಾಹೀರಾತು ಕಾಣಿಸಿಕೊಳ್ಳಲಿದೆ. ಸದ್ಯ ಮೆಗಾ ಹರಾಜಿನ ಸಿದ್ಧತೆಯಲ್ಲಿರುವ ಎಸ್‌ಆರ್‌ಹೆಚ್ ತಂಡವು ಈ ಬಾರಿ ಮೂವರು ಆಟಗಾರರನ್ನು ರಿಟೈನ್ ಮಾಡಿಕೊಂಡಿದೆ.

ಅದರಂತೆ ತಂಡದಲ್ಲಿ ನಾಯಕನಾಗಿ ಕೇನ್ ವಿಲಿಯಮ್ಸನ್, ಕಾಶ್ಮೀರದ ಯುವ ಕ್ರಿಕೆಟಿಗರಾದ ಅಬ್ದುಲ್ ಸಮದ್ ಹಾಗೂ ಉಮ್ರಾನ್ ಮಲಿಕ್ ಇದ್ದಾರೆ. ಇನ್ನು ಮುಖ್ಯ ಕೋಚ್ ಆಗಿ ಟಾಮ್ ಮೂಡಿ ಅವರನ್ನು ನೇಮಿಸಲಾಗಿದೆ. ಹಾಗೆಯೇ ಮುತ್ತಯ್ಯ ಮುರಳೀಧರನ್ ಸ್ಪಿನ್-ಬೌಲಿಂಗ್ ಕೋಚ್ ಆಗಿ ಉಳಿದಿದ್ದಾರೆ. ಬ್ರಿಯಾನ್ ಲಾರಾ ಬ್ಯಾಟಿಂಗ್ ಕೋಚ್ ಆಗಿ ನೇಮಕಗೊಂಡರೆ, ಡೇಲ್ ಸ್ಟೇನ್ ವೇಗದ ಬೌಲಿಂಗ್ ಕೋಚ್ ಮತ್ತು ಸೈಮನ್ ಕ್ಯಾಟಿಚ್ ಸಹಾಯಕ ಕೋಚ್ ಮತ್ತು ಹೇಮಂಗ್ ಬದಾನಿ ಫೀಲ್ಡಿಂಗ್ ಕೋಚ್ ಎಸ್‌ಆರ್‌ಹೆಚ್ ತಂಡದಲ್ಲಿದ್ದಾರೆ.

ಒಟ್ಟು 68 ಕೋಟಿ ರೂ. ನೊಂದಿಗೆ ಎಸ್‌ಆರ್‌ಹೆಚ್ ಫ್ರಾಂಚೈಸಿ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದು, ಈ ಮೂಲಕ ಸ್ಟಾರ್ ಆಟಗಾರರನ್ನು ಖರೀದಿಸಿ ಹೊಸ ತಂಡ ಕಟ್ಟುವ ಇರಾದೆಯಲ್ಲಿದೆ.



















