Updated on: May 17, 2022 | 5:02 PM
ಹಾಲ್ ಆಫ್ ಫೇಮ್...ಎಂದರೆ ಥಟ್ಟನೆ ಮನಸಿಗೆ ಬರುವ ಚಿತ್ರವೆಂದರೆ ಹಾಲಿವುಡ್ನ ವಾಕ್ ಆಫ್ ಫೇಮ್. ಮನರಂಜನಾ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದವರ ಹೆಸರುಗಳನ್ನು ಹಾಲಿವುಡ್ನ ಪ್ರಮುಖ ಪಾದಚಾರಿ ಮಾರ್ಗದಲ್ಲಿ ನಕ್ಷತ್ರಗಳ ರೂಪದಲ್ಲಿ ಕೆತ್ತಿಡಲಾಗಿದೆ. ಇದೇ ಮಾದರಿಯಲ್ಲಿ ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಕ್ರಿಕೆಟ್ನಲ್ಲಿ ಸಾಧನೆಗೈದ ಪ್ರಮುಖ ಆಟಗಾರರಿಗೆ 2009 ರಿಂದ ಹಾಲ್ ಆಫ್ ಫೇಮ್ ಪ್ರಶಸ್ತಿಯನ್ನು ನೀಡುತ್ತಾ ಬರುತ್ತಿದೆ.
ಇದೀಗ ಇದೇ ಮಾದರಿಯಲ್ಲಿ ಆರ್ಸಿಬಿ ಫ್ರಾಂಚೈಸಿ ಕೂಡ ತಂಡದ ಪರ ಆಡಿದ ಶ್ರೇಷ್ಠ ಆಟಗಾರರನ್ನು ಗೌರವಿಸಲು ಮುಂದಾಗಿದೆ. ಇದಕ್ಕೆ ಆರ್ಸಿಬಿ ಹಾಲ್ ಆಫ್ ಫೇಮ್ ಎಂಬ ಹೆಸರಿಡಲಾಗಿದೆ. ಈ ಗೌರವ ಪ್ರಶಸ್ತಿಯನ್ನು ಆರ್ಸಿಬಿ ಪರ ಆಡಿದ ಎಲ್ಲಾ ಆಟಗಾರರಿಗೆ ನೀಡಲಾಗುವುದಿಲ್ಲ. ಬದಲಾಗಿ ತಂಡದ ಪರ ಸರ್ವ ಶ್ರೇಷ್ಠ ಪ್ರದರ್ಶನ ನೀಡಿದ ಆಟಗಾರರಿಗೆ ಮಾತ್ರ ಸಲ್ಲುತ್ತದೆ. ಇದಕ್ಕಾಗಿ ಒಂದಷ್ಟು ಷರತ್ತುಗಳನ್ನು ಕೂಡ ಆರ್ಸಿಬಿ ರೂಪಿಸಿದೆ.
ಈ ಷರತ್ತುಗಳೆಂದರೆ, ಕನಿಷ್ಠ 3 ವರ್ಷಗಳ ಕಾಲ RCB ಪರ ಆಡಿರಬೇಕು. ಪ್ರಸ್ತುತ, ಅವರು ಐಪಿಎಲ್‌ನ ಯಾವುದೇ ತಂಡದ ಭಾಗವಾಗಿರಬಾರದು. ಮೈದಾನದಲ್ಲಿ ಮತ್ತು ಹೊರಗೆ RCB ಮೇಲೆ ಗಮನಾರ್ಹ ಪರಿಣಾಮ ಬೀರಬೇಕು. ಇಂತಹ ಸರ್ವ ಶ್ರೇಷ್ಠ ಆಟಗಾರರಿಗೆ ಮಾತ್ರ ಆರ್ಸಿಬಿ ಹಾಲ್ ಆಫ್ ಫೇಮ್ ಗೌರವ ನೀಡಲಿದೆ.
ಅದರಂತೆ ಆರ್ಸಿಬಿ ತಂಡದ ಮೊದಲ ಹಾಲ್ ಆಫ್ ಫೇಮ್ ಗೌರವಕ್ಕೆ ಎಬಿ ಡಿವಿಲಿಯರ್ಸ್ ಹಾಗೂ ಕ್ರಿಸ್ ಗೇಲ್ ಪಾತ್ರರಾಗಿದ್ದಾರೆ. ಎಬಿಡಿ ಆರ್ಸಿಬಿ ಪರ 11 ವರ್ಷಗಳ ಕಾಲ ಆಡಿದ್ದರೆ, ಕ್ರಿಸ್ ಗೇಲ್ 7 ವರ್ಷಗಳ ಕಾಲ ಬ್ಯಾಟ್ ಬೀಸಿದ್ದರು. ಅಷ್ಟೇ ಅಲ್ಲದೆ ಆರ್ಸಿಬಿ ತಂಡದ ಪ್ರಮುಖ ಆಟಗಾರರಾಗಿ ಗುರುತಿಸಿಕೊಂಡಿದ್ದ ಈ ಇಬ್ಬರು ಮಾಜಿ ಆಟಗಾರರಿಗೆ ಆರ್ಸಿಬಿ ತಂಡದ ಹಾಲ್ ಫೇಮ್ ಗೌರವ ನೀಡಲು ಮುಂದಾಗಿದೆ.
ಅದರಂತೆ ಮುಂದಿನ ವರ್ಷ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ವಿಶೇಷ ಕಾರ್ಯಕ್ರಮದಲ್ಲಿ ಎಬಿ ಡಿವಿಲಿಯರ್ಸ್ ಹಾಗೂ ಕ್ರಿಸ್ ಗೇಲ್ ಅವರಿಗೆ ಹಾಲ್ ಆಫ್ ಫೇಮ್ ಪ್ರಶಸ್ತಿ ನೀಡುವ ಮೂಲಕ ಗೌರವಿಸಲಾಗುತ್ತದೆ.